ಕನ್ನಂಡಬಾಣೆ ಪಂಪ್‍ಹೌಸ್ : ಕಾರ್ಯ ಆರಂಭಿಸದ ನೀರು ಶುದ್ಧೀಕರಣ ಯಂತ್ರ : ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧಾರ

22/09/2022

ಮಡಿಕೇರಿ ಸೆ.22 : ಕನ್ನಂಡಬಾಣೆ ಪಂಪ್‍ಹೌಸ್ ನಿಂದ ಕಲುಷಿತ ನೀರು ಪೂರೈಕೆ ಮತ್ತು ಕಾರ್ಯವನ್ನೇ ಆರಂಭಿಸದ ಲಕ್ಷಾಂತರ ರೂ.ಮೌಲ್ಯದ ನೀರು ಶುದ್ಧೀಕರಣ ಯಂತ್ರದ ಕುರಿತು ಲೋಕಾಯುಕ್ತರಿಗೆ ದೂರು ನೀಡುವುದಾಗಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ತಿಳಿಸಿದೆ.
ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್ ಅವರ ನೇತೃತ್ವದಲ್ಲಿ ನಗರಸಭಾ ಪೌರಾಯುಕ್ತ ವಿಜಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಪದಾಧಿಕಾರಿಗಳು ತಕ್ಷಣ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ತಿಂಗಳು ಲೋಕಾಯುಕ್ತರಿಗೆ ದೂರು ನೀಡುವುದಾಗಿ ತಿಳಿಸಿದರು.
ಕಲುಷಿತ ನೀರು ಪೂರೈಕೆ ಮತ್ತು ನೀರು ಶುದ್ಧೀಕರಣ ಯಂತ್ರ ಕಾರ್ಯನಿರ್ವಹಿಸದೆ ಇರುವ ಬಗ್ಗೆ ಹಲವು ಬಾರಿ ನಗರಸಭೆಯ ಗಮನ ಸೆಳೆಯಲಾಗಿದೆ. ಸಾಮಾನ್ಯ ಸಭೆಯಲ್ಲಿಯೂ ವಿಷಯ ಪ್ರಸ್ತಾಪವಾಗಿದೆ. ಆದರೆ ಇಲ್ಲಿಯವರೆಗೆ ಯಂತ್ರದ ದುರಸ್ತಿ ಕಾರ್ಯ ನಡೆದಿಲ್ಲ ಹಾಗೂ ಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಶುದ್ಧ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಒಂದೂವರೆ ವರ್ಷದ ಹಿಂದೆ ನಗರಸಭೆ ವತಿಯಿಂದ ನೀರು ಶುದ್ಧೀಕರಣ ಯಂತ್ರವನ್ನು ಅಳವಡಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪೈಪ್ ಲೈನ್ ಅಳವಡಿಸಿಲ್ಲ, ಲಕ್ಷಾಂತರ ರೂ. ಬೆಲೆಯ ಯಂತ್ರ ನಿಷ್ಕ್ರಿಯವಾಗಿ ನಿಂತಿದೆ. ಸಾರ್ವಜನಿಕರ ತೆರಿಗೆ ಹಣ ಕೆಲಸ ಮಾಡದ ಯಂತ್ರದ ರೂಪದಲ್ಲಿ ಪೋಲಾಗಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಒತ್ತಾಯಿಸುವುದಾಗಿ ಗಮನ ಸೆಳೆದರು.
ಕನ್ನಂಡಬಾಣೆ ಪಂಪ್‍ಹೌಸ್ ನಿಂದ ನಗರದ ಹಲವು ವಾರ್ಡ್‍ಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ವಾರ್ಡ್ ಸಂ.6 ರಲ್ಲಿರುವ ಕನ್ನಂಡಬಾಣೆಯ ಪಂಪ್‍ಹೌಸ್‍ನ ಬಾವಿಯಿಂದ ಕನ್ನಂಡಬಾಣೆ, ಪುಟಾಣಿನಗರ, ದೇಚೂರು, ಪೊಲೀಸ್ ವಸತಿಗೃಹ, ಆಸ್ಪತ್ರೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ನೀರು ಸರಬರಾಜಾಗುತ್ತದೆ. ಸುಮಾರು 20 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಶುದ್ಧೀಕರಿಸದ ಕಲುಷಿತ ನೀರು ಪೂರೈಕೆಯಾಗುತ್ತಿದೆ.
ಪಂಪ್‍ಹೌಸ್ ಸುತ್ತಮುತ್ತ ಇರುವ ಕೆಲವು ಮನೆಗಳ ಕಲುಷಿತ ನೀರು ಜಲಮೂಲ ಸೇರುತ್ತಿದೆ. ಜಲ ಹರಿದು ಬರುವ ಪ್ರದೇಶ ಸಂಪೂರ್ಣ ಕಾಡುಗಳಿಂದ ತುಂಬಿದ್ದು, ಕೊಳಚೆ ನೀರು ಪಂಪ್‍ಹೌಸ್ ಬಾವಿಗೆ ಸೇರುತ್ತಿದೆ. ಪಂಪ್ ಹೌಸ್ ನ ಅಭಿವೃದ್ಧಿಗಾಗಿ ಇಲ್ಲಿಯವರೆಗೆ ಕೋಟ್ಯಾಂತರ ರೂ. ಹಣವನ್ನು ಖರ್ಚು ಮಾಡಲಾಗಿದೆ. ಆದರೆ ಯಾವುದೇ ನಿರ್ವಹಣೆ ಇಲ್ಲದೆ ಅಶುದ್ಧ ನೀರು ಜನರ ಪಾಲಾಗುತ್ತಿದೆ. ಕಲುಷಿತ ನೀರಿಗೆ ಅಲಮ್ ಹಾಗೂ ಬ್ಲೀಚಿಂಗ್ ಪೌಡರ್ ಹಾಕಿ ಸರಬರಾಜು ಮಾಡಲಾಗುತ್ತಿದೆ. ಈ ರೀತಿಯ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಮಳೆಗಾಲದಲ್ಲಿ ನೀರಿನೊಂದಿಗೆ ತ್ಯಾಜ್ಯ ಬರುತ್ತಿದ್ದು, ನೀರಿನ ಬಣ್ಣವೇ ಬದಲಾಗುತ್ತಿದೆ.
ಸುಮಾರು 70 ವರ್ಷಗಳ ಹಿಂದೆ ತೆರೆಯಲ್ಪಟ್ಟ ಪಂಪ್‍ಹೌಸ್‍ನ ಬಾವಿಯ ಅಭಿವೃದ್ಧಿಗೆ 2006 ರಿಂದ 2008 ಎಸ್.ಎಸ್.ಸಿ ಮುಕ್ತ ನಿಧಿ ಹಾಗೂ 2019-20ನೇ ಸಾಲಿನ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಲ್ಲಿ ಒಟ್ಟು ರೂ.23 ಲಕ್ಷ ವೆಚ್ಚ ಮಾಡಲಾಗಿದೆ. ಆದರೆ ಇಂದು ಜನರು ಕಲುಷಿತ ನೀರು ಕುಡಿಯುವ ದುಸ್ಥಿತಿ ಬಂದೊದಗಿದೆ ಎಂದು ಪೀಟರ್ ಆರೋಪಿಸಿದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎಂ.ಯಾಕುಬ್, ನಗರ ಉಪಾಧ್ಯಕ್ಷ ಎಂ.ಇ.ಫಾರುಕ್, ಸಂಘಟನಾ ಕಾರ್ಯದರ್ಶಿ ರೆಹಮಾನ್ ಖಾನ್ ಹಾಗೂ ಖಜಾಂಚಿ ಎಂ.ಹೆಚ್.ಅಝಿಜ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.