ಕುಶಾಲನಗರ : ಬೀಟೆ ಮರ ಸಾಗಾಟ : ನಾಲ್ವರು ಆರೋಪಿಗಳ ಬಂಧನ

16/09/2022

ಮಡಿಕೇರಿ ಸೆ.16 : ಅಕ್ರಮವಾಗಿ ಬೀಟೆ ಮರಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಕುಶಾಲನಗರ ಅರಣ್ಯಾಧಿಕಾರಿಗಳು ಮಾಲು ಸಹಿತ ಬಂಧಿಸಿದ್ದಾರೆ. 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಮರ ಮತ್ತು 2 ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ದೊಡ್ಡಬೆಟ್ಟಗೇರಿ ಗ್ರಾಮ ವ್ಯಾಪ್ತಿಯಲ್ಲಿ ಟಾಟಾ ಎಸಿ ಮತ್ತು ಬೊಲೇರೋ ಜೀಪ್‌ಗಳಲ್ಲಿ ಭತ್ತದ ಹೊಟ್ಟುಗಳನ್ನು ತುಂಬಿಸಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ವಾಹನದಲ್ಲಿದ್ದ ಎನ್.ಕುಮಾರ, ರಮೇಶ, ತಂಗರಾಜ ಹಾಗೂ ಟಿ.ಆರ್‌ರಮೇಶ ಎಂಬುವವರುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಮ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಎನ್‌ದೇವಯ್ಯ, ಅನಿಲ್ ಡಿಸೋಜ, ಕೆ.ಎಸ್.ಸುಬ್ರಾಯ, ಅರಣ್ಯ ರಕ್ಷಕರಾದ ಸಿದ್ಧರಾಮ ನಾಟಿಕಾರ್, ರವಿ ಉತ್ನಾಳ್, ಮಂಜೇಗೌಡ, ಸಚಿನ್, ವಾಹನ ಚಾಲಕರಾದ ಜೇಮ್ಸ್ ಗಾಲ್ವಿನ್, ಆರ್‌ಆರ್‌ಟಿ ಸಿಬ್ಬಂದಿಗಳಾದ ಸಿದ್ದ ಯೋಗೇಶ್ ಹಾಗೂ ಮಂಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.