ಕಡಗದಾಳು ಗ್ರಾ.ಪಂ ಯಿಂದ ಜನಜಾಗೃತಿ ಹಾಗೂ ಸ್ವಚ್ಛತಾ ಶ್ರಮದಾನ

22/09/2022

ಮಡಿಕೇರಿ ಸೆ.22 : ಕೇಂದ್ರ ಸರ್ಕಾರದ ‘ಸ್ವಚ್ಛತಾ ಸೇವಾ’ ಆಂದೋಲನದ ಭಾಗವಾಗಿ ಜನಜಾಗೃತಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಕಡಗದಾಳು ಗ್ರಾಮ ಪಂಚಾಯಿತಿ ವತಿಯಿಂದ ನಡೆಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ‘ಸ್ವಚ್ಛತಾ ಸೇವಾ’ ಆಂದೋಲನವನ್ನು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲಶಕ್ತಿ ಮಂತ್ರಾಲಯ ವತಿಯಿಂದ ರಾಷ್ಟ್ರವ್ಯಾಪಿ ಅಭಿಯಾನ ನಡೆಸಲಾಗುತ್ತಿದೆ. ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಸಂಪೂರ್ಣ ಗ್ರಾಮವನ್ನು ಕಸ ಮುಕ್ತವಾಗಿಸುವುದೇ ಇದರ ಮುಖ್ಯ ಉದ್ದೇಶ. ಪ್ರತಿ ಗ್ರಾಮ ಸ್ವಚ್ಛವಾದರೆ ಭಾರತ ಸ್ವಚ್ಛವಾಗಿರುತ್ತದೆ ಎಂದರು.
ಗ್ರಾಮ ವ್ಯಾಪ್ತಿಯಲ್ಲಿರುವ ಬಸ್ ತಂಗುದಾಣ, ರಸ್ತೆ ಬದಿ, ಅಂಗನವಾಡಿ, ಆಸ್ಪತ್ರೆ, ಶಾಲೆ-ಕಾಲೇಜು, ಉದ್ಯಾನವನ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳ ಶುಚಿತ್ವ ಕಾಪಾಡುವುದಕ್ಕೆ ಪ್ರತಿಯೊಬ್ಬ ನಾಗರಿಕನೂ ಸ್ವಯಂಪ್ರೇರಿತವಾಗಿ ಆಸಕ್ತನಾಗಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಸ್ವಚ್ಛತೆಯ ಪ್ರತಿಜ್ಞಾ ವಿಧಿಯನ್ನು ಪಿಡಿಒ ದೇವಿಕಾ ಬೋಧಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಶಂಭಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಬಳಿಕ ಪಂಚಾಯಿತಿ ಬಳಿಯ ಸಾರ್ವಜನಿಕ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಸಿಇಒ ಭಂವರ್ ಸಿಂಗ್ ಮೀನಾ ಸಾರ್ವಜನಿಕರ ಜತೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಸದಸ್ಯರಾದ ಪಿ.ಬಿ. ಭಾರತಿ, ವಿ.ಜಿ. ಆನಂದ, ಸಂಜೀವಿನಿ ಒಕ್ಕೂಟದ ಸದಸ್ಯರು, ಸಾರ್ವಜನಿಕರು ಈ ಸಂದರ್ಭ ಇದ್ದರು.