ಮೊಟ್ಟೆ ಸೇವನೆಯಿಂದಾಗುವ ಪ್ರಯೋಜನಗಳು

03/12/2022

ನಾವು ಸೇವಿಸುವ ಆಹಾರಗಳಲ್ಲಿ ಪೌಷ್ಟಿಕಾಂಶಗಳ ಕೊರತೆ ಉಂಟಾದರೆ ಅದು ನಮ್ಮ ದೇಹದ ಅಪೌಷ್ಟಿಕತೆಗೆ ಕಾರಣವಾಗುತ್ತದೆ.

ಆದ್ದರಿಂದ ನಾವು ಯಾವುದೇ ಆಹಾರ ಸೇವನೆ ಮಾಡಿದರೂ ಮೊದಲು ಅದರಲ್ಲಿರುವ ಪೌಷ್ಟಿಕ ಸತ್ವಗಳ ಮತ್ತು ಖನಿಜಾಂಶಗಳ ಕಡೆಗೆ ನಮ್ಮ ಗಮನ ಕೊಡಬೇಕು.

ಮೊಟ್ಟೆಯ ಪ್ರಸ್ತಾಪದಲ್ಲೂ ಅಷ್ಟೇ. ನೋಡಲು ಚಿಕ್ಕದಿದ್ದರೂ ಮೊಟ್ಟೆಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾದ ಪೌಷ್ಟಿಕ ಸತ್ವಗಳು ಅಡಗಿವೆ. ಸಮತೋಲನ ಆಹಾರ ಪದ್ಧತಿಯಲ್ಲಿ ಮೊಟ್ಟೆಗಳಿಗೆ ವಿಶೇಷ ಸ್ಥಾನವನ್ನು ಕೊಡಲಾಗಿದೆ.

ಸುಲಭವಾಗಿ ಸಿಗುವ, ಆರೋಗ್ಯಯುತ ಆಹಾರ ಎಂದರೆ ಅದು ಮೊಟ್ಟೆ. ಹೇರಳವಾದ ಪ್ರೋಟೀನ್‌, ಮಿನರಲ್ಸ್‌ ಮತ್ತು ಜೀವಸತ್ವಗಳನ್ನು ಹೊಂದಿರುವ ಮೊಟ್ಟೆ ತೂಕ ಇಳಿಸಿಕೊಳ್ಳುವವರಿಂದ ಹಿಡಿದು, ಫಿಟ್‌ ಆಗಿ, ಆರೋಗ್ಯವಾಗಿರಬೇಕು ಎನ್ನುವವರಿಗೂ ಸಹಾಯ ಮಾಡುತ್ತದೆ.

ಪ್ರತಿದಿನ 1-2 ಮೊಟ್ಟೆಗಳನ್ನು ತಿನ್ನಬಹುದು. ಇದು ದೇಹದ ಮೇಲೆ ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡುವುದಿಲ್ಲ.

ಅನೇಕ ಜನರು ಮೊಟ್ಟೆಗಳನ್ನು ಫ್ರೈ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಲು ಮೊಟ್ಟೆಯನ್ನು ಬೇಯಿಸಿ ತಿನ್ನಬೇಕು. ಇದು ಆರೋಗ್ಯಕರ ಮತ್ತು ರುಚಿಕರವೂ ಆಗಿದೆ. ಬೇಯಿಸಿದ ಮೊಟ್ಟೆಗಳು ಎಲ್ಲಾ ಅಗತ್ಯ ಪೋಷಕಾಂಶಗಳು, ಪ್ರೋಟೀನ್‌ಗಳು, ಆರೋಗ್ಯಕರ ಕೊಬ್ಬುಗಳಿಂದ ತುಂಬಿರುತ್ತವೆ.

ಬೇಯಿಸಿದ ಮೊಟ್ಟೆಗಳನ್ನು ನಿಯಮಿತವಾಗಿ ತಿನ್ನುವುದರಿಂದ ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಉತ್ತಮವಾಗುತ್ತದೆ. ಅಲ್ಲದೆ ಇದು ಕೇವಲ 77 ಕ್ಯಾಲೋರಿಗಳು ಮತ್ತು 5 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ, ಇದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.

ಕಣ್ಣುಗಳ ದೃಷ್ಟಿ ದೋಷದ ಪರಿಹಾರಕ್ಕೆ ಕೋಳಿ ಮೊಟ್ಟೆಯಲ್ಲಿದೆ ಮದ್ದ- ಇದಕ್ಕೆ ಕಾರಣ ಕೋಳಿ ಮೊಟ್ಟೆಯಲ್ಲಿರುವ ಲ್ಯೂಟೀನ್ ಮತ್ತು ಜಿಯಾಗ್ಸಾಂಥಿನ್ ಎಂಬ ಎರಡು ಶಕ್ತಿಯುತವಾದ ಆಂಟಿ – ಆಕ್ಸಿಡೆಂಟ್ ಗಳು.

ಈ ಆಂಟಿ – ಆಕ್ಸಿಡೆಂಟ್ ಗಳು ನಿಮ್ಮ ಕಣ್ಣಿನ ರೆಟಿನಾದ ಮೇಲೆ ತಮ್ಮ ಪ್ರಭಾವ ಬೀರುತ್ತವೆ.

ಅಂದರೆ ಬಹುತೇಕ ಮಂದಿ ಎದುರಿಸುವ ಕಣ್ಣಿನ ಸಮಸ್ಯೆಗಳಾದ ಕಣ್ಣಿನ ಪೊರೆ ಮತ್ತು ಮಕ್ಯುಲರ್ ಡಿಜನರೇಶನ್ ಸಮಸ್ಯೆಗಳನ್ನು ಈ ಎರಡು ಅಂಶಗಳು ಸುಲಭವಾಗಿ ನಿವಾರಿಸುತ್ತವೆ.

ಕೋಳಿ ಮೊಟ್ಟೆಯಲ್ಲಿ ವಿಟಮಿನ್ ‘ ಎ ‘ ಅಂಶ ಹೆಚ್ಚಾಗಿದ್ದು, ಇದು ವಯಸ್ಸಾದಂತೆ ಕಾಡುವ ಕಣ್ಣಿನ ಕುರುಡುತನ ಸಮಸ್ಯೆಯನ್ನು ಹತ್ತಿರ ಕೂಡ ಸುಳಿಯದಂತೆ ನೋಡಿಕೊಳ್ಳುತ್ತದೆ.

ಬೆಳಗಿನ ಉಪಹಾರದಲ್ಲಿ ಮೊಟ್ಟೆಯ ಸೇವನೆಯಿಂದ ನಿಮಗೆ ದೀರ್ಘ ಕಾಲದವರೆಗೆ ಹೊಟ್ಟೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ. ಇದಕ್ಕೆ ಕಾರಣ ಮೊಟ್ಟೆಯಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಇರುವುದು.

ನೀವು ನಿಮ್ಮ ಉಪಹಾರಕ್ಕೆ ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ಚಿಕ್ಕ ಚಿಕ್ಕ ಆಹಾರಗಳ ನಡುವೆ ನಿಮಗೆ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ.

ಆಗಾಗ ಆಹಾರ ಸೇವನೆ ಮಾಡಬೇಕು ಎಂಬ ಭಾವನೆ ಉಂಟಾಗುವುದಿಲ್ಲ ಮತ್ತು ರಸ್ತೆ ಬದಿಯ ಆಹಾರಗಳನ್ನು ತಿನ್ನಬೇಕೆಂಬ ಚಪಲ ಕೂಡ ಕಡಿಮೆ ಆಗುತ್ತದೆ.