ಮುದ್ದ ಕಳಲ ಯುವಕ ಸಂಘದ ಮಹಾ ಸಭೆ : ನಿವೇಶನ ರಹಿತರಿಗೆ ನಿವೇಶನ ನೀಡದಿದ್ದರೆ ಮತ ಬಹಿಷ್ಕಾರ : ಜ್ಯೋತಿಕುಮಾರ್ ಎಚ್ಚರಿಕೆ

ಮಡಿಕೇರಿ ನ.26 : ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಲೈನ್ ಮನೆಗಳಲ್ಲಿ ವಾಸವಿರುವ ಪರಿಶಿಷ್ಟ ಜಾತಿ ಮೊಗೇರ ಕುಟುಂಬಗಳಿಗೆ ಸರಕಾರ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ನಿವೇಶನ ರಹಿತ ಮೊಗೇರ ಜನಾಂಗದವರು ಮತ ಬಹಿಷ್ಕರಿಸುವುದಾಗಿ ಮುದ್ದ ಕಳಲ ಯುವಕ ಸಂಘದ ಅಧ್ಯಕ್ಷ ಜ್ಯೋತಿಕುಮಾರ್ ಎಚ್ಚರಿಕೆ ನೀಡಿದರು.
ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ನಡೆದ ಮುದ್ದ ಕಳಲ ಯುವಕ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಲೈನ್ ಮನೆಗಳಲ್ಲಿ ವಾಸವಿದ್ದು, ವಿವಿಧ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಲೈನ್ ಮನೆಯಲ್ಲಿ ವಾಸವಿರುವ ಮೊಗೇರ ಕುಟುಂಬಗಳಿಗೆ ನಿವೇಶ ನೀಡುವಂತೆ ಒತ್ತಾಯಿಸಿ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ.
ಸರ್ಕಾರ ಪರಿಶಿಷ್ಟ ಜಾತಿ ಮೊಗೇರ ಕುಟುಂಬಗಳಿಗೆ ಸರಕಾರ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ನಿವೇಶನ ರಹಿತ ಮೊಗೇರ ಜನಾಂಗದವರು ಸೇರಿ ಮತ ಬಹಿಷ್ಕಾರ ಮಾಡುವುದು ಮತ್ತು ಡಿ.9 ರಂದು ಜಿಲ್ಲೆಯ ಮೊಗೇರ ಜನಾಂಗದ ನಿವೇಶನ ರಹಿತರಿಂದ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ತಿಳಿಸಿದರು.
ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿ, ಜಿಲ್ಲೆಯ ಎಲ್ಲಾ ಮೊಗೇರ ಬಾಂಧವರು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದುನ್ನು ತೋರಿಸಬೇಕು. ಡಿಸೆಂಬರ್ನಲ್ಲಿ ನಡೆಯಲಿರುವ ಹೋರಾಟಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ ಪಧಾನ ಕಾರ್ಯದರ್ಶಿ ಜನಾರ್ಧನ್, ಮುದ್ದ ಕಳಲ ಯುವಕ ಸಂಘದ ಪದಾಧಿಕಾರಿಗಳಾದ ರಮೇಶ್ ಕಗೊಡ್ಲು, ವಸಂತ, ಗಂಗಾಧರ, ಸತೀಶ್, ಮಂಜು, ಪಾರ್ವತಿ, ಹರೀಶ್, ಜಯಪ್ರಕಾಶ್, ಹರೀಶ್ ಕನ್ನಿರ್ಹಳ್ಳಿ, ಕವಿರಾಜ್, ರಾಮು, ಶಿವಪ್ಪ, ಚಂದ್ರ, ಶಿವಶಂಕರ್, ಉಮೇಶ್ ಹಾಗೂ ಮದೆಗ್ರಾಮಪಂಚಾಯಿತಿಯ ಉಪಾಧ್ಯಕ್ಷರು ಚಂದ್ರಾವತಿ ಹಾಗೂ ಹಿರಿಯರಾದ ಸುಂದರ, ನಾರಾಯಣ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ರಮೇಶ್ ಸ್ವಾಗತಿಸಿ, ವಂದಿಸಿದರು.