ಕೊಡಗಿನ ವಿಶಿಷ್ಟ ಹಬ್ಬ ಕೈಲ್‌ಪೊಳ್ದ್ ಹಬ್ಬದ ಹಿನ್ನೆಲೆ

03/09/2022

ಕರ್ನಾಟಕದ ಕಾಶ್ಮೀರ ಕೊಡಗು ವೀರರ ನಾಡು. ಕೊಡವರ ಆಚಾರ-ವಿಚಾರ ರೂಢಿ ಸಂಪ್ರದಾಯಗಳು ಭಿನ್ನವಾಗಿದ್ದು ಎಲ್ಲರನ್ನೂ ಆಕರ್ಷಿಸುತ್ತದೆ. ಅದೇ ರೀತಿ ಕೊಡವರ ವಿಶಿಷ್ಟ ಹಬ್ಬ ಕೈಲ್ ಮುಹೂರ್ತ. ಕೈಲ್ ಮುಹೂರ್ತವನ್ನು ಕೊಡವ ಭಾಷೆಯಲ್ಲಿ  ಕೈಲ್ ಪೊಳ್ದ್ ಎಂದು ಕರೆಯಲಾಗುತ್ತದೆ. ಕೈಲ್ ಎಂದರೆ ಆಯುಧ ಮತ್ತು ಪೊಳ್ದ್ ಅಥವಾ ಪೋದ್ ಎಂದರೆ ಹಬ್ಬ ಎಂಬ ಅರ್ಥವೂ ಬರುತ್ತದೆ. ಕೊಡವರ ಪಂಚಾಂಗದ ಪ್ರಕಾರ ಚಿನ್ಯಾರ್ ತಿಂಗಳಿನ 18ನೇ ದಿನದಂದು ಕೈಲ್ ಮುಹೂರ್ತ ಬರುತ್ತದೆ. ಅಂದರೆ ಸೆಪ್ಟೆಂಬರ್ 3ನೇ ತಾರೀಕಿನಂದು ಕೈಲ್ ಮುಹೂರ್ತವನ್ನು ಆಚರಿಸಲಾಗುತ್ತದೆ. ಆದರೆ ಕೊಡಗಿನ ನಾಲ್ಕುನಾಡು, ಮುತ್ತುನಾಡ್ (ನಾಪೋಕ್ಲು,ಗಾಳಿಬೀಡು) ಮುಂತಾದ ಕಡೆಗಳಲ್ಲಿ ಆಗಸ್ಟ್ ಕೊನೆಯ ವಾರದಲ್ಲಿ ಆಚರಿಸುತ್ತಾರೆ.

ಇತಿಹಾಸ : 

ಕೈಲ್ ಮುಹೂರ್ತವು ತನ್ನದೇ ಆದ ವಿಶೇಷ ಹಿನ್ನೆಲೆಯನ್ನು ಹೊಂದಿದೆ.
ಶತಮಾನಕ್ಕೂ ಹಿಂದೆ ಕೊಡವರು ತಮ್ಮ-ತಮ್ಮ ನಾಡು ದೇವಸ್ಥಾನಗಳಲ್ಲಿ ಸೇರಿ ಕಣಿಯ (ಕಣಿಹೇಳುವವರು, ಜ್ಯೋತಿಷಿ) ಅಥವಾ ಆ ದೇವಸ್ಥಾನದ ಅರ್ಚಕನು ನಿರ್ಧರಿಸಿದ ದಿನದಲ್ಲಿ ಈ ಹಬ್ಬವನ್ನು ಆಚರಿಸುತ್ತಿದ್ದರು. ಅವರಿಂದಲೇ ಪೂಜೆಯ ಮುಹೂರ್ತ, ಬೇಟೆಯಾಡಬೇಕಾದ ದಿಕ್ಕು, ಯಾವ ನಕ್ಷತ್ರದಲ್ಲಿ ಹುಟ್ಟಿದವನಿಗೆ ಬೇಟೆ ಫಲಿಸುತ್ತದೆ, ಇತ್ಯಾದಿ ವಿಷಯಗಳೂ ನಿಗದಿತವಾಗುತ್ತಿದ್ದವು. ಹಿಂದೆ ಕೊಡಗಿನಲ್ಲಿ ಕೊಡವರ ಮುಖ್ಯ ವೃತ್ತಿ ಭತ್ತದ ಬೇಸಾಯವಾಗಿತ್ತು. ಬೇಟೆಯಾಡುವ ಹವ್ಯಾಸ ಬೇಸಾಯದ ಕೆಲಸಗಳ ನಂತರದ ಉದ್ಯೋಗವಾಗಿತ್ತು.

ಆಚರಣೆ
ವಿಷು ಸಂಕ್ರಮಣ(ಬಿಸು ಸಂಕ್ರಮಣ)ದಂದು ಮೊದಲು ನೇಗಿಲು ಕಟ್ಟಿದರೆ, ಸೌರಮಾನದ ಕರ್ಕಾಟಕ ತಿಂಗಳಿನಲ್ಲಿ ಉಳುವ ಮತ್ತು ನಾಟಿಯ ಕೆಲಸಗಳು ಬಿರುಸಾಗುವವು. ಆ ಕಾರಣ, ಕರ್ಕಾಟಕ ಮೊದಲ ದಿನದಿಂದ, ಅಂದರೆ ಜುಲೈ ಮಧ್ಯದಿಂದ ಆಯುಧಗಳನ್ನೆಲ್ಲಾ ತೆಗೆದಿರಿಸಿ ಬೇಟೆಯಾಡುವದನ್ನು ಪೂರ್ಣವಾಗಿ ನಿಲ್ಲಿಸಿಬಿಡಬೇಕು. ಕೋವಿ, ಕತ್ತಿ, ಒಡಿಕತ್ತಿ, ಪೀಚೆಕತ್ತಿ ಮುಂತಾದ ಆಯುಧಗಳನ್ನೆಲ್ಲ ಅವರು ತಮ್ಮ ಮನೆಯ ಕನ್ನಿಕೋಂಬರೆ ಎಂದು ಕರೆಯಲ್ಪಡುವ ದೇವರ ಕೋಣೆಯಲ್ಲಿಟ್ಟುಬಿಡುವರು. ಹೀಗೆ ಆಯುಧಗಳನ್ನಿಡುವಾಗ ಕೆಲವು ನೇಮ-ಪದ್ಧತಿಗಳನ್ನು ಅನುಸರಿಸುವರು. ಇವುಗಳಿಗೆ ಕೈಲ್‌ಪೊಳ್ದ್ ಕಟ್ಟ್ ಎನ್ನುವರು. ಇದರ ಪ್ರಕಾರ ಎಂತಹದ್ದೇ ಸಂದರ್ಭದಲ್ಲೂ ಈ ಆಯುಧಗಳನ್ನು ಮುಟ್ಟುವಂತಿಲ್ಲ.

ಸಿಂಹ ಮಾಸದ ಹದಿನೇಳರೊಳಗೆ ಎಲ್ಲರೂ ತಮ್ಮ ಗದ್ದೆಗಳಲ್ಲಿ ನಾಟಿ ಕೆಲಸವನ್ನು ಮುಗಿಸಲೇ ಬೇಕು. ಒಂದು ವೇಳೆ ಯಾರದಾದರೂ ಕೆಲಸ ಮುಗಿಯುವಂತೆ ತೋರುತ್ತಿಲ್ಲವೆಂದು ಈ ದಿನಕ್ಕೆ ಎರಡು-ಮೂರು ದಿನ ಮುಂಚಿತವಾಗಿ ಊರವರು ಗಮನಿಸಿದರೆ ಅವರು ಮನೆಗೊಬ್ಬರಂತೆ ಮುಯ್ಯಾಳಾಗಿ ಹೋಗಿ ಕೆಲಸವನ್ನು ಮುಗಿಸುವರು.

ಹದಿನೆಂಟನೇ ದಿನದಂದು ಈ ಮೊದಲು ತೆಗೆದಿರಿಸಿದ ಆಯುಧಗಳನ್ನು ನೇಮಾನುಸಾರ ಧಾರಣ ಮಾಡಬೇಕು. ಸ್ನಾನಾದಿ ಕೆಲಸಗಳ ನಂತರ ಕನ್ನಿಕೋಂಬರೆಯಲ್ಲಿಟ್ಟಿರುವ ಕೈದುಗಳನ್ನು ಹೊರದೆಗೆದು ಸ್ವಚ್ಛಗೊಳಿಸಿ, ಕನ್ನಿಕೋಂಬರೆಯಲ್ಲಿ ತಾಳೆಯೋಲೆಯ ಚಾಪೆಯ ಮೇಲೆ ಪೂರ್ವಕ್ಕೆ ಅಭಿಮುಖವಾಗಿ ಓರಣವಾಗಿ ಇರಿಸುವರು.

ತೋಕ್ ಪೂ (ಗೌರಿ ಹೂವು)
ನೆಲ್ಲಕ್ಕಿ ನಡುಬಾಡೆ ಎಂದು ಕರೆಯಲ್ಪಡುವ ಮನೆಯ ನಡು ಹಜಾರದಲ್ಲಿಯೂ ಇವುಗಳನ್ನಿಡಬಹುದು. ಅಲ್ಲಿರುವ ತೂಗುದೀಪವನ್ನು ಹಚ್ಚುವರು. ಆಯುಧಗಳನ್ನು ವಿವಿಧ ಹೂವುಗಳಿಂದ ಸಿಂಗರಿಸುವರು. ವಿಶೇಷವಾಗಿ ಕೋವಿಯನ್ನು ತೋಕ್ ಪೂ(ಕೋವಿ ಹೂ)ಗಳಿಂದ ಅಲಂಕರಿಸುವರು. ಈ ಹೂವಿಗೆ ಕನ್ನಡದಲ್ಲಿ ಗೌರಿ ಹೂ ಎನ್ನುವರು. ಇದು ಆರ್ಕಿಡ್ ಜಾತಿಗೆ ಸೇರಿದ್ದು ಆಂಗ್ಲದಲ್ಲಿ ಗ್ಲೋರಿಯೊಸ ಲಿಲಿ ಎನ್ನುವ ಹೆಸರಿದೆ. ಮನೆಯವರೆಲ್ಲರೂ ಸೇರಿದ ಮೇಲೆ ಮನೆಯ ಯಜಮಾನನು ಆಯುಧಗಳನ್ನು ಚಂದನ, ಧೂಪ, ದೀಪಾದಿಗಳಿಂದ ಪೂಜಿಸುವನು. ಒಂದು ತುದಿಬಾಳೆಯೆಲೆಯಲ್ಲಿ ಮಾಡಿದ ಅಡಿಗೆಯನ್ನೆಲ್ಲಾ ಸ್ವಲ್ಪ-ಸ್ವಲ್ಪ ಹಾಕಿ, ಅದನ್ನು ಆಯುಧಗಳ ಪಕ್ಕದಲ್ಲಿಡುವರು. ಎಲ್ಲರೂ ತೂಗುದೀಪವನ್ನೂ, ಆಯುಧಗಳನ್ನೂ ಕೈಗಳಿಂದ ಮುಟ್ಟಿ ನಮಸ್ಕರಿಸುವರು. ಕಿರಿಯರು ಹಿರಿಯರ ಕಾಲ್ಮುಟ್ಟಿ ನಮಸ್ಕರಿಸುವರು.

ಇದು ಕೊಡವರ ಪಾಲಿನ ಅತ್ಯಂತ ವಿಜ್ರಂಭಣೆಯ ಹಬ್ಬವಾಗಿದ್ದು ಕೊಡವರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಹಬ್ಬಕ್ಕೆ ಮಾತ್ರ  ಕುಟುಂಬದ ಸದಸ್ಯರೆಲ್ಲರೂ ಸೇರಿ ಔತಣಕೂಟ ಗಳನ್ನು ಏರ್ಪಡಿಸಿ  ಮಿಸುತ್ತಾರೆ. ನಂತರ ಒಂದು ಎತ್ತರದ ಮರದಲ್ಲಿ ಎತ್ತರಕ್ಕೆ ಬೆಳೆದು ನಿಂತ ಕೊಂಬೆಗೆ ತೆಂಗಿನಕಾಯಿಗಳನ್ನು ಕಟ್ಟಿ , ಆ ಮರದ ಬುಡಕ್ಕೆ ಎಲ್ಲರೂ ಹೋಗುವರು. ಊರಿನ ತಕ್ಕನು (ಮುಖ್ಯಸ್ಥ) ಮೊದಲು ಒಂದು ತೆಂಗಿನಕಾಯಿಯ ಈಡಿಗೆ ಗುಂಡು ಹೊಡೆಯುವನು. ಬಳಿಕ ಒಬ್ಬೊಬ್ಬರಾಗಿ ಗುಂಡು ಹೊಡೆಯುವರು. ಗುಂಡು ಹೊಡೆದು ಕಾಯನ್ನು ಉರುಳಿಸಿದವರಿಗೆ ಸ್ವಲ್ಪ ಹಣವನ್ನು ಸಾಂಕೇತಿಕ ಬಹುಮಾನವನ್ನಾಗಿ ಕೊಡುವರು. ಆ ನಂತರ ಓಟ, ಜಿಗಿತ, ಭಾರದ ಕಲ್ಲೆತ್ತುವದು ಮೊದಲಾದ ಕ್ರೀಡಾಸ್ಪರ್ಧೆಗಳು ಮಾಡುತ್ತಾರೆ. ಆ ಕ್ರೀಡಾಕೂಟಗಳಲ್ಲಿ ಪುರುಷರು ಮಹಿಳೆಯರು ಎಲ್ಲರೂ ಪಾಲ್ಗೊಂಡು ತಮ್ಮ ಶೌರ್ಯ  ಪ್ರದರ್ಶಿಸಿಸುತ್ತಾರೆ.

ಸಾಮಾನ್ಯವಾಗಿ ಕೈಲ್ ಮುಹೂರ್ತ ಹಬ್ಬದಲ್ಲಿ ಹಂದಿ ಮಾಂಸ ಸಾರು(ಪಂದಿಕರಿ) ಹಾಗೂ ಕಡುಬು(ಕಡಂಬಿಟ್ಟು) ಪ್ರಧಾನ ಭಕ್ಷ್ಯವಾಗಿರುವುದರಿಂದ ಎಲ್ಲಿಲ್ಲದ ಬೇಡಿಕೆಯಿರುವುದನ್ನು ಕಾಣಬಹದು.