ವಿಶ್ವ ಜೈವಿಕ ಇಂಧನ ದಿನ : ಜೈವಿಕ ಇಂಧನ ಭವಿಷ್ಯದ ಆಶಾಕಿರಣ

10/08/2022

ಮಡಿಕೇರಿ ಆ.10 ಇಂದು ವಿಶ್ವ ಜೈವಿಕ ಇಂಧನ ದಿನಾಚರಣೆ. ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ದಿನೇ ದಿನೇ ಇಂಧನಗಳ ಬೇಡಿಕೆ ಹೆಚ್ಚುತ್ತಿದೆ. ನಮ್ಮ ಅವಶ್ಯಕತೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ ನಮ್ಮ ನೈಸರ್ಗಿಕ ಸಂಪನ್ಮೂಲಗಳು ಕೂಡ ಕ್ಷೀಣಿಸುತ್ತಾ ಬಂದಿವೆ. ನಾವು ಕಚ್ಚಾ ಇಂಧನ (ಫಾಸಿಲ್ ಇಂಧನ) ಮೂಲಗಳಾದ ಪೆಟ್ರೋಲ್, ಡಿಸೇಲ್ ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಹಸಿರು ಇಂಧನಗಳ ಬಳಕೆ ಇಂದಿನ ಪ್ರಮುಖ ಅವಶ್ಯತೆಗಳಲ್ಲಿ ಒಂದಾಗಿದೆ.
ಜೈವಿಕ ಇಂಧನವು ರಾಷ್ಟ್ರ ಎದುರಿಸುತ್ತಿರುವ ಇಂಧನದ ಕೊರತೆ ಮತ್ತು ನೈಸರ್ಗಿಕ ಇಂಧನ ಮೂಲಗಳ ಸದ್ಬಳಕೆಗೆ ಪರೋಕ್ಷ ಕೊಡುಗೆಯನ್ನು ನೀಡುವುದು, ದೇಶದ ಆಹಾರ ಭದ್ರತೆಗೆ ಧಕ್ಕೆಯಾಗದಂತೆ ಇಂಧನದ ಭದ್ರತೆಯೆಡೆ ಮುನ್ನೆಡೆಗೆ ಸಹಕಾರಿಯಾಗುವುದು. ಜೈವಿಕ ಇಂಧನ ಭವಿಷ್ಯದ ಇಂಧನವಾಗಿ ರೂಪುಗೊಳ್ಳುವುದು. ರಾಜ್ಯದ ಜೈವಿಕ ಇಂಧನ ಅಭಿವೃದ್ಧಿ ನೀತಿ ಸಾಕಾರಗೊಂಡಲ್ಲಿ ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಕಾರ್ಯ ಇಡೀ ವಿಶ್ವಕ್ಕೆ ಮಾದರಿಯಾಗುವುದು.
ವಿವಿಧ ಬೆಳೆಗಳು, ಬೆಳೆಗಳ ತ್ಯಾಜ್ಯಗಳು, ಜೈವಿಕ ಕಸ ಹಾಗೂ ಅಳಿದುಳಿದ ವಸ್ತುಗಳಿಂದ ಉತ್ಪಾದಿಸುವ ಇಂಧನವೇ ಜೈವಿಕ ಇಂಧನ.
ಜೈವಿಕ ಇಂಧನವು ಪರಿಸರ ಸ್ನೇಹಿಯಾಗಿದ್ದು, ಹೊಂಗೆ, ಬೇವು, ಹಿಪ್ಪೆ, ಸುರಹೊನ್ನೆ, ಜಟ್ರೋಪ, ಸೀಮರೂಬದಂತಹ ಮರಗಳಿಂದ ಉತ್ಪತ್ತಿಯಾಗುವ ಬೀಜಗಳಿಂದ ಜೈವಿಕ ಇಂಧನವನ್ನು ಉತ್ಪಾದನೆ ಮಾಡಲಾಗುತ್ತದೆ. ಇದರ ಜೊತೆಗೆ ಕಬ್ಬಿನ ಸಿಪ್ಪೆ, ಮೆಕ್ಕೆಜೋಳದ ದಂಟು, ಹತ್ತಿಗಿಡಗಳ ತ್ಯಾಜ್ಯ, ಕರಿನ ಎಣ್ಣೆ ತ್ಯಾಜ್ಯಗಳಿಂದಲೂ ಜೈವಿಕ ಇಂಧನವನ್ನು ತಯಾರಿಸಲಾಗುತ್ತದೆ.
ಜೈವಿಕ ಎಥೆನಾಲ್ ಮತ್ತು ಬಯೋ ಡಿಸೇಲ್ ಇವುಗಳು ಎರಡು ಪ್ರಮುಖ ಜೈವಿಕ ಇಂಧನಗಳು. ಇದು ಒಂದು ಸಂರಕ್ಷಣೀಯ ಮತ್ತು ನವೀಕರಿಸಬಹುದಾದ ಇಂಧನವಾಗಿದ್ದು, ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿವೆ. ಹಾಗಾಗಿ, ಜೈವಿಕ ಇಂಧನವು ಒಂದು ಹಸಿರು ಮತ್ತು ಪರಿಸರ ಸ್ನೇಹಿ ಇಂಧನವಾಗಿದ್ದು, ಭವಿಷ್ಯದ ಆಶಾಕಿರಣವಾಗಿದೆ.
ಜೈವಿಕ ಇಂಧನವು ಗ್ರಾಮೀಣ ಆರ್ಥಿಕತೆಯ ಬಲವರ್ಧನೆ, ರೈತರ ಆದಾಯ ದುಪ್ಪಟ್ಟುಗೊಳಿಸುವಿಕೆ, ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲಕ್ಕೆ ಪರ್ಯಾಯಗಳನ್ನು ಕಲ್ಪಿಸುವ ಮೂಲಕ ಪರಿಸರವನ್ನು ಸಂರಕ್ಷಿಸುವುದು ಕೂಡ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.
ಜೈವಿಕ ಇಂಧನವು ಪರಿಸರ ಹಾಗೂ ಆರ್ಥಿಕ ಅಭಿರ್ವರದ್ಧಿ ನಡುವೆ ಸಮತೋಲನವನ್ನು ಸೃಷ್ಠಿಸುವ ಸಾವiಥ್ರ್ಯವನ್ನು ಹೊಂದಿದೆ. ಜೈವಿಕ ಇಂಧನ ಎಂಬುದು ಭಾರತವಲ್ಲದೆ ಇಡೀ ವಿಶ್ವಕ್ಕೆ ನವಶಕ್ತಿಯನ್ನು ನೀಡಬಲ್ಲ ಮಂತ್ರವಾಗಿದೆ.
ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಚ್ಚಾತೈಲಗಳ ಬೇಡಿಕೆಗಳಿಂದ ತೈಲ ನಿಕ್ಷೇಪಗಳು ಇಂದು ಬರಿದಾಗುತ್ತಿವೆ. ಭಾರತ ದೇಶವು ಶೇ.85 ರಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದರ ಪರಿಣಾಮವಾಗಿ ಪರಾವಲಂಬನೆ, ಪರಿಸರ ಮಾಲಿನ್ಯ, ವಿದೇಶಿ ವಿನಿಮಯಗಳ ಹೊರೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಮಿಲಿಯನ್ ವರ್ಷಗಳಿಂದ ಶೇಖರಣೆಗೊಂಡ ಖನಿಜ ತೈಲಗಳನ್ನು ಇನ್ನು ಕೆಲವೇ ದಶಕಗಳಲ್ಲಿ ಬರಿದು ಮಾಡುವತ್ತ ದಾಪುಗಾಲು ಹಾಕಿದ್ದೇವೆ.
ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲಾ ಕಚ್ಚಾತೈಲ ನಿಕ್ಷೇಪಗಳು ಖಾಲಿಯಾಗುವ ಬಗ್ಗೆ ನಮ್ಮ ವಿಜ್ಞಾನಿಗಳು ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ. ಅಷ್ಟೇ ಅಲ್ಲ, ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆಯಂತಹ ಖನಿಜ ತೈಲಗಳನ್ನು ಇಂಜಿನುಗಳಲ್ಲಿ ಹಾಕಿ ಸುಡುವಾಗ ಹೊರ ಬರುವ ಇಂಗಾಲಾಮ್ಲಗಳು, ಗಂಧಕದ ಆಮ್ಲಗಳು, ಇಂಗಾಲದ ಸೂಕ್ಷ್ಮ ಕಣಗಳು ವಾತಾವರಣದ ಮಾಲಿನ್ಯವನ್ನು ಹೆಚ್ಚಿಸಿವೆ.
ಇದರಿಂದ ನಾವು ಬರಿದಾಗುತ್ತಿರುವ ಕಚ್ಚಾತೈಲಗಳಿಗೆ ಬದಲೀ ಇಂಧನ ಮೂಲವನ್ನು ತ್ವರಿತವಾಗಿ ಕಂಡುಕೊಳ್ಳಬೇಕಾಗಿದೆ. ಬದಲಿ ಇಂಧನ ಮೂಲಗಳು ನಮಗೆ ನಿರಂತರವಾಗಿ ಸಿಗುವಂತಾಗಬೇಕು. ಇವು ಪರಿಸರದಲ್ಲಿನ ಸಮತೋಲನ ಕಾಯ್ದುಕೊಳ್ಳಬೇಕು. ಜೊತೆಗೆ ಇವುಗಳು ನಮ್ಮ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರಬೇಕು. ಈ ದಿಸೆಯಲ್ಲಿ ನಮ್ಮ ಮುಂದಿರುವ ಈ ಎಲ್ಲಾ ಸವಾಲುಗಳಿಗೆ ಪರಿಹಾರವಾಗಬಲ್ಲ ಅಂಶವೆಂದರೆ ಅದು ಜೈವಿಕ ಇಂಧನ ಕಾರ್ಯಕ್ರಮ ಆಶಾದಾಯಕ ವಾತಾವರಣ ಸೃಷ್ಠಿಸುವಲ್ಲಿ ಯಶಸ್ವಿಯಾಗಿದೆ.
ಇಂದು ನಾವು ಪೆಟ್ರೋಲಿಯಂ ಮತ್ತು ವಿದ್ಯಚ್ಛಕ್ತಿಗಳಲ್ಲದೆ ಇನ್ನೂ ಕೆಲವು ಬಗೆಯ ಇಂಧನ ಮೂಲಗಳಾದ ಅಣುಶಕ್ತಿ, ಸೌರಶಕ್ತಿ, ವಾಯು ಮತ್ತು ಜೈವಿಕ ಅನಿಲ ಶಕ್ತಿ ಇವುಗಳನ್ನು ಸಹ ಇಂಧನ ಶಕ್ತಿಯನ್ನಾಗಿ ಬಳಸುವುದು ಇಂದು ಅನಿವಾರ್ಯವಾಗಿದೆ. ಅದರಲ್ಲಿ ಜೈವಿಕ ಇಂಧನ ಶಕ್ತಿಯು ಪರಿಸರ ಸ್ನೇಹಿಯಾಗಿದೆ.
ಜೈವಿಕ ಇಂಧನ ಈಗ ಇಡೀ ವಿಶ್ವದಲ್ಲಿ ಚರ್ಚೆಗೆ ಗ್ರಾಸವಾದ ವಿಷಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದಲ್ಲಿಯೂ ಜೈವಿಕ ಇಂಧನದ ಉತ್ಪಾದನೆಗೆ ಸರ್ಕಾರ ಒತ್ತು ನೀಡುತ್ತಿದೆ. ಜೈವಿಕ ಇಂಧನದ ಮೂಲಗಳ ಬಗ್ಗೆ ಜನಜಾಗೃತಿ ಬೆಳೆಸುವುದು ಮತ್ತು ಈ ಇಂಧನ ಮೂಲಗಳನ್ನು ವೃದ್ಧಿಸುವ ದಿಸೆಯಲ್ಲಿ ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನ ವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭ ಇಂಧನದ ಮಿತವ್ಯಯ ಮತ್ತು ಜೈವಿಕ ಇಂಧನದ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಕಚ್ಚಾ ತೈಲಗಳ ಕೊರತೆ ಹಿನ್ನೆಲೆಯಲ್ಲಿ ಈಗ ಬದಲಿ ಇಂಧನ ಮೂಲಗಳಿಗೆ ಪ್ರಾಮುಖ್ಯತೆ ದೊರೆಯುತ್ತಿದ್ದು, ಭವಿಷ್ಯದ ಇಂಧನವಾಗಿ ಜೈವಿಕ ಇಂಧನವನ್ನು ಅಭಿವೃದ್ಧಿಪಡಿಸುವ ಅಗತ್ಯತೆ ಎದುರಾಗಿದೆ.
ನಮ್ಮ ರಾಜ್ಯದ ಮಟ್ಟಿಗೆ ಹೇಳುವುದಾದರೆ ಕರ್ನಾಟಕ ಸರ್ಕಾರವು ದಿನಾಂಕ 9 ನೇ ಸೆಪ್ಟೆಂಬರ್ 2008 ರಂದು ಜೈವಿಕ ಇಂಧನ ಅಭಿವೃದ್ಧಿ ನೀತಿಯನ್ನು ಜಾರಿಗೊಳಿಸಿದೆ. ಸಸ್ಯ ಜನ್ಯ ಇಂಧನ ಮೂಲಗಳನ್ನು ಅಭಿವೃದ್ಧಿಪಡಿಸಿ ಕಚ್ಚಾತೈಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಮತ್ತು ಕೃಷಿ ವಲಯದ ಮೂಲಕ ಇಂಧನದ ಭದ್ರತೆಯನ್ನು ಬಲಪಡಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ. ಜೈವಿಕ ಇಂಧನ ಉತ್ಪಾದನೆಯ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಿದೆ.
ಜೈವಿಕ ಇಂಧನದ ಉತ್ಪಾದನೆ ಮತ್ತು ಅಭಿವೃದ್ಧಿಪಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಸಾಕಷ್ಟು ಶ್ರಮವಹಿಸಿ, ವಿಶಿಷ್ಠ ಯೋಜನೆಗಳನ್ನು ಕೈಗೊಂಡಿದೆ.
ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ರೈತರು ತಮ್ಮ ಜಮೀನಿನಲ್ಲಿ ಜೈವಿಕ ಇಂಧನ ತಯಾರಿಕೆಯ ಮೂಲದ ಸಸ್ಯಜನ್ಯಗಳಾದ ಹೊಂಗೆ, ಬೇವು, ಹಿಪ್ಪೆ, ಸಿಮರೂಬ, ಅಮೂರ, ಜಟ್ರೋಫ ಗಿಡಗಳನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ. ಇವುಗಳಿಂದ ಸಿಗುವ ಬೀಜಗಳನ್ನು ಸಂಸ್ಕರಿಸಿ ಡೀಸೆಲ್ ಉತ್ಪಾದನೆ ಮಾಡುವ ಕಾರ್ಯ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕಂಡುಬಂದಿದೆ. ಅದರಲ್ಲೂ ಹಾಸನ ಜಿಲ್ಲೆಯ ಮಡೆನೂರು ಎಂಬಲ್ಲಿ ಸ್ಥಾಪಿಸಿರುವ ರಾಜ್ಯದ ಜೈವಿಕ ಉದ್ಯಾನದಲ್ಲಿ ಜೈವಿಕ ಇಂಧನ ಮೂಲದ ಸಸಿಗಳನ್ನು ಬೆಳೆಸಿ ರೈತರಿಗೆ ನೀಡಲಾಗುತ್ತಿದೆ. ಈ ಕೇಂದ್ರದಲ್ಲಿ ರೈತರು ತಾವು ಬೆಳೆದಿರುವ ಜೈವಿಕ ಇಂಧನ ಮೂಲದ ಬೀಜಗಳನ್ನು ಸಂಗ್ರಹಿಸಿ ಡಿಸೇಲ್ ಉತ್ಪಾದಿಸುವಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಈ ಡೀಸೆಲ್ ಬಳಕೆ ಮಾಡಿಕೊಂಡು ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳನ್ನು ಕೂಡ ಓಡಿಸಲಾಗುತ್ತಿದೆ.
ರಾಜ್ಯದಲ್ಲಿ ಜೈವಿಕ ಇಂಧನ ಚಟುವಟಿಕೆಗಳ ಅಭಿವೃದಿಗಾಗಿ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಸ್ಥಾಪಿಸಿದೆ. ಇಂತಹ ಕೇಂದ್ರವು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಈ ಗಿಡಗಳಿಂದ ಸಿಗುವ ಬೀಜಗಳನ್ನು ಸಂಗ್ರಹಿಸಿ ನಂತರ ಸಂಸ್ಕರಿಸಿ ಡೀಸೆಲ್ ಉತ್ಪಾದಿಸಲಾಗುತ್ತಿದೆ.
ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಜೈವಿಕ ಇಂಧನ ಅಭಿವೃದ್ಧಿಯಲ್ಲಿ ರೈತರು, ಭೂರಹಿತರು, ಇತ್ಯಾದಿ ಸ್ಥಳೀಯ ಜನ ಸಮುದಾಯಗಳ ಸಂಪೂರ್ಣ ಸಹಭಾಗಿತ್ವಕ್ಕೆ ಮಹತ್ವವನ್ನು ನೀಡಿದೆ. ರಾಜ್ಯದ ಜೈವಿಕ ಇಂಧನ ನೀತಿಯ ಪ್ರಕಾರ ಹಸಿರು ಹೊನ್ನು, ಬರಡು ಬಂಗಾರ, ಸುವರ್ಣ ಭೂಮಿ, ಜೈವಿಕ ಇಂಧನ ಉತ್ಪಾದನೆ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಗಳು ಇವೇ ಮೊದಲಾದ ಯೋಜನೆಗಳನ್ನು ದೀರ್ಘಾವಧಿ ಯೋಜನೆಗಾಗಿ ಅಭಿವೃದ್ಧಿಪಡಿಸುವ ಮೂಲಕ ಸಮಗ್ರ ಗ್ರಾಮೀಣ ವಿಕಾಸವನ್ನು ಹೊಂದಬೇಕೆಂಬ ಕಾಳಜಿಯನ್ನು ಹೊಂದಲಾಗಿದೆ.

ನಾವು ಈ ದಿಸೆಯಲ್ಲಿ ಅರಣ್ಯ ಪ್ರದೇಶ, ಖಾಲಿಯಿರುವ ಹೊಲ – ಗದ್ದೆ, ತೋಟದ ಪ್ರದೇಶದ ಸುತ್ತಲಿನ ಸ್ಥಳ, ಸರ್ಕಾರಿ ಜಾಗ, ಶಾಲಾ – ಕಾಲೇಜು ಮತ್ತು ರಸ್ತೆಬದಿ, ಸಾರ್ವಜನಿಕ ಸ್ಥಳಗಳಲ್ಲಿ ಜೈವಿಕ ಇಂಧನ ಉತ್ಪಾದನೆಯ ಸಸ್ಯಜನ್ಯಗಳಾದ ಹೊಂಗೆ, ಬೇವು, ಸೀಮರೂಬ, ಹಿಪ್ಪೆ, ಅಮೂರ, ಜಟ್ರೋಫದಂತಹ ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಿ ಜೈವಿಕ ಇಂಧನ ತಯಾರಿಸುವಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ.
ಭವಿಷ್ಯದ ಆಶಾಕಿರಣವಾದ ಜೈವಿಕ ಇಂಧನ ತಯಾರಿಸುವ ಮೂಲಕ ಹಸಿರು ಮತ್ತು ಪರಿಸರ ಸ್ನೇಹಿ ಇಂಧನ ಉತ್ಪಾದನೆ ಮೂಲPತಿಂಧನ ಉತ್ಪಾದನೆಯ ಸ್ವಾವಲಂಬಿ ಭಾರತ ನಿರ್ಮಾಣ ಕಾರ್ಯಕ್ಕೆ ನಾವೆಲ್ಲರೂ ಕಟಿಬದ್ಧರಾಗಬೇಕಿದೆ.

ಲೇಖನ : ಟಿ.ಜಿ.ಪ್ರೇಮಕುಮಾರ್, ಮುಖ್ಯ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು.
ಮೊಬೈಲ್ ನಂ : 94485 88352
ಲೇಖಕರ ಚಿತ್ರ : ಟಿ.ಜಿ.ಪ್ರೇಮಕುಮಾರ್