ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪರ ಅಭಿಯಾನ ತೀವ್ರಗೊಳಿಸಲು ಕೊಡಗು ರಕ್ಷಣಾ ವೇದಿಕೆ ನಿರ್ಧಾರ

22/09/2022

ಮಡಿಕೇರಿ ಸೆ.22 : ಕಾವೇರಿ ನದಿಯ ತವರೂರು, ವಾಣಿಜ್ಯ ಬೆಳೆಗಳ ನಾಡು ಕೊಡಗು ಜಿಲ್ಲೆ ಕಳೆದ ಕೆಲವು ವರ್ಷಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರೀಕ್ಷೆಯಲ್ಲಿದೆ. ಆದರೆ ನಮ್ಮನ್ನಾಳುವವರ ಇಚ್ಛಾಶಕ್ತಿಯ ಕೊರತೆಯಿಂದ ನಿರೀಕ್ಷೆಗಳು ಹುಸಿಯಾಗುತ್ತಿದೆ. ಈ ಕಾರಣದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪರ ಅಭಿಯಾನ ತೀವ್ರಗೊಳಿಸಲು ಕೊಡಗು ರಕ್ಷಣಾ ವೇದಿಕೆ ನಿರ್ಧರಿಸಿದೆ ಎಂದು ವೇದಿಕೆಯ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.
ಉತ್ತರ ಕರ್ನಾಟಕಕ್ಕೆ ಸುಲಭವಾಗಿ ಮಂಜೂರಾಗುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಗು ಜಿಲ್ಲೆಗೆ ಯಾಕೆ ಲಭಿಸುತ್ತಿಲ್ಲವೆಂದು ಪ್ರಶ್ನಿಸಿರುವ ಅವರು, ಜನರ ಬಹುದಿನಗಳ ಬೇಡಿಕೆ ಈಡೇರುವವರೆಗೆ ನಿರಂತರ ಅಭಿಯಾನ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು, ಮಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ದಾರಿ ಮಧ್ಯ ರೋಗಿಗಳು ಪ್ರಾಣ ಬಿಟ್ಟ ಎಷ್ಟೋ ಪ್ರಕರಣಗಳಿವೆ. ಇದೇ ಕಾರಣಕ್ಕೆ ಮೂರು ವರ್ಷಗಳ ಹಿಂದೆ ಕೊಡಗಿನ ಯುವಜನತೆ ಪ್ರಪ್ರಥಮ ಬಾರಿಗೆ ಪಕ್ಷ ಭೇದವಿಲ್ಲದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಕ್ಕೊರಲ ಧ್ವನಿಯೆತ್ತಿದ್ದರು. ಸಾಮಾಜಿಕ ಜಾಲತಾಣದ ಈ ಅಭಿಯಾನ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಸುದ್ದಿಯಾಗಿತ್ತು. ಕೊಡಗನ್ನು ಪ್ರೀತಿಸುವ ಬಹುತೇಕ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಗಣ್ಯರು ಅಭಿಯಾನವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಆಸ್ಪತ್ರೆ ಬೇಕು ಎಂದು ಬೆಂಬಲ ಸೂಚಿಸಿದ್ದರು. ಕೊಡಗು ರಕ್ಷಣಾ ವೇದಿಕೆಯಾದಿಯಾಗಿ ಕೊಡಗಿನ ಬಹುತೇಕ ಸಂಘ, ಸಂಸ್ಥೆಗಳು ಈ ಕುರಿತು ಕರ್ನಾಟಕ ಸರ್ಕಾರವನ್ನು ವಿವಿಧ ರೀತಿಯಲ್ಲಿ ಒತ್ತಾಯಿಸಿದ್ದವು. ಆದರೆ ಕರ್ನಾಟಕ ಸರ್ಕಾರ ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ಜನರ ಕನಸಿಗೆ ತಣ್ಣೀರು ಎರಚಿತು. ಕಳೆದ ಒಂದು ತಿಂಗಳ ಹಿಂದೆ ಕೊಡಗಿನ ಅಭಿಯಾನದ ಮಾದರಿಯಲ್ಲಿ ಉತ್ತರ ಕನ್ನಡದ ಯುವಜನತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕವೇ ಹಕ್ಕೊತ್ತಾಯವನ್ನು ಮಂಡಿಸಿದರು. ವಿವಿಧ ಗಣ್ಯರ ಮೂಲಕ ಬೆಂಬಲ ಪಡೆದುಕೊಂಡು, ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ಮೂಲಕ ಕರ್ನಾಟಕ ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹೇರಿ ತಮ್ಮ ಬೇಡಿಕೆಯನ್ನು ಈಡೇರಿಸಿಕೊಂಡೇ ಬಿಟ್ಟಿದ್ದಾರೆ.
ಕರ್ನಾಟಕ ಸರ್ಕಾರ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಲಾಗುವುದು ಎಂದು ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಿಸುವಂತೆ ಮಾಡಿ ಐತಿಹಾಸಿಕ ಜಯವನ್ನು ಪಡೆದಿದ್ದಾರೆ. ಅಲ್ಲದೆ ಕೆಲವೇ ತಿಂಗಳ ಹಿಂದೆ ಚಾಮರಾಜನಗರದಲ್ಲಿ ಕೂಡ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯ ಆರಂಭ ಮಾಡಿದೆ.
ಕರ್ನಾಟಕದ ಇತರ ಜಿಲ್ಲೆಗಳಿಗೆ ಸಿಗುವ ಕೊಡಗಿಗೆ ಯಾಕೆ ಸಿಗುತ್ತಿಲ್ಲ, ಯಾರು ಇದಕ್ಕೆಲ್ಲ ಅಡ್ಡಗಾಲು ಹಾಕುತ್ತಿದ್ದಾರೆ, ನಮ್ಮ ಮೇಲೆ ಯಾಕೆ ಈ ಮಲತಾಯಿ ಧೋರಣೆ ಎನ್ನುವ ಪ್ರಶ್ನೆ ಕೊಡಗಿನ ಯುವ ಜನತೆಯನ್ನು ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವುದು ಸುಳ್ಳಲ್ಲ ಎಂದು ಪವನ್ ಪೆಮ್ಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಕೊಡಗಿಗೆ ಯಾವುದೇ ಪ್ರಯೋಜನವಿಲ್ಲದ ಮೊಟ್ಟೆ, ಜಯಂತಿಯoತಹ ವಿಚಾರಗಳು ರಾರಾಜಿಸುತ್ತಿವೆ. ಮಾನವ- ವನ್ಯಜೀವಿ ಸಂಘರ್ಷ, ರಸ್ತೆ ಅವ್ಯವಸ್ಥೆ, ವಿದ್ಯುತ್ ಕೊರತೆ, ಉನ್ನತ ವ್ಯಾಸಂಗಕ್ಕಾಗಿ ಶಿಕ್ಷಣ ಸಂಸ್ಥೆಗಳ ಅಲಭ್ಯತೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮೂಲಭೂತ ಸಮಸ್ಯೆಗಳನ್ನು ಉದ್ದೇಶಪೂರ್ವಕವಾಗಿ ಕೊಡಗಿನ ಜನರಿಂದ ಮರೆ ಮಾಚುವ ಯತ್ನ ನಡೆಯುತ್ತಿದೆ. ನಿರಂತರವಾಗಿ ಗೆಲುವು ಸಾಧಿಸುತ್ತಿರುವ ಕೊಡಗಿನ ಜನಪ್ರತಿನಿಧಿಗಳಿಗೆ ಕರ್ನಾಟಕ ಸರ್ಕಾರದಲ್ಲಿ ಲಾಬಿ ಮಾಡುವ ಶಕ್ತಿ ಇಲ್ಲವೇ, ಇವರ ಅಭಿಪ್ರಾಯಕ್ಕೆ ಕರ್ನಾಟಕ ಸರ್ಕಾರದಲ್ಲಿ ನಯಾ ಪೈಸೆಯ ಬೆಲೆಯೇ ಇಲ್ಲವೆ, ಶಾಸಕರು ಸರ್ಕಾರ ರಚನೆಗೆ ಸಂಖ್ಯೆಗಷ್ಟೇ ಸೀಮಿತವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡದ ಮತ್ತು ಕ್ಷುಲಕ ವಿಚಾರಗಳಲ್ಲಿಯೇ ರಾಜಕಾರಣ ಮಾಡಲು ಯತ್ನಿಸುತ್ತಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ ನೀಡದೆ ಜಿಲ್ಲೆಯ ಜನ ಸಾಮೂಹಿಕವಾಗಿ “ನೋಟಾ”ಕ್ಕೆ ಮತ ಒತ್ತುವ ಮೂಲಕ ವಿನೂತನ ಹೋರಾಟವನ್ನು ಯಾಕೆ ಮಾಡಬಾರದು. ಆ ಮೂಲಕ ನಮ್ಮ ನೋವನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಯಾಕೆ ಪ್ರತಿಬಿಂಬಿಸಿಕೊಳ್ಳಬಾರದು ಎಂದು ಪವನ್ ಪೆಮ್ಮಯ್ಯ ಪ್ರಶ್ನಿಸಿದ್ದಾರೆ.