ಕೊಡಗನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ : ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಭರವಸೆ

08/08/2022

ಮಡಿಕೇರಿ ಆ.8 : ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶ, ಮನೆ ಹಾನಿ ಮತ್ತು ನಗರದ ಕಾಳಜಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬೆಸೂರು, ನಿರುಗುಂದ ಹಾಗೂ ಕೆಳಕೊಡ್ಲಿ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳನ್ನು ವೀಕ್ಷಿಸಿ ಸ್ಥಳದಲ್ಲಿಯೇ ಪರಿಹಾರದ ಚೆಕ್ ವಿತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಳೆಹಾನಿ ಪರಿಹಾರದ ವಿಚಾರದಲ್ಲಿ ಕೊಡಗನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು.
ಪರಿಹಾರ ವಿತರಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದ್ದ ಕಾರಣ ಈ ಬಾರಿ ತಾತ್ಕಾಲಿಕ ಪರಿಹಾರ ಘೋಷಿಸುವಾಗ ಕೊಡಗನ್ನು ಸೇರಿಸಿಲ್ಲ. ಈಗ ಬಿಡುಗಡೆ ಮಾಡಿರುವುದು ಶಾಶ್ವತ ಪರಿಹಾರವಲ್ಲ ಎಂದರು.
ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿ ಅವರ ಖಾತೆಯಲ್ಲಿ 35 ಕೋಟಿ ರೂ. ಹಣವಿದೆ. ಮುಂದಿನ ದಿನಗಳಲ್ಲಿ ಅನುದಾನದ ಅವಶ್ಯಕತೆ ಇದ್ದಲ್ಲಿ ಕೂಡಲೇ ಜಿಲ್ಲಾಡಳಿತಕ್ಕೆ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಳ ಮತ್ತು ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳ ಇರುವುದರಿಂದ ಜಲಾಶಯದಿಂದ ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರ ಬಿಡುತ್ತಿರುವುದರಿಂದ ಕುಶಾಲನಗರದ ಸಾಯಿ ಬಡಾವಣೆ ಮತ್ತು ಕುವೆಂಪು ನಗರದಲ್ಲಿ ಪ್ರವಾಹ್ರುಂಟಾಗುತ್ತಿದೆ. ಆದ್ದರಿಂದ ಇದಕ್ಕೆ ಶಾಶ್ವತ ಮಾರ್ಗೋಪಾಯ ಕಲ್ಪಿಸಬೇಕಿದೆ ಎಂದು ಸಚಿವರು ಹೇಳಿದರು.
ಜಿಲ್ಲೆಯ 2 ನೇ ಮೊಣ್ಣಂಗೇರಿ, ಚೆಂಬು, ಪೆರಾಜೆ ಭಾಗದಲ್ಲಿ ಆಗಾಗ ಸಂಭವಿಸುತ್ತಿರುವ ಭೂಕಂಪನ ಹಾಗೂ ಭೂ ಕುಸಿತಗಳಿಗೆ ಸೂಕ್ತ ಕಾರಣ ತಿಳಿಯಲು ಕೇಂದ್ರ ತಜ್ಞರ ತಂಡವು ಜಿಲ್ಲೆಗೆ ಆಗಮಿಸಲಿದೆ. ಸದ್ಯ ಮಳೆ ಕಡಿಮೆ ಆಗುವವರೆಗೂ ತಜ್ಞರ ತಂಡದವರಿಗೆ ಆ ಭಾಗದ ಪ್ರದೇಶ ಪರಿಶೀಲಿಸಲು ಸಾಧ್ಯವಿಲ್ಲ, ಮಳೆ ನಿಂತ ಕೂಡಲೇ ತಜ್ಞರು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಮೊಣ್ಣಂಗೇರಿ ಭಾಗದಲ್ಲಿ ಉಂಟಾಗುತ್ತಿರುವ ಭೂಕುಸಿತ ಮತ್ತು ಭೂಕಂಪನಕ್ಕೆ ಏನಾದರೂ ಒಂದಕ್ಕೊAದು ಸಾಮ್ಯತೆ ಇದೆಯೇ ಎಂಬ ಬಗ್ಗೆ ತಜ್ಞರ ವರದಿಯಿಂದ ತಿಳಿಯ ಬೇಕಷ್ಟೆ ಎಂದು ಸಚಿವರು ನುಡಿದರು.
::: 5 ಕಾಳಜಿ ಕೇಂದ್ರಗಳು :::
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಜಿಲ್ಲೆಯಲ್ಲಿ 5 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಬಳಿಯ ತೋಮಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 15 ಕುಟುಂಬಗಳ 41 ಮಂದಿ ಸಂತ್ರಸ್ತರು, ನಗರದ ರೆಡ್‌ಕ್ರಾಸ್ ಸಂಸ್ಥೆಯ 35 ಕುಟುಂಬಗಳ 87 ಮಂದಿ, ಮಡಿಕೇರಿ ತಾಲ್ಲೂಕಿನ ಕೊಯನಾಡು ಗ್ರಾಮದ ಪರಿಹಾರ ಕೇಂದ್ರದಲ್ಲಿ 9 ಕುಟುಂಬದ 35 ಮಂದಿ, ಎಂ.ಚೆಂಬು ಡಬ್ಬಡ್ಕ ಗ್ರಾಮದ ಪರಿಹಾರ ಕೇಂದ್ರದಲ್ಲಿ 3 ಕುಟುಂಬದ 9 ಮಂದಿ ಹಾಗೂ ಭಾಗಮಂಡಲ ಕಾಶಿ ಮಠದಲ್ಲಿ ಒಂದು ಕುಟುಂಬದ 4 ಮಂದಿ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ್ ಪಿ.ಎಸ್.ಮಹೇಶ್, ಜಿ.ಪಂ.ಮುಖ್ಯ ಯೋಜನಾಧಿಕಾರಿ ಜಗದೀಶ್ ಇತರರು ಇದ್ದರು.
ಇದಕ್ಕೂ ಮೊದಲು ‘ಹರ್ ಘರ್ ತಿರಂಗ’ ಸಂಬಂಧಿಸಿದಂತೆ ವಿಡಿಯೊ ಸಂವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಂಡಿದ್ದರು.
ವಿಡಿಯೊ ಸಂವಾದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರ್ ಘರ್ ತಿರಂಗ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯಲ್ಲಿ ಯಶಸ್ವಿಗೊಳಿಸುವಲ್ಲಿ ಶ್ರಮಿಸಬೇಕು. ಜಿಲ್ಲೆಗೆ ನಿಗದಿಪಡಿಸಿರುವ ಗುರಿ ಸಾಧಿಸಬೇಕು ಎಂದು ಹೇಳಿದರು.