ವಿರಾಜಪೇಟೆಯಲ್ಲಿ ಗಾಂಜಾ ದಂಧೆ : ಒಡಿಸ್ಸಾ ಮೂಲದ ಫಾಸ್ಟ್ ಫುಡ್ ವ್ಯಾಪಾರಿಯ ಬಂಧನ

20/09/2022

ಮಡಿಕೇರಿ ಸೆ.20 : ದಕ್ಷಿಣ ಕೊಡಗಿನ ಕೆಲವು ಕಾಲೇಜುಗಳಲ್ಲಿ ಕ್ಯಾಂಟೀನ್ ವ್ಯವಹಾರದಲ್ಲಿ ತೊಡಗಿದ್ದ ಒಡಿಸ್ಸಾ ಮೂಲದ ವ್ಯಕ್ತಿಯೊಬ್ಬನನ್ನು ಗಾಂಜಾ ದಂಧೆ ನಡೆಸುತ್ತಿದ್ದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.
ಒಡಿಸ್ಸಾ ರಾಜ್ಯದ ಕೊರಪೂತ್ ಜಿಲ್ಲೆ ಮಲ್ಕನಗಿರಿ ಲಕ್ಷ್ಮೀಪುರ ಗ್ರಾಮದ ನಿವಾಸಿ, ವಿರಾಜಪೇಟೆ ಕೊಡವ ಸಮಾಜದ ಬಳಿಯಲ್ಲಿ ನೆಲೆಸಿದ್ದ ಸೂರ್ಯಕಾಂತ್ ಮೊಹಂತಿ (36) ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಈತನ ಬಳಿಯಿಂದ ಒಟ್ಟು 6.480 ಕೆ.ಜಿ. ಗಾಂಜಾ, ಕೃತ್ಯಕ್ಕೆ ಬಳಸಿದ್ದ ಕಾರು, ಎರಡು ಮೊಬೈಲ್ ದೂರವಾಣಿಗಳು ಹಾಗೂ 1200 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಸುಮಾರು ಒಂದೂವರೆ ದಶಕಗಳ ಹಿಂದೆ ತನ್ನ ಅಣ್ಣನೊಂದಿಗೆ ವಿರಾಜಪೇಟೆಗೆ ಬಂದು ನೆಲೆಸಿದ್ದ ಸೂರ್ಯಕಾಂತ್ ಮೊಹಂತಿ, ಚೈನೀಸ್ ಫಾಸ್ಟ್ ಫುಡ್ ಅಂಗಡಿ ಮಳಿಗೆ ತೆರೆದು ವ್ಯಾಪಾರ ನಡೆಸುತ್ತಿದ್ದ. ನಂತರದ ದಿನಗಳಲ್ಲಿ ಗೋಣಿಕೊಪ್ಪಲು, ಪೊನ್ನಂಪೇಟೆ ವಿಭಾಗದ ಕಾಲೇಜುಗಳಲ್ಲಿ ಕ್ಯಾಂಟೀನ್ ವ್ಯವಹಾರವನ್ನು ಆರಂಭಿಸಿದ್ದ.
ಹೊರ ಜಗತ್ತಿಗೆ ಕ್ಯಾಂಟೀನ್ ವ್ಯವಹಾರ ನಡೆಸುವ ಮುಗ್ಧನಂತೆ ತೋರ್ಪಡಿಸಿಕೊಂಡಿದ್ದ ಸೂರ್ಯಕಾಂತ್ ಮೊಹಂತಿ ಗೌಪ್ಯವಾಗಿ ಒಡಿಸ್ಸಾದ ತನ್ನ ಊರಿನಿಂದ ಅಕ್ರಮವಾಗಿ ಗಾಂಜಾವನ್ನು ತಂದು, ಕೇರಳದ ಗಾಂಜಾ ದಂಧೆಯ ಜಾಲದೊಂದಿಗೆ ಸಂಪರ್ಕ ಸಾಧಿಸುತ್ತಿದ್ದ. ಅಧಿಕ ಬೆಲೆಗೆ ಗಾಂಜಾ ಮಾರಾಟ ಮಾಡಿ ಅಲ್ಪ ಕಾಲದಲ್ಲೆ ಹೇರಳ ಹಣ ಸಂಪಾದಿಸಿದ್ದ ಎಂದು ಆರೋಪಿಸಲಾಗಿದೆ.
ಈತನ ವ್ಯವಹಾರದ ಬಗ್ಗೆ ಸಂಶಯವಿದ್ದ ಪೊಲೀಸರು, ಖಚಿತ ಸುಳಿವಿನ ಹಿನ್ನೆಲೆೆ ಸೆ.19 ರಂದು ಕೇರಳ ವ್ಯಕ್ತಿಗಳಿಗೆ ಮಾರಾಟ ಮಾಡಲು ತನ್ನ ಅಣ್ಣನ ಕಾರು ಹುಂಡೈ ಸ್ಯಾಂಟ್ರೋದಲ್ಲಿ ಗಾಂಜಾದೊoದಿಗೆ ತೆರಳುತ್ತಿದ್ದ ಸಂದರ್ಭ ದಾಳಿ ನಡೆಸಿದರು. ಸಂರ್ಯಕಾoತ್ ನನ್ನು ಆರ್ಜಿ ಗ್ರಮದಲ್ಲಿ ಬಂಧಿಸಿ, ಮಾರಾಟಕ್ಕೆ ಸಿದ್ಧಗೊಂಡಿದ್ದ 3.10ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಬಳಿಕ ಪೊಲೀಸರು ಎಫ್.ಎಂ.ಸಿ ರಸ್ತೆಯ ಖಾಸಗಿ ಕಟ್ಟಡದಲ್ಲಿ ನಡೆಸುತಿದ್ದ ಚೈನೀಸ್ ಫಾಸ್ಟ್ ಪುಡ್ ಅಂಗಡಿಯನ್ನು ತಪಾಸಣೆ ಮಾಡಿ 68 ಗಾಂಜಾ ಪೊಟ್ಟಣಗಳು ವಶಕ್ಕೆ ಪಡೆದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವಿರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ, ವೀರಾಜಪೇಟೆ ನಗರ ಪಿಎಸ್‌ಐ ಸಿ.ಎ.ಶ್ರೀಧರ್, ಜಿಲ್ಲಾ ಸಿ.ಡಿ.ಆರ್. ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್ ಮತ್ತು ಪ್ರಮೀಣ್, ಅಪರಾಧ ವಿಭಾಗದ ಪಿ.ಎಸ್.ಐ. ಎಂ.ಸಿ.ಮುತ್ತಣ್ಣ, ಪ್ರೊಬೇಷನರಿ ಪಿ.ಎಸ್.ಐ. ಮಂಜುನಾಥ್, ಸಿಬ್ಬಂದಿಗಳಾದ ಗಿರೀಶ್, ಮುಸ್ತಫ, ಧರ್ಮ, ಸತೀಶ್, ಶೆಟ್ಟಪ್ಪ, ಚಾಲಕರಾದ ರಮೇಶ್ ಹಾಗೂ ಅಭಿಷೇಕ್ ಪಾಲ್ಗೊಂಡಿದ್ದರು.