ಮೈಸೂರಿನಲ್ಲಿ ವಿದ್ಯುತ್ ದೀಪ ಬೆಳಗಿದ ಇತಿಹಾಸ

20/09/2022

ದಕ್ಷಿಣ ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ನಾಂದಿ ಹಾಡಿದ ರಾಜ್ಯ ಕರ್ನಾಟಕ, 1902ರ ಜೂನ್ 30 ರಂದು ಮೊದಲ ಬಾರಿಗೆ ಕೋಲಾರದ ಚಿನ್ನದಗಣಿಗೆ ಶಿವನ ಸಮುದ್ರದಿಂದ ವಿದ್ಯುತ್‌ ಸರಬರಾಜು ಆರಂಭವಾಯಿತು. 1905ರ ಆಗಸ್ಟ್ 5 ರಂದು ಬೆಂಗಳೂರು ನಗರದ ಮಾರುಕಟ್ಟೆ ಪ್ರದೇಶದಲ್ಲಿ ವಿದ್ಯುತ್ ದೀಪಗಳು ಬೆಳಗಿದರೆ ಮೈಸೂರಿನಲ್ಲಿ 1908 ರ ಸೆಪ್ಟೆಂಬರ್ 26 ರಂದು ವಿದ್ಯುತ್‌ ದೀಪಗಳು ಬೆಳಗಿತು.

ಮೈಸೂರು ಕರ್ನಾಟಕದ ಹೆಮ್ಮೆಯ ಮಾದರಿ ನಗರವಾಗಿದ್ದು, ಜಗತ್ತಿನ ಸುಂದರ ನಗರಗಳಲ್ಲಿ ಒಂದಾಗಿದೆ ಹಾಗೂ ಕರ್ನಾಟಕದ ಸಂಸ್ಕೃತಿಯ ಕೇಂದ್ರವಾಗಿದೆ. ವಿಶ್ವದಲ್ಲೇ ಬಹು ಪ್ರಸಿದ್ಧವಾದ ಇಲ್ಲಿನ ಅರಮನೆ ವಿದ್ಯುತ್‌ ದೀಪಗಳಿಂದ ಬೆಳಗಿದರೆ ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು. ಇಂತಹ ಮೈಸೂರಿಗೆ ವಿದ್ಯುಚ್ಛಕ್ತಿ ಪ್ರವೇಶಿಸಿದ ಇತಿಹಾಸ ಕುತೂಹಲಕರವಾಗಿದೆ.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ 1908ರ ಸೆಪ್ಟೆಂಬರ್ 26ನೇ ಶನಿವಾರ ನವರಾತ್ರಿ ಹಬ್ಬದ ಕಟ್ಲೆಯ ಉತ್ಸವಗಳು ಪ್ರಾರಂಭವಾದವು. ( ಈಗಿನ ಅರಮನೆಯ ನಿರ್ಮಾಣದ ಕಾರ್ಯ ಮುಗಿಯುವ ಹಂತದಲ್ಲಿತ್ತು) ಆ ದಿನ ಪ್ರಾತಃಕಾಲ ಮಹಾರಾಜ ಶ್ರೀ ನಾಲ್ವಡಿಕೃಷ್ಣರಾಜ ಒಡೆಯರ್‌ರವರು ಮಂಗಳ ಸ್ನಾನ ಆಹ್ನಿಕಗಳನ್ನೂ, ಪೂಜಾದಿಗಳನ್ನೂ ನೆರವೇರಿಸಿ, ಮಹಾಮಾತೃಶ್ರೀಯವರ ಮತ್ತು ಅರಮನೆ ಗುರುಗಳ ಆಶೀರ್ವಾದಗಳನ್ನು ಸ್ವೀಕರಿಸಿ, ದರ್ಬಾರ್ ಪೋಷಾಕಿನೊಡನೆ ಪಲ್ಲಕ್ಕಿಯಲ್ಲಿ ಕುಳಿತು ವಾದ್ಯ, ಓಲಗ, ತಾಳ ಮೇಳಗಳ ಸಮೇತ ಕರಿಕಲ್ಲು ತೊಟ್ಟಿಯಿಂದ ಜಗನ್ಮೋಹನ ಬಂಗಲೆಗೆ ಮೆರವಣಿಗೆಯಲ್ಲಿ ಚಿತ್ತೈಸಿದರು. ದರ್ಬಾರ್ ಮಂದಿರದಲ್ಲಿ ಋತ್ವಿಕ್ಕರು, ಶಾಸ್ತ್ರಿಗಳು, ಜೋಯಿಸರು, ಪಂಡಿತರು, ಪುರೋಹಿತರು ಮೊದಲಾದ ವೈದಿಕ ಮಂಡಲಿಯವರು, ಹಾಗೂ ರಾಜಒಡೆಯರು, ದಿವಾನರು, ಕೌನ್ಸಿಲ್ ಮೆಂಬರುಗಳು, ಮುನಿಸಿಪಲ್ ಕೌನ್ಸಿಲರುಗಳು, ಕಾರ್ಯದರ್ಶಿಗಳು, ನ್ಯಾಯಾಧೀಶರುಗಳು, ವಕೀಲರುಗಳು, ಎಲ್ಲಾ ಕೋಮುಗಳ ಮತ್ತು ಕಸುಬುಗಳ ಪ್ರತಿನಿಧಿಗಳು ಮೊದಲಾದವರು ಹಾಜರಿದ್ದರು.

ಕೃಷ್ಣರಾಜ ಒಡೆಯರ್‌ರವರು ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಸಮೇತ ಬೆಳಗ್ಗೆ 11.30 ಕ್ಕೆ ದರ್ಬಾರ್ ಮಂದಿರಕ್ಕೆ ದಯಮಾಡಿಸಿ ವೈದಿಕರ ಮುಖೇನ ಶಾಸ್ತ್ರೋಕ್ತವಾದ ಪೂಜೆ ಮುಂತಾದದ್ದನ್ನೂ, ದಾನಾದಿಗಳನ್ನೂ ಮಾಡಿ, ಸಿಂಹಾಸನಕ್ಕೆ ಮೂರಾವರ್ತಿ ಪ್ರದಕ್ಷಿಣೆ ಮಾಡಿ ಸಮಸ್ತ ದರ್ಬಾರಿಗಳು, ಸೈನಿಕರು ಮಾಡಿದ ಮುಜರೆಗೆ ಪ್ರತಿಯನ್ನಿತ್ತು ಸಿಂಹಾಸನದಲ್ಲಿ ಕುಳಿತುಕೊಂಡರು. ಕೂಡಲೇ ಕಹಳೆ, ವಾದ್ಯ, ಓಲಗ ತಾಳಮೇಳಗಳೂ ಮೊಳಗಿದವು. ನಂತರ ಗೌರವಾರ್ಥವಾಗಿ 21 ತೋಪುಗಳು ಹಾರಿಸಲ್ಪಟ್ಟವು. ತರುವಾಯ ಪಟ್ಟದಾನೆ ಹಾಗೂ ಕುದುರೆಗಳ ಮೆರವಣಿಗೆ ಹೊರಟಿತು, ಗುರುಪೀಠಗಳಿಂದ ಕಳುಹಿಸಲ್ಪಟ್ಟಿದ್ದ ಆಶೀರ್ವಾದಪೂರ್ವಕವಾದ ಬಿಲ್ಪತ್ರೆ ಫಲಮಂತ್ರಾಕ್ಷತೆಯನ್ನು ವೈದಿಕ ಮಂಡಲಿಯವರು ಮಹಾರಾಜರಿಗೆ ಒಪ್ಪಿಸಿದ ನಂತರ ಅಕ್ಷತೆಯನ್ನು ಅವರ ಶಿರಸ್ಸಿನ ಮೇಲೆ ಮಹಾರಾಜರು ಪ್ರೋಕ್ಷಿಸಿದರು. ಅರಸುಗಳು, ಲೌಕಿಕ ಮಂಡಲಿಯವರು ಸಾಲಾಗಿ ಬಂದು, ವಂದನೆ ಸಲ್ಲಿಸಿ, ಮಹಾರಾಜರವರಿಗೆ ನಜರು(ಕಪ್ಪ)ಗಳನ್ನೊಪ್ಪಿಸಿದರು.

ಮಹಾರಾಜರು ನಜರುಗಳನ್ನು ಮುಟ್ಟಿ ವಾಪಸ್ಸು ದಯಪಾಲಿಸಿದರು. ಕಡೆಯಲ್ಲಿ ಸೈನಿಕರೆಲ್ಲಾ “ಶ್ರೀಮನ್ಮಹಾರಾಜಾ ನಾಲ್ವಡಿ ಕೃಷ್ಣರಾಜಒಡೆಯರ್ ಬಹದೂರ್ ಕಿ ಜೈ” ಎಂದು ಧ್ವನಿಯೆತ್ತಿ ಜಯಘೋಷ ಮಾಡಿದರು. ಪಟ್ಟದಾನೆ, ಕುದುರೆಗಳು ಮೆರವಣಿಗೆಯಲ್ಲಿ ಬಂದು ಮಹಾರಾಜರಿಗೆ ಮುಜರೆ ಸಲ್ಲಿಸಿದ ಮೇಲೆ ದರ್ಬಾರ್ ಮಂದಿರದಲ್ಲಿ ಮಹಾರಾಜರು ವೈದಿಕ ಲೌಕಿಕರುಗಳಿಗೆ ಹೂವಿನ ಹಾರ ಹಾಕಿ ತಾಂಬೂಲ ವಿನಿಯೋಗ ಮಾಡಿದರು. ದರ್ಬಾರಿಗಳೆಲ್ಲಾ ಎದ್ದು ಮುಜರೆ ಸಲ್ಲಿಸಿ ತೆರಳಿದರು. ಕೊನೆಯಲ್ಲಿ ಮಹಾರಾಜರು ಎಲ್ಲರಿಗೂ ಪ್ರಸಾದವನ್ನು ನೀಡಿದರು.

ನವರಾತ್ರಿಯ ಪ್ರಥಮ ದಿನದ ಈ ಎಲ್ಲಾ ಕಾರ್ಯಕ್ರಮಗಳು ಮುಗಿಯುವ ಹೊತ್ತಿಗೆ ಸಂಜೆಯಾಗಿತ್ತು. ಆ ಸಮಯಕ್ಕೆ ಮೋಡ ಕವಿದು ಮಳೆ ಸುರಿಯುತ್ತಿದ್ದರಿಂದ ಅಂಧಕಾರವು ಬಹಳ ಹೆಚ್ಚಾಗಿತ್ತು. ರಾತ್ರಿ 7 ಗಂಟೆ 20 ನಿಮಿಷಕ್ಕೆ ಸರಿಯಾಗಿ ನಾಲ್ವಡಿಯವರು ಪುನಃ ದರ್ಬಾರ್ ಮಂದಿರಕ್ಕೆ ಚಿತ್ತೈಸಿ ವಾದ್ಯಗಳು ಮೊಳಗುತ್ತಿರಲು ಮೆಟ್ಟಲುಗಳನ್ನು ಹತ್ತಿ ಸಿಂಹಾಸನದ ಮೇಲೆ ಆಸೀನರಾದರು. ಕರ್ಜನ್ ಪಾರ್ಕಿನ ಪೂರ್ವ ದಿಕ್ಕಿನಲ್ಲಿ ನಿರ್ಮಿಸಿದ್ದ ಟ್ರಾನ್ಸ್‌ಫಾರ್ಮರ್ ಹೌಸ್‌ನಿಂದ ಜಗಮೋಹನ ಅರಮನೆಯ ದರ್ಬಾರ್ ಮಂದಿರಕ್ಕೆ ತಂತಿಯನ್ನು ತಂದು ಆರು ದೀಪಗಳುಳ್ಳ ಎರಡು ಕಂಬಗಳಿಗೆ ವಿದ್ಯುತ್‌ ಸಂಚರಿಸುವ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ದಿವಾನ್ ವಿ.ಪಿ.ಮಾಧವರಾಯರು ಪುಷ್ಪಗಳ ಮಧ್ಯೆ ಒಂದು ಚಂಡನ್ನಿಟ್ಟಿದ್ದ ಚಿನ್ನದ ತಟ್ಟೆಯನ್ನು ಹಿಡಿದು ತಂದು ಮಹಾರಾಜರಿಗೆ ಒಪ್ಪಿಸಿದರು. ಮಹಾರಾಜರು ಚಂಡಿನಲ್ಲಿದ್ದ

ಗುಂಡಿಯನ್ನು ಒತ್ತಿದಕೂಡಲೆ ಅದರ ಅಡಿಯಿಂದ ಹೊರಟಿದ್ದ ತಂತಿಯ ಮೂಲಕ ವಿದ್ಯುಚ್ಛಕ್ತಿಯ  ಟ್ರಾನ್ಸ್‍ಫಾರ್ಮರ್  ಹೌಸ್‌ಗೆ ವರ್ತಮಾನ ತಲುಪಿ ಅಲ್ಲಿಂದ ದರ್ಬಾರ್ ಮಂದಿರದ ದೀಪದ ಕಂಬಗಳಿಗೆ ಬಂದು ದಿವ್ಯವಾದ ಹನ್ನೆರಡು ದೀಪಗಳು ಉರಿಯಲಾರಂಭಿಸಿತು.

ಅದೇ ಸಂದರ್ಭದಲ್ಲಿ ಟ್ರಾನ್ಸ್‍ಫಾರ್ಮರ್ ಹೌಸ್‌ನಲ್ಲಿ ಯಂತ್ರಗಳ ಗುಂಡಿಯನ್ನು ಒತ್ತಿ ಪಟ್ಟಣಕ್ಕೆಲ್ಲಾ ವಿದ್ಯುತ್‌ ದೀಪಗಳು ಏಕಕಾಲದಲ್ಲಿ ಪ್ರಕಾಶಿಸುವಂತೆ ಮಾಡಿದರು. ಈ ದೀಪಗಳಿಂದ ಜಗಮ್ಮೋಹನ ಅರಮನೆಯಲ್ಲಿ ಪ್ರಕಾಶಮಾನವಾದ ಬೆಳಕು ಉಂಟಾದದ್ದು ಮೈಸೂರಿನ ಜನರಲ್ಲಿ ಪರಮಾಶ್ಚರ್ಯವನ್ನುಂಟು ಮಾಡಿತು. ಈ ರೀತಿಯಾಗಿ 1908ರ ನವರಾತ್ರಿ ಹಬ್ಬದ ಪ್ರಾರಂಭದ ದಿನದಂದು ನಾಲ್ವಡಿ ಕೃಷ್ಣರಾಜ ಒಡೆಯರು ವಿದ್ಯುತ್‌ ದೀಪಗಳ ಪ್ರಾರಂಭೋತ್ಸವವನ್ನು ನೆರವೇರಿಸಿದರು. (ಆನಂತರ ನಾಲ್ವಡಿಯವರು ಅಂದಿನ ರಾಜಧಾನಿಯಾದ ಮೈಸೂರಿಗೆ ನವೀನವಾದ ವಿದ್ಯುತ್‌ ದೀಪಗಳನ್ನು ತರಿಸಿದರು.) ಅಂದಿನಿಂದ ‘ಶ್ರೀಕೃಷ್ಣರಾಜಭೂಪ ಮನೆಮನೆಗೂ ದೀಪ’ ಎಂದು ಮೈಸೂರು ಜನರ ಮನೆಮಾತಾಯಿತು.

1908ಕ್ಕೂ ಮುಂಚೆ ಮೈಸೂರು ನಗರದ ಮುಖ್ಯ ರಸ್ತೆಗಳಲ್ಲಿ ಮರ, ಕಲ್ಲು ಅಥವಾ ಕಬ್ಬಿಣದ ಕಂಬಗಳನ್ನು ನೆಟ್ಟು ಅದರ ಮೇಲೆ ಸೀಮೆಎಣ್ಣೆ ದೀಪಗಳನ್ನಿಡಲಾಗಿತ್ತು. ಸಂಜೆ ಆದೊಡನೆ ಅದಕ್ಕಾಗಿ ನಿಯಮಿಸಲ್ಪಟ್ಟ ನೌಕರನೊಬ್ಬ ಏಣಿಯೊಡನೆ ಬಂದು ದೀಪದ ಸುತ್ತಲಿನ ಗಾಜುಗಳನ್ನು ಶುಚಿ ಮಾಡಿ ಹೋಗುತ್ತಿದ್ದರೆ, ಇನ್ನೊಬ್ಬ ನೌಕರ ಅದೇ ರೀತಿ ಬಂದು ಸೀಮೆಎಣ್ಣೆ ಹಾಕಿ ದೀಪವನ್ನು ಹಚ್ಚುತ್ತಿದ್ದ. ಈ ಕಾರ್ಯವನ್ನು ಮಾಡುತ್ತಿದ್ದ ವ್ಯಕ್ತಿಗೆ ‘ದೀಪಪ್ಪ’ ಎಂದು ಕರೆಯುತ್ತಿದ್ದರು. ಮನೆಗಳಲ್ಲಿ ಮತ್ತು ವ್ಯಾಪಾರ ಸ್ಥಳಗಳಲ್ಲಿ ದೀಪಕ್ಕೆ ಹರಳೆಣ್ಣೆ ಅಥವಾ ಸೀಮೆ ಎಣ್ಣೆ ಬಳಕೆಯಾಗುತ್ತಿತ್ತು.

ಸೆಪ್ಟೆಂಬರ್ 26ಕ್ಕೆ ಮೈಸೂರಿಗೆ ವಿದ್ಯುತ್ ಸರಬರಾಜು ಆಗಿ ಒಂದು ಶತಮಾನ ಕಳೆದು 15 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸವನ್ನು ನೆನಪಿಸುವಂತೆ ಮಾಡಿದೆ.

ಬರಹ : ಮೇಮಗಲ್ ಸೋಮಶೇಖರ್
ಕೃಪೆ : ವಾರ್ತಾ ಜನಪದ
ಸಂಚಿಕೆ-12