ಮೊಡವೆ ನಿವಾರಣೆಗೆ ವಿವಿಧ ಮನೆಮದ್ದು

01/09/2022

ಮೊಡವೆಗಳಿಗೆ ಲೇಪನ

ಮೊಡವೆಗಳಿಗೆ ಲೇಪನ ಹಚ್ಚುವ ಮೊದಲು ನಿಮ್ಮ ಮುಖದ ಚರ್ಮ ಯಾವ ತರಹದ್ದು ಎಂಬುದನ್ನು ಅರಿತುಕೊಂಡಿರಬೇಕು. ಮನುಷ್ಯರಲ್ಲಿ ಮೂರು ವಿಧದ ಚರ್ಮಗಳಿವೆ. 1. ಎಣ್ಣೆಯ ಚರ್ಮ 2. ಒಣ ಚರ್ಮ 3. ಸಾಮಾನ್ಯ ಚರ್ಮ

ಎಣ್ಣೆಯ ಚರ್ಮದವರಿಗೆ ಲೇಪಗಳು
• ಲೋದ್ರ, ಧನಿಯಾ, ಬಜೆಯನ್ನು ಸಮಭಾಗ ತೆಗೆದುಕೊಂಡು ಪುಡಿ ಮಾಡಿ ಬಟ್ಟೆಯಲ್ಲಿ ಶೋಧಿಸಿ ನುಣ್ಣನೆಯ ಪುಡಿ ತಯಾರಿಸಿಕೊಳ್ಳಬೇಕು. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಮುಖಕ್ಕೆ ಲೇಪಿಸಿಕೊಳ್ಳಬೇಕು. ಅರ್ಧಗಂಟೆ ನಂತರ ತೊಳೆದುಕೊಳ್ಳಬೇಕು. ದಿನಕ್ಕೊಂದು ಬಾರಿ ಇದನ್ನು ಹಾಕಿಕೊಳ್ಳಬೇಖು. ಕರಿ ಮೆಣಸು ಮತ್ತು ಗೋರೋಚನವನ್ನು ನೀರಿನಲ್ಲಿ ಅರೆದು ಲೇಪಿಸಿಕೊಳ್ಳಬೇಕು.
• ಬಿಳಿಸಾಸುವೆ, ಬಜೆ, ಲೋಧ್ರ, ಸಮಭಾಗ ತೆಗೆದುಕೊಂಡು ನೀರಿನಲ್ಲಿ ಅರೆದು ಲೇಪಿಸಿಕೊಳ್ಳಬೇಕು.
• ನಾಗದಾಳಿ ಸೊಪ್ಪನ್ನು ಅರೆದು ಲೇಪಿಸಿ ಅರ್ಧ ಗಂಟೆಯ ನಂತರ ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಬೇಕು.

•ಸೀಬೆಗಿಡದ ಎಳೆಯ ಎಲೆಗಳನ್ನು ಅರಿಶಿನ ಸೇರಿಸಿ ಅರೆದು ಹಚ್ಚುವುದರಿಂದ ಮೊಡವೆ ಬೇಗ ಮಾಯವಾಗುತ್ತವೆ.

• ಹಿಂಗುವಿಗೆ ನಿಂಬೆರಸ ಅರೆದು ಲೇಪಿಸಬೇಕು. ಪುದೀನ ಸೊಪ್ಪನ್ನು ಅರಿಶಿನ ಬೆರೆಸಿ ಅರೆದು ಹಚ್ಚಬೇಕು ಮತ್ತು ಪುದೀನ ಸೊಪ್ಪನ್ನು ಬೇವು ಮತ್ತು ತುಳಸಿ ಎಲೆ ಬೆರೆಸಿ ಅರೆದು ಹಚ್ಚಿಕೊಂಡು ಅರ್ಧಗಂಟೆ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

ಒಣ ಚರ್ಮದವರಿಗೆ ಲೇಪಗಳು
• ಒಣ ಚರ್ಮದವರು ಮೊಡವೆಗಳಿಗೆ ದಂಟಿನ ಸೊಪ್ಪನ್ನು ಹಾಲಿನಲ್ಲಿ ಅರೆದು ಹಚ್ಚಿಕೊಳ್ಳಬೇಕು.
• ಲೋಧ್ರ, ಬಜೆಯನ್ನು ಹಾಲಿನಲ್ಲಿ ಅರೆದು ಹಚ್ಚಿಕೊಳ್ಳಬೇಕು. ಕಿರುಕಸಾಲೆ ಸೊಪ್ಪಿನ ರಸ, ಹಾಲಿನ ಕೆನೆ, ಗುಲಾಬಿ ಜಲ ಸೇರಿಸಿ ಅರೆದು ಹಚ್ಚಿಕೊಳ್ಳಬೇಕು.

ಸಾಮಾನ್ಯ ಚರ್ಮದವರಿಗೆ ಲೇಪಗಳು
• ಅಮೃತಬಳ್ಳಿಯ ಎಲೆ ಮತ್ತು ಹಣ್ಣುಗಳನ್ನು ಅಥವಾ ಕೇವಲ ಎಲೆಗಳನ್ನು ನುಣ್ಣಗೆ ಅರೆದು ರಾತ್ರಿ ಹೊತ್ತು ಹಚ್ಚಿಕೊಳ್ಳಬೇಕು. ಒಂದು ಗಂಟೆ ನಂತರ ಮುಖ ತೊಳೆಯಬೇಕು. ಕೆಲವೇಳೆ ಮುಖ ತೊಳೆಯದೇ ರಾತ್ರಿಯೆಲ್ಲ ಹಾಗೇ ಬಿಟ್ಟರೂ ಯಾವುದೇ ತೊಂದರೆಯಾಗುವುದಿಲ್ಲ.
• ಸಾಸುವೆ ಎಣ್ಣೆಯಿಂದ ಮುಖಕ್ಕೆ ರಾತ್ರಿ ಹೊತ್ತು ಮಸಾಜ್ ಮಾಡಿಕೊಳ್ಳಬೇಕು.
• ಅರಿಶಿನ, ಮರದರಿಶಿನ, ಮಂಜಿಷ್ಟವನ್ನು ಹಾಲು, ತುಪ್ಪ ಬೆರೆಸಿ ಅರೆದು ಹಚ್ಚಿಕೊಳ್ಳಬೇಕು.
• ಬೇವು, ಲೋಧ್ರ, ಅರಿಶಿನ, ಕೆಂಪು ಶ್ರೀಗಂಧ, ಸುಗಂಧಿ ಬೇರು, ಅತಿಮಧುರ, ಬಜೆ, ಮಂಜಿಷ್ಟ ಪ್ರತಿಯೊಂದನ್ನು 10 ಗ್ರಾಂ ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. ಇದನ್ನು ಮೊಸರಿನಲ್ಲಿ ಬೆರೆಸಿ ಮುಖಕ್ಕೆ ಲೇಪಿಸಿಕೊಂಡು ಅರ್ಧಗಂಟೆ ಬಿಟ್ಟು ಮುಖ ತೊಳೆಯಬೇಕು.

ಮುಖಕಾಂತಿ ವೃದ್ಧಿಗೆ ಮನೆಮದ್ದು
ವಾರಕ್ಕೊಮ್ಮೆ ಮುಖಕ್ಕೆ ಕುಂಕುಮಾದಿ ತೈಲ ಇಲ್ಲವೇ ಹಾಲಿನ ಕೆನೆಯಿಂದಾಗಲೀ ಅಥವಾ ಲೋಳೆಸರದ ತಿರುಳನಿಂದ ಮುಖಕ್ಕೆ ಮಸಾಜ್ ಮಾಡಿಕೊಂಡು ಹಬೆ ತೆಗೆದುಕೊಳ್ಳಬೇಕು. ಹಬೆ ತೆಗೆದುಕೊಳ್ಳಲು ಆಲ, ಅತ್ತಿ, ಬಸರಿ, ಹೂವರಸಿ ಮರದ ತೊಗಟೆಗಳನ್ನು ಪುಡಿ ಮಾಡಿಟ್ಟುಕೊಂಡು. 50 ಗ್ರಾಂ ಪುಡಿಯನ್ನು ಒಂದು ಲೀಟರ್ ನೀರಿಗೆ ಹಾಕಿ ಕುದಿಸಬೇಕು. ಇದರಿಂದ ಬರುವ ಹಬೆ ಅಥವಾ ಬೇವು ಇಲ್ಲವೇ ಹೊಂಗೆ ಎಲೆಯನ್ನು ಹಾಕಿ ಕುದಿಸಿದ ನೀರಿನಿಂದ ಬರುವ ಹಬೆ ತೆಗೆದುಕೊಳ್ಳಬೇಕು. ಇದರಿಂದ ಮುಖ ಚೆನ್ನಾಗಿ ಬೆವರುತ್ತದೆ. ಬೆವರಿನ ಗ್ರಂಥಿಗಳು ತೆರೆದುಕೊಳ್ಳುವುದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ.

ಡಾ. ವಸುಂಧರಾ ಭೂಪತಿ, ಕೃಪೆ :ಕನ್ನಡಪ್ರಭ