ಬಾಳುಗೋಡುವಿನಲ್ಲಿ ‘ಗಿರಿಜನ ಉತ್ಸವ’ : ಆದಿವಾಸಿಗಳು ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ಬರಬೇಕು : ಶಾಸಕ ಕೆ.ಜಿ.ಬೋಪಯ್ಯ ಕರೆ

03/12/2022

ಮಡಿಕೇರಿ ಡಿ.3 : ಆದಿವಾಸಿ ಗಿರಿಜನರಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ, ಕಲೆ, ಸಂಸ್ಕೃತಿ  ಜೊತೆಗೆ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಮಗ್ರ ಗಿರಿಜನ ಯೋಜನಾ ಇಲಾಖೆ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಕಾರದಲ್ಲಿ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ವಿರಾಜಪೇಟೆ ತಾಲ್ಲೂಕು ಬಾಳುಗೋಡು ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಶನಿವಾರ ನಡೆದ ‘ಗಿರಿಜನ ಉತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆದಿವಾಸಿ ಜನರು ತಮ್ಮದೇ ಆದ ಆಚಾರ-ವಿಚಾರ, ಕಲೆ, ಸಂಸ್ಕೃತಿಯನ್ನು ಹೊಂದಿದ್ದು, ಇಂತಹ ಪ್ರಾಚೀನ ಸಂಸ್ಕೃತಿಯನ್ನು ಪ್ರಪಂಚಕ್ಕೆ ಪರಿಚಯಿಸುವ ಕೆಲಸವಾಗಬೇಕು. ಗಿರಿಜನ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡು ಆದಿವಾಸಿ ಪ್ರತಿಭಾವಂತರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಗಿರಿಜನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗುವತ್ತ ಮನಸ್ಸು ಮಾಡಬೇಕು ಎಂದರು.

ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಆದಿವಾಸಿ ಗಿರಿಜನರಿಗಾಗಿ ಹಲವು ವಸತಿ ಶಾಲೆಗಳನ್ನು ಆರಂಭಿಸಿ ಶಿಕ್ಷಣಕ್ಕೆ ಒತ್ತು ನೀಡಿರುವುದನ್ನು ಮರೆಯುವಂತಿಲ್ಲ, ಆ ನಿಟ್ಟಿನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಸಾಂಸ್ಕøತಿಕ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿರುವುದು ವಿಶೇಷವಾಗಿದೆ ಎಂದು ಕೆ.ಜಿ.ಬೋಪಯ್ಯ ಹೇಳಿದರು.

ಸರ್ಕಾರ ಏಕಲವ್ಯ ಮಾದರಿ ಶಾಲೆ ಸೇರಿದಂತೆ ಗಿರಿಜನರಿಗಾಗಿ ವಿದ್ಯಾರ್ಥಿ ನಿಲಯ, ಶಿಷ್ಯವೇತನ, ಪೌಷ್ಠಿಕ ಆಹಾರ ವಿತರಣೆ, ಆರೋಗ್ಯ ಸೇವೆ. ವಾಸಕ್ಕೆ ಯೋಗ್ಯವಾದ ಮನೆ ನಿರ್ಮಾಣ ಹೀಗೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿವೆ. ಇದನ್ನು ಸರಿಯಾಗಿ ಬಳಸಿಕೊಳ್ಳುವಂತಾಗಬೇಕು ಎಂದರು.

ಆದಿವಾಸಿಗಳ ಕಲೆ, ಸಂಸ್ಕೃತಿಗೆ ಬೇಕಾದ ಪರಿಕರಗಳನ್ನು ನೀಡಲಾಗುತ್ತಿದ್ದು, ಇವುಗಳನ್ನು ಪಡೆದುಕೊಳ್ಳುವಂತಾಗಬೇಕು. ಪ್ರಾಚೀನ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು. ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ದೊರೆಯಬೇಕು. ಇದನ್ನು ಸರ್ಕಾರ ಮಾಡುತ್ತಿದ್ದು, ಸದ್ವಿನಿಯೋಗ ಮಾಡಿಕೊಳ್ಳಬೇಕು. ಆಸೆ, ಆಮಿಷಗಳಿಗೆ ಒಳಗಾಗದೆ ಸರ್ಕಾರದ ಸೌಲಭ್ಯಗಳನ್ನು ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಕೆ.ಜಿ.ಬೋಪಯ್ಯ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ ಆದಿವಾಸಿ ಜನರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು, ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳ ಸೌಲಭ್ಯವನ್ನು ಪಡೆದುಕೊಳ್ಳುವಂತಾಗಬೇಕು. ವಿದ್ಯಾರ್ಥಿಗಳು ಆಟ ಪಾಠದಲ್ಲಿ ಮುಂದಿರಬೇಕು. ಕೆಟ್ಟ ಅಭ್ಯಾಸಗಳಿಗೆ ಬಲಿಯಾಗಬಾರದು ಎಂದು ಸಲಹೆ ಮಾಡಿದರು.

18 ವರ್ಷ ಮೇಲ್ಪಟ್ಟ ಎಲ್ಲಾ ಜನರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಕಡ್ಡಾಯವಾಗಿ ಚುನಾವಣಾ ಸಂದರ್ಭದಲ್ಲಿ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಅವರು ಮಾತನಾಡಿ ಗಿರಿಜನರ ಕಲೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಬ್ಬದ ಮಾದರಿಯಲ್ಲಿ ಗಿರಿಜನ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

‘ಗಿರಿಜನರ ಕಲೆ, ಸಂಸ್ಕೃತಿ ಪ್ರೋತ್ಸಾಹಿಸುವಲ್ಲಿ ಸಾಕಷ್ಟು ಯೋಜನೆಗಳು ಇದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು. ಆದಿವಾಸಿ ಜನರು ಹಲವು ಸಂಕಷ್ಟದ ಬದುಕಿನ ನಡುವೆಯೂ ತಮ್ಮ ಸಂಸ್ಕೃತಿ, ಕಲೆಗಳನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಮಲ್ಲಿಕಾರ್ಜುನ ಸ್ವಾಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.’

ಕನ್ನಡ ಮತ್ತು ಸಂಸ್ಕೃತಿಇಲಾಖೆಯಿಂದ ಮಾಸಾಶನ ಹಾಗೂ ಧನಸಹಾಯಕ್ಕೆ ಅರ್ಹರು ಅರ್ಜಿ ಸಲ್ಲಿಸಬಹುದು. ಆ ನಿಟ್ಟಿನಲ್ಲಿ ಆದಿವಾಸಿಗಳು ಕಲೆ ಮತ್ತು ಸಂಸ್ಕೃತಿ ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.

ಹಿರಿಯ ಕಲಾವಿದರಾದ ಕುಡಿಯರ ಮುತ್ತಪ್ಪ ಅವರು ಮಾತನಾಡಿ ಆದಿವಾಸಿ ಗಿರಿಜನರ ಕಲೆ, ಸಂಸ್ಕøತಿ ಪ್ರೋತ್ಸಾಹಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಗತ್ಯ ಸಹಕಾರ ನೀಡುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಏಕಲವ್ಯ ಮಾದರಿ ವಸತಿ ಶಾಲೆಗಳ ರಾಜ್ಯ ಮಟ್ಟದ ಸಾಂಸ್ಕøತಿಕ ಸ್ಪರ್ಧಾ ಕೂಟದಲ್ಲಿ ಕ್ಲಾಸಿಕಲ್ ಡ್ಯಾನ್ಸ್‍ನಲ್ಲಿ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಜೀಸ್ಮ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ವಿಜೇತಳಾಗಿ ಕೊಡಗು ಜಿಲ್ಲೆಗೆ ಕೀರ್ತಿ ತಂದಿರುವುದಕ್ಕೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸತೀಶ ಅವರು ಅಭಿನಂದಿಸಿದರು.

ರಾಜ್ಯ ಮಟ್ಟದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅತೀ ಹೆಚ್ಚು ಪ್ರಶಸ್ತಿ ಪಡೆದು ಮೊದಲ ಸ್ಥಾನದೊಂದಿಗೆ ವಿಜೇತರಾದ ಬಾಳುಗೋಡು ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಬಿಟ್ಟಂಗಾಲ ಗ್ರಾ.ಪಂ.ಅಧ್ಯಕ್ಷರಾದ ಟಿ.ಆರ್.ರಮ್ಯಾ ಅವರು ಮಾತನಾಡಿದರು. ತಹಶೀಲ್ದಾರ್ ಅರ್ಚನಾ ಭಟ್ ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿದರು. ವಸತಿ ಶಾಲೆಯ ವಿದ್ಯಾರ್ಥಿನೀಯರು ನಾಡಗೀತೆ ಹಾಡಿದರು. ಪ್ರಾಂಶುಪಾಲರಾದ ದಿಲನ್ ವಂದಿಸಿದರು.

ಹಬ್ಬದಂತೆ ನಡೆದ ಗಿರಿಜನ ಉತ್ಸವ: ಆದಿವಾಸಿ ಗಿರಿಜನರ ಪ್ರಾಚೀನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಭಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಶನಿವಾರ ನಡೆದ ‘ಗಿರಿಜನ ಉತ್ಸವ’ವು ಹಬ್ಬದಂತೆ ಸಡಗರ ಸಂಭ್ರಮದಿಂದ ಜರುಗಿತು.