ಅ.21 ರಂದು ಕೊಡಗಿನಲ್ಲಿ ಕಾವೇರಿ ನದಿ ಉತ್ಸವ : ಮುಖ್ಯಮಂತ್ರಿಗಳ ಉಪಸ್ಥಿತಿ

21/09/2022

ಮಡಿಕೇರಿ ಸೆ.21 : ಕಳೆದ ವರ್ಷ ಕಾರಣಾಂತರಗಳಿಂದ ಮುಂದೂಲ್ಪಟ್ಟಿದ್ದ ಕಾವೇರಿ ನದಿ ಉತ್ಸವ ಅ.21 ರಂದು ಕೊಡಗಿನಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಜಿಲ್ಲೆಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಶಾಸಕದ್ವಯರಾದ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಕೆ.ಜಿ.ಬೋಪಯ್ಯ ಅವರುಗಳ ನೇತೃತ್ವದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾವೇರಿ ನದಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿತು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರನ್ನು ಕೂಡ ನಿಯೋಗ ಇದೇ ಸಂದರ್ಭ ಭೇಟಿ ನೀಡಿ ಉತ್ಸವಕ್ಕೆ ಆಹ್ವಾನಿಸಿತು.
ಅ.21 ರಂದು ಜಿಲ್ಲೆಯ ತಲಕಾವೇರಿ, ಭಾಗಮಂಡಲ, ಕುಶಾಲನಗರ ವ್ಯಾಪ್ತಿಯಲ್ಲಿ ನದಿ ಉತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿ ಮಾಹಿತಿ ನೀಡಲಾಯಿತು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ತಿಳಿಸಿದರು.
ಪ್ರಮುಖರಾದ ರೀನಾ ಪ್ರಕಾಶ್, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಪೊನ್ನಪ್ಪ, ಮಣಿ ನಂಜಪ್ಪ, ಗಗನ್ ಗಣಪತಿ, ಪ್ರತೀಶ್ ಮತ್ತಿತರರು ನಿಯೋಗದಲ್ಲಿದ್ದರು.