ನಾಗಾವಿಯಲ್ಲಿ ಸಬರಮತಿ ಆಶ್ರಮ ಹೊಲುವ ತದ್ರೂಪ ಆಶ್ರಮ

13/10/2022

ಗಾಂಧೀಜಿ ಕನಸು ನನಸಾಗಿಸುವ ಮುಖ್ಯ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ಮಹಾತ್ಮ ಗಾಂಧಿಯವರ ತತ್ವ ಸಿದ್ಧಾಂತ ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಲು ಮುದ್ರಣ ಕಾಶಿ ಗದಗ ಜಿಲ್ಲೆಯ ನಾಗಾವಿ ಹತ್ತಿರದ ಗುಡ್ಡಗಾಡು ಪ್ರದೇಶದ ನಯನ ಮನೋಹರ ಪ್ರದೇಶದಲ್ಲಿ 72 ಲಕ್ಷ ರೂ ವೆಚ್ಚದಲ್ಲಿ ಸಬರಮತಿ ತದ್ರೂಪಿ ಆಶ್ರಮವನ್ನು ನಿರ್ಮಿಸಿದೆ.
ಗುಜರಾತಿನ ಸಬರಮತಿಯಲ್ಲಿರುವ ಗಾಂಧಿ ಅವರ ಮೂಲ ಆಶ್ರಮ 3800 ಚದರ ಅಡಿ ಜಾಗದಲ್ಲಿ ನಿರ್ಮಾಣವಾಗಿದ್ದರೆ, ನಾಗಾವಿಯ ತದ್ರೂಪಿ ಆಶ್ರಮವನ್ನೂ 3800 ಚದರ ಅಡಿ ಜಾಗದಲ್ಲಿ ನಿರ್ಮಿಸಲಾಗಿರುವುದು ವಿಶೇಷ.
ಮಹಾತ್ಮ ಗಾಂಧೀಜಿಯವರ ಜೀವನ, ಅವರು ನಡೆದು ಬಂದ ದಾರಿ ಸೇರಿದಂತೆ ಸ್ವಾತಂತ್ರ್ಯ ಹೋರಾಟ, ಉಪ್ಪಿನ ಸತ್ಯಾಗ್ರಹ, ಸೇರಿದಂತೆ ನೂರಕ್ಕೂ ಹೆಚ್ಚು ಫೆÇೀಟೋಗಳನ್ನು ಆಶ್ರಮದಲ್ಲಿ ಹಾಕಲಾಗಿದ್ದು, ಅವರ ಕುರಿತು ತಿಳಿದುಕೊಳ್ಳಲು ಈ ಆಶ್ರಮ ಬಹಳ ಉಪಯೋಗಕಾರಿಯಾಗಿದೆ.

ಇನ್ನು ಮುಂದೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಜೀವನದ ಭಾಗವಾಗಿದ್ದ ಸಬರಮತಿ ಆಶ್ರಮ ನೋಡಲು ಗುಜರಾತ್ ರಾಜ್ಯಕ್ಕೆ ಭೇಟಿ ನೀಡಬೇಕಿಲ್ಲ. ಗಾಂಧಿ ಆಶ್ರಮ ನೋಡಲೇ ಇಲ್ಲ ಎಂಬ ಕೊರಗೂ ಬೇಡ…. ಕಾರಣ ಸಬರಮತಿ ಆಶ್ರಮವನ್ನೇ ಹೋಲುವ ತದ್ರೂಪದ ಆಶ್ರಮ ಕರುನಾಡಿನ ಗದಗ ಜಿಲ್ಲೆಯ ನಾಗಾವಿ ಗ್ರಾಮದ ಹೊರವಲಯದ ನೈಸರ್ಗಿಕ ಗುಡ್ಡದ ಮೇಲೆ ತಲೆ ಎತ್ತಿ ನಿಂತಿದ್ದು, ಮೂಲ ಆಶ್ರಮವನ್ನೇ ನೋಡಿದ ಅನುಭವ ನೀಡುತ್ತಿದೆ. ಬನ್ನಿ ಕರುನಾಡ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ ಕಣ್ಣುಂಬಿಕೊಳ್ಳೋಣ.

ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಾಣಿಸುವ ಕಪ್ಪತಗುಡ್ಡದ (ನಾಗಾವಿ ಗುಡ್ಡ) ಸೊಬಗು, ಬೋಳು ಬೆಟ್ಟದ ಚೆಲುವಿಗೆ ಗರಿ ಸಿಕ್ಕಿಸಿದಂತೆ ಕಾಣಿಸುವ ಪವನ ಶಕ್ತಿ ಯಂತ್ರಗಳು, ಕುರುಚಲು ಗಿಡಗಳ ರಮ್ಯ ಪರಿಸರದ ನಡುವೆ ಧ್ಯಾನಸ್ಥ ಸ್ಥಿತಿಯಲ್ಲಿರುವಂತೆ ಭಾಸವಾಗುವ ಸಬರಮತಿ ಆಶ್ರಮ ಶೈಕ್ಷಣಿಕ ಚಟುವಟಿಕೆಗಳಿಗೆ ಇಂಬು ನೀಡುವ ಜತೆಗೆ ಇನ್ನು ಮುಂದೆ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಳ್ಳಲಿದೆ.

1920 ನವೆಂಬರ್ 11 ರಂದು ಗಾಂಧೀಜಿ ಗದಗ ನಗರಕ್ಕೆ ಭೇಟಿ ನೀಡಿ ಶತಮಾನ ಕಳೆದಿರುವ ನೆನಪಿನಲ್ಲಿ ಗದಗ್‍ನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸಬರಮತಿ ಆಶ್ರಮದ ಪ್ರತಿರೂಪವನ್ನೇ ಸೃಷ್ಟಿಸುವ ಮೂಲಕ ಕನ್ನಡ ನಾಡಿನಲ್ಲೇ ಗಾಂಧೀಜಿ ಅವರ ಸಮಗ್ರ ಜೀವನವನ್ನು ಯುವ ಪೀಳಿಗೆಗೆ ಪರಿಚಯಿಸುವ ಮಹತ್ಕಾರ್ಯ ಮಾಡಿದೆ.

ಗುಜರಾತ್‍ನಲ್ಲಿ ಪ್ಲೇಗ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ಕೋಚರಬ್ ಆಶ್ರಮ ತೊರೆಯುವ ತೀರ್ಮಾನ ಮಾಡಿದರು. 1917ರಲ್ಲಿ ಗುಜರಾತ್ ರಾಜ್ಯದ ಅಹಮದಾಬಾದ್‍ನ ಸಾಬರಮತಿ ನದಿ ದಂಡೆಯಲ್ಲಿ ಸಬರಮತಿ ಆಶ್ರಮ ನಿರ್ಮಾಣವಾಯಿತು. ಈ ಆಶ್ರಮ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರ ಆಶ್ರಯ ತಾಣವಾಗಿತ್ತು. ಈಗ ಈ ಆಶ್ರಮ ಇತಿಹಾಸದ ಪುಟ ಸೇರಿದ್ದು, ಇಂದು ಅಲ್ಲಿ
ವಸ್ತುಸಂಗ್ರಹಾಲಯ ಹಾಗೂ ಗಾಂಧಿ ಸ್ಮಾರಕ ನಿರ್ಮಿಸಲಾಗಿದೆ. ದೇಶ ವಿದೇಶಗಳ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಬರಮತಿಗೆ ಹೋಗಿ ಗಾಂಧಿ ಜೀವನ ದರ್ಶನ ಕಣ್ತುಂಬಿಕೊಳ್ಳಲು ಸಾಧ್ಯವಾಗದವರಿಗೆ ಕರ್ನಾಟಕದಲ್ಲಿ ಈ ದಿವ್ಯ ದರ್ಶನ ಮಾಡಿಸುವ ನಿಟ್ಟಿನಲ್ಲಿ ಗದಗ ವಿಶ್ವವಿದ್ಯಾಲಯ ನಾಗಾವಿಯ ತನ್ನ ಆವರಣದಲ್ಲಿ ಸಬರಮತಿ ಆಶ್ರಮದ ಪ್ರತಿರೂಪವನ್ನು ನಿರ್ಮಿಸುವ ಮೂಲಕ ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದ ಗಾಂಧೀಜಿಯವರಿಗೆ ಗೌರವ ಅರ್ಪಿಸಿದೆ.

ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್.ಕೆ. ಪಾಟೀಲ್ ಅವರ ಕನಸಿನ ಕೂಸು ಹಾಗೂ ಹಾಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಅವರ ಮುತುವರ್ಜಿಯಿಂದ ಈ ಸಬರಮತಿ ಆಶ್ರಮ ನಿರ್ಮಾಣವಾಗಿದೆ.

ಗದಗ ತಾಲೂಕಿನ ನಾಗಾವಿ ಗ್ರಾಮದ ಗುಡ್ಡದ ಬಳಿ ನಿರ್ವಣಗೊಂಡಿರುವ ಆರ್‍ಡಿಪಿಆರ್‍ಯು ಕಟ್ಟಡದ ಆವರಣದಲ್ಲಿ ಈ ಸಬರಮತಿ ಆಶ್ರಮವನ್ನು ಹೋಲುವ ಕಟ್ಟಡವನ್ನು 72 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಗುಜರಾತಿನ ಸಬರಮತಿಯಲ್ಲಿರುವ ಮೂಲ ಆಶ್ರಮವನ್ನು ಹೋಲುವಂತೆಯೇ ನಾಗಾವಿಯಲ್ಲಿ ತದ್ರೂಪಿ ಆಶ್ರಮವನ್ನು ನಿರ್ಮಿಸಲಾಗಿದೆ. ಪ್ರವೇಶ ಭಾಗದಲ್ಲಿರುವ ಗಾಂಧೀಜಿ ಪ್ರತಿಮೆ, ಪುರಾತನ ಕಾಲದ ಕಂದೀಲು ಮತ್ತು ಆಶ್ರಮದ ಬಾಗಿಲು ಎಲ್ಲವೂ ಸಬರಮತಿ ಆಶ್ರಮದ ಪ್ರತಿರೂಪದಂತಿದೆ.

ಈ ತದ್ರೂಪಿ ಆಶ್ರಮದಲ್ಲಿ ಸಬರಮತಿ ಆಶ್ರಮದಲ್ಲಿರುವಂತೆ ಪ್ರಾರ್ಥನಾ ಮಂದಿರ ಧ್ಯಾನಮಂದಿರ, ಗ್ರಂಥಾಲಯ, ನಯೀ ತಾಲೀಮ್ ಮಂದಿರ, ಕಸ್ತೂರಬಾ ಮಂದಿರ ಹಾಗೂ ಅಡುಗೆ ಕೊಠಡಿಗಳು ಇವೆ. ಇವೆಲ್ಲವೂ ಗಾಂಧೀಜಿಯವರ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದಿವೆ. ಅಲ್ಲದೆ, ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ ವಿಶಿಷ್ಟ ಘಟನೆಗಳು, ಐತಿಹಾಸಿಕ ಸಂಗತಿಗಳನ್ನು ಮೆಲುಕು ಹಾಕುವಂತಹ ಸವಿವರ ಚಿತ್ರಗಳ ಪ್ರದರ್ಶನ ಇಲ್ಲಿದೆ. ಕುಲಪತಿ ಪೆÇ್ರ. ವಿಷ್ಣುಕಾಂತ ತಟದಲ್ಲಿ ಅವರು ಈ ತದ್ರೂಪಿ ಆಶ್ರಮವು ಕೇವಲ ಪ್ರತಿಕೃತಿಯ ಕಟ್ಟಡವಲ್ಲ ಬದಲಾಗಿ ಒಂದು ಜೀವಂತ ಆದರ್ಶ ಕೇಂದ್ರ ಎನ್ನುತ್ತಾರೆ.

ವಿಶ್ವವಿದ್ಯಾಲಯದ ರಿಜಿಸ್ಟಾರ್ ಡಾ.ಬಿ.ಎಲ್.ಲಕ್ಕಣ್ಣನವರ್ ಅವರು ಈ ಆಶ್ರಮದಲ್ಲಿ ವಿಶೇಷವಾಗಿ ಗಾಂಧೀಜಿ ಬದುಕಿನ ಪ್ರಮುಖ ಘಟನಾವಳಿ ಆಧಾರಿತ 100 ವಿಶೇಷ ಛಾಯಾಚಿತ್ರಗಳ ಪ್ರದರ್ಶನ, ಗಾಂಧೀಜಿಯವರು ಹೇಳಿದ ಏಳು ಸಾಮಾಜಿಕ ಪಾತಕಗಳು, ಏಕಾದಶ ವ್ರತಗಳು, 18 ರಚನಾತ್ಮಕ ಕಾರ್ಯಕ್ರಮಗಳು, ಗಾಂಧೀಜಿ ಜೀವನ ಕುರಿತಾದ 500ಕ್ಕೂ ಹೆಚ್ಚು ಕೃತಿಗಳಿರುವ ಗ್ರಂಥಾಲಯ, 11 ಮುಖ್ಯ ಮೌಲ್ಯಾಧಾರಿತ ವಿಚಾರಗಳು, ಗಾಂಧೀಜಿ ಅವರ ಭಾಷಣಗಳು, ಭಜನೆ ಸೇರಿದಂತೆ ಗಾಂಧೀಜಿ ಜೀವನ ಆಧಾರಿತ ಅಡಿಯೊ- ವಿಡಿಯೊ ಪ್ರದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟ ಮಾತಾಡಬೇಡ ಎಂಬ ಸಂದೇಶ ಸಾರುವ ಮೂರು ಮರ್ಕಟಗಳ ಪ್ರತಿರೂಪ ಮತ್ತು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ನೂಲು ತೆಗೆಯುತ್ತಿದ್ದ ಚರಕದ ಪ್ರತಿರೂಪವೂ ಇಲ್ಲಿದೆ, ಭಜನೆ ಸೇರಿದಂತೆ ವಿಶ್ವವಿದ್ಯಾಲಯದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸುಂದರ ಪರಿಸರದಲ್ಲಿ ನಡೆಯುತ್ತವೆ. ಈ ಆಶ್ರಮ ತಮ್ಮ ಬದುಕಿಗೆ ಸ್ಫೂರ್ತಿಯ ಸೆಲೆಯಾಗಿದೆ ಎನ್ನುತ್ತಾರೆ ಇಲ್ಲಿಯ ವಿದ್ಯಾರ್ಥಿಗಳು.

ಗದಗದಲ್ಲಿ 2016 ರಿಂದ ಆರಂಭವಾದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ರಾಜ್ಯದಿಂದಷ್ಟೇ ಶ್ರಮಿಸಲಿದೆ. ಅಲ್ಲ ಹೊರ ರಾಜ್ಯದಿಂದಲೂ ವಿದ್ಯಾರ್ಥಿಗಳು ಆಗಮಿಸಿ ಪ್ರವೇಶ ಪಡೆದು, ಶಿಕ್ಷಣ ಪಡೆಯುತ್ತಿದ್ದಾರೆ. ಗುಜರಾತ್ ನಿಂದ ಬಂದಿರುವ ವಿದ್ಯಾರ್ಥಿ ವಿಮಲ್ ಆಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಸಾರ್ವಜನಿಕರ ವೀಕ್ಷಣೆಗೂ ಮುಕ್ತವಾಗಿರುವ ಈ ಆಶ್ರಮಕ್ಕೆ ಸ್ಥಳೀಯರು ಮತ್ತು ಪ್ರವಾಸಿಗರು ಭೇಟಿ ನೀಡಿ ಗಾಂಧೀಜಿ ಅವರ ಚಿಂತನೆಗಳ ಅರಿವು ಪಡೆಯುತ್ತಿದ್ದಾರೆ. ಗದುಗಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1. ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಆಶ್ರಮವನ್ನು ವೀಕ್ಷಣೆ ಮಾಡುವ ಅವಕಾಶ ಇದೆ. ಪ್ರತಿ ತಿಂಗಳ 11 ರಂದು ನಡೆಯುವ ‘ಗಾಂಧಿ ಚಿಂತನ ಮಂಥನ’ ಕಾರ್ಯಕ್ರಮ ಸಂಜೆ 5 ರಿಂದ 6 ರವರೆಗೆ ನಡೆಯಲಿದೆ.

ಗಾಂಧಿ ಭವನ, ಗುಂಧಿ ಅಧ್ಯಯನ ಕೇಂದ್ರಗಳು ನಾಡಿನೆಲ್ಲೆಡೆ ಇವೆ. ಆದರೆ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಸಬರಮತಿ ತದ್ರೂಪಿ ಆಶ್ರಮ ನಿರ್ಮಾಣವಾಗಿರುವುದರಿಂದ ಈ ಭಾಗದ ಜನರಿಗೆ ಸಂತಸ ತಂದಿದೆ. ಒಟ್ಟಿನಲ್ಲಿ ಮಹಾತ್ಮ ಗಾಂಧಿಯವರ ತತ್ವ ಸಿದ್ಧಾಂತ ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಲು ಈ ಆಶ್ರಮ ಶ್ರಮಿಸಲಿದೆ.

ಎಲ್ಲ ವಯೋಮಾನದವರಿಗೂ ಇಷ್ಟವಾಗುವ ಸ್ಥಳದಲ್ಲಿ ಇದು ರೂಪುಗೊಂಡಿದೆ. ಹಾಗಾಗಿ ಪ್ರವಾಸಿಗರು ಗದಗ ಜಿಲ್ಲೆಯ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಸಬರಮತಿ ಆಶ್ರಮಕ್ಕೂ ಹೋಗಿಬರಹುದು. ಇಲ್ಲಿಗೆ ಬಂದವರು ಗಾಂಧೀಜಿ ಬಗ್ಗೆ ತಿಳಿದುಕೊಳ್ಳುವ ಜತೆಗೆ ಪ್ರಾಕೃತಿಕ ಸೊಬಗನ್ನೂ ಕಣ್ತುಂಬಿಕೊಳ್ಳಬಹುದು.

ವರದಿ : ಪಿ.ವಿ.ರಿಷಿಕೇಶ್
ಕೃಪೆ : ವಾರ್ತಾ ಜನಪದ