ಡಾ.ಗಣಪತಿಯವರು ಇನ್ನು ನೆನಪು ಮಾತ್ರ

14/12/2022

ಮಡಿಕೇರಿ ಡಿ.14 : “ವೈದ್ಯೋ ನಾರಾಯಣೋ ಹರಿ” ಅಂದರೆ ವೈದ್ಯರು ದೇವರ ರೂಪ ಎಂಬ ವ್ಯಾಖ್ಯಾನ ಪುರಾಣ ಕಾಲದಿಂದಲೂ ಉಲ್ಲೇಖವಾದ ಮಾತು. ಇದು ಅಕ್ಷರಶಃ ನಿಜ. ಓರ್ವ ರೋಗಿಯು ಪ್ರಾಣಾಪಾಯದಿಂದ ಪಾರಾದರೆ ಅವನಿಗೆ ಚಿಕಿತ್ಸೆ ನೀಡಿದ ವೈದ್ಯನನ್ನು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಆ ವ್ಯಕ್ತಿಯು ಮತ್ತು ಅವನ ಒಡನಾಡಿಗಳ ಪಾಲಿಗೆ ಅವರು ದೇವರಾಗುತ್ತಾರೆ. ಇದು ಮಾನವನಿಗೆ ಮಾತ್ರವಲ್ಲ ಪ್ರತಿಯೊಂದು ಜೀವಸಂಕುಲದಲ್ಲೂ ಅಂತಹ ನೋಟವನ್ನು ನಾವು ಕಾಣಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಆವಿಷ್ಕಾರದಿಂದ, ಆಧುನಿಕತೆಯ ಸ್ಪರ್ಷದಿಂದ ವೈದ್ಯಕೀಯ ಕ್ಷೇತ್ರ ವ್ಯಾಪಾರೋದ್ಯಮವಾಗಿ ಪರಿವರ್ತನೆಯಾಗಿದೆ. ಸೇವಾ ಮನೋಭಾವ ಕಾಣೆಯಾಗಿದೆ. ಆದರೆ ಕೊಡಗಿನಲ್ಲಿ ಇನ್ನೂ ಅನೇಕ ವೈದ್ಯರು ತಮ್ಮ ಸ್ವಅನುಭವದಿಂದ ಇರುವ ಸೌಲಭ್ಯದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿರುವುದು ಹೆಮ್ಮೆಯ ಸಂಗತಿ.
ಅಂತಹ ವೈದ್ಯರಲ್ಲಿ ಒಬ್ಬರಾದ ಡಾ||ಗಣಪತಿ ರವರ ಬಗ್ಗೆ ಒಂದು ಸಣ್ಣ ಬರಹ. ಅಜ್ಜಮಾಡ ಕುಟುಂಬಕ್ಕೆ ಸೇರಿದ ಇವರು ದಿನಾಂಕ:02-07-1940ರಲ್ಲಿ ಹುದಿಕೇರಿಯ ಕುರ್ಚಿ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಮಾದಪ್ಪ ತಾಯಿ ತಾಯಮ್ಮ. ಇವರು ತಮ್ಮ 6ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಹುದಿಕೇರಿಯ ಸರ್ಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದ ಇವರು ಮೈಸೂರಿನ ಸಂತ ಫಿಲೋಮಿನ ಕಾಲೇಜು ಇಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ, ನಂತರ ಅಲ್ಲಿಯೇ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸೇರಿದರು. ಇಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಇವರ ಪೂರ್ಣ ಶಿಕ್ಷಣವು ಸರ್ಕಾರದಿಂದ ಸಿಗುವ ವಿದ್ಯಾರ್ಥಿವೇತನದಿಂದಲೇ ಮುಗಿಸಿದರು. ಇವರು ಬಾಲ್ಯದಿಂದಲೂ ಚುರುಕಾದ, ಚೂಟಿತನದಿಂದ ಕೂಡಿದ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಕೇಂದ್ರ ಸರ್ಕಾರದಿಂದ ಸಿಗುವ ಪುಸ್ತಕಗಳು, ತಿಂಗಳ ಕೈ ಖರ್ಚಿನ ಹಣ (Pocket Money), , ಕಾಲೇಜಿನ ಶುಲ್ಕ, ಪರೀಕ್ಷಾ ಶುಲ್ಕಗಳು ಎಲ್ಲವನ್ನೂ ವಿದ್ಯಾರ್ಥಿ ವೇತನ ರೂಪದಲ್ಲಿ ಪಡೆದು ವಿದ್ಯಾಭ್ಯಾಸವನ್ನು ಮುಗಿಸಿದರು. ನಂತರ ಅದೇ ಕಾಲೇಜಿನಲ್ಲಿ ಪೆಥಾಲಜಿ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು. ಕೆಲ ಸಮಯದ ನಂತರ 1968ರಲ್ಲಿ ಸರ್ಕಾರಿ ಹುದ್ದೆಗೆ ಸೇರಿ, ಮಾದಾಪುರದಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ನಂತರ ಚೆಟ್ಟಳ್ಳಿಗೆ ವರ್ಗವಾಗಿ ಅಲ್ಲಿ ಕೆಲ ಸಮಯ ಕಾರ್ಯ ನಿರ್ವಹಿಸಿದರು. ತಾವು ಸೇವೆಯಲ್ಲಿರುವಾಗಲೇ ತಮ್ಮ ಹೆಚ್ಚಿನ ವ್ಯಾಸಂಗಕ್ಕಾಗಿ ತೆರಳಿದರು. ಮೈಸೂರಿನಲ್ಲಿ ಜನರಲ್ ಮೆಡಿಸನ್‍ನಲ್ಲಿ ಎಂ.ಡಿ. ಪದವಿಯನ್ನು ಪಡೆದ ಇವರು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ವೈದ್ಯರಾಗಿ ನಿಯೋಜನೆಗೊಂಡರು. ಸುಮಾರು 8 ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿದ ಇವರಿಗೆ ಇಲ್ಲಿಂದ ವರ್ಗವಾದಾಗ ಸರ್ಕಾರಿ ಹುದ್ದೆಗೆ ರಾಜಿನಾಮೆ ನೀಡಿ ಒಂದೇ ಸ್ಥಳದಲ್ಲಿ ಜನರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ತಮ್ಮದೇ ಆದ ಸ್ವಂತ ಆಸ್ಪತ್ರೆಯನ್ನು ಕಟ್ಟಲು ನಿರ್ಧರಿಸಿದರು.
ಈ ಕಾರ್ಯಕ್ಕೆ ಕೈ ಜೋಡಿಸಿದವರು ತಮ್ಮ ನೆಚ್ಚಿನ ಗೆಳೆಯರಾದ ಶ್ರೀ ಪಿ.ಎನ್.ಸುಬ್ಬಯ್ಯ(ತಮ್ಮು) ಮತ್ತು ಶ್ರೀ ಬಿ.ಬಿ.ಬಿದ್ದಯ್ಯನವರೊಡನೆ ಸೇರಿ ‘ಮರ್ಕರ ನರ್ಸಿಂಗ್ ಹೋಂ’ ಎಂಬ ಹೆಸರಿನಿಂದ ಆಸ್ಪತ್ರೆಯನ್ನು ದಿನಾಂಕ:11-10-1978ರಲ್ಲಿ ಆರಂಭಿಸಿಯೇ ಬಿಟ್ಟರು. ಇದನ್ನು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪರವರು ಉದ್ಘಾಟಿಸಿದರು. ಮುಂದೆ ಇದು ಡಾ|| ಗಣಪತಿ ಆಸ್ಪತ್ರೆ ಎಂದೇ ಜನಮನದಲ್ಲಿ ಪ್ರಚಲಿತವಾಯಿತು. ಏಕೆಂದರೆ ಇವರ ಸೇವಾ ಮನೋಭಾವ ಅಂತಹದ್ದು. ಅನೇಕ ಜನರ ಪ್ರಾಣ ಉಳಿಸಿದ ಆಸ್ಪತ್ರೆ ಇದು. ಅನೇಕರ ಪಾಲಿಗೆ ಇಂದಿಗೂ ಅದು ದೇಗುಲವೆಂದರೆ ಉತ್ಪ್ರೇಕ್ಷೆಯಾಗದು. ಒಂದು ಸಣ್ಣ ಆಸ್ಪತ್ರೆಯಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿಗಳಿಂದ ಯಾವುದೇ ಹೈಟೆಕ್ ಸೌಲಭ್ಯವಿಲ್ಲದೇ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ ಇವರು ಜನಮನದಲ್ಲಿ ಉಳಿಯುತ್ತಾರೆ. ಇಂದು ಮಾತೆತ್ತಿದರೆ ರೋಗಿಗಳನ್ನು ತೀವ್ರ ನಿಗಾ ಘಟಕಕ್ಕೆ ಹಾಕಿ ಗಂಟೆಗೊಮ್ಮೆ ಸಾವಿರಾರು ರೂಪಾಯಿಗಳಿಗೆ ಬೆಲೆ ಬಾಳುವ ಚುಚ್ಚು ಮದ್ದನ್ನು ನೀಡಿ ಕೈಗೆ ಲಕ್ಷಗಟ್ಟಲೆ ಬಿಲ್ ನೀಡುವ ಕೆಲವೊಮ್ಮೆ ಮರಣ ಹೊಂದಿದರೆ ಹೆಣವನ್ನೂ ನೀಡದೇ ಸತಾಯಿಸುವ ಆಸ್ಪತ್ರೆಗಳೆಷ್ಟೋ. ಇವುಗಳಿಗೆ ಹೋಲಿಸಿದರೆ ಇಷ್ಟು ವರ್ಷ ಒಂದೇ ಒಂದು ತೀವ್ರ ನಿಗಾ ಘಟಕ ಕೊಠಡಿ ಇಲ್ಲದೇ ತಮ್ಮ ಸೇವಾ ಮನೋಭಾವದಿಂದ ಉಳಿಸಿದ ಪ್ರಾಣಗಳೆಷ್ಟೋ ಎಂಬುದನ್ನು ನಾವು ಅರಿಯಬೇಕು. ವೃತ್ತಿಯಲ್ಲಿ ಸೇವಾ ಮನೋಭಾವದಿಂದ ತೊಡಗಿಸಿಕೊಂಡರೆ ಮೂಲಭೂತ ಸೌಕರ್ಯದ ಕೊರತೆ ಇದ್ದರೂ ಜನರಿಗೆ ಉತ್ತಮ ಸೇವೆ ನೀಡಬಹುದೆಂಬುದಕ್ಕೆ ಇವರೇ ಸಾಕ್ಷಿ.
ಇವರ ಆಸ್ಪತ್ರೆಗೆ ಬರುತ್ತಿದ್ದವರು ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾದವರೇ. ಅವರಿಗೆ ಚಿಕಿತ್ಸೆ ನೀಡುವುದೆಂದರೆ ಬೆಂಕಿಯೊಡನೆ ಸರಸವಾಡಿದಂತೆ. ಇಂದಿಗೂ ಕೊಡಗಿನಲ್ಲಿ ಅನೇಕ ವೈದ್ಯರು ಜಿಲ್ಲಾಸ್ಪತ್ರೆ ಸೇರಿ ಇಂತಹ ರೋಗಿಗಳನ್ನು ದೊಡ್ಡ ಆಸ್ಪತ್ರೆಗೆ ರವಾನಿಸುತ್ತಾರೆ. ಈ ಹಿಂದೆ ಇಂತಹ ಸೌಲಭ್ಯ ಇಲ್ಲದ ಕಾಲದಲ್ಲಿ ಇಂತಹ ರೋಗಿಗಳಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ ಅನೇಕ ನಿದರ್ಶನಗಳಿವೆ. ಇವರು ರೋಗಿಯ ಆರೈಕೆಯಲ್ಲಿ ತೊಡಗಿಸಿಕೊಂಡರೆ ಪ್ರಾಣಾಪಾಯದಿಂದ ರೋಗಿಯು ಹೊರಬರುವವರೆಗೂ ಇವರು ನರ್ಸಿಂಗ್ ಹೋಂ ಬಿಟ್ಟು ಕದಲುತ್ತಿರಲಿಲ್ಲ. ಅದಕ್ಕಾಗಿ ಊಟ, ನಿದ್ದೆ ಬಿಟ್ಟು ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇದಕ್ಕಾಗಿ ತಮ್ಮ ಖಾಸಗಿ ಬದುಕನ್ನು, ಖಾಸಗಿ ಸಮಾರಂಭಗಳನ್ನು ಹಾಗೂ ಸಾರ್ವಜನಿಕ ಜೀವನವನ್ನು ತ್ಯಾಗ ಮಾಡಿದ್ದಾರೆ. ಅವರ ಸೇವಾ ಮನೋಭಾವವನ್ನು ಪದಗಳಿಂದ ವರ್ಣಿಸಲು ಅಸಾಧ್ಯ. ಅದನ್ನು ಅನುಭವಿಸಿದವರಿಗೇ ಗೊತ್ತು. ಅವರ ಆಸ್ಪತ್ರೆ ಖಾಸಗಿಯಾಗಿದ್ದರೂ ಅನೇಕರಿಗೆ ರಿಯಾಯಿತಿ ದರದಲ್ಲೂ, ಉಚಿತವಾಗಿಯೂ ಸೇವಾ ಸೌಲಭ್ಯ ದೊರೆಯುತ್ತಿತ್ತು. ಅವರ ಆಸ್ಪತ್ರೆಯನ್ನು ಎಂದೂ ಸುಲಿಗೆಯ ಕೇಂದ್ರವನ್ನಾಗಿ ಪರಿವರ್ತಿಸಿಕೊಂಡಿಲ್ಲ. ಇವರ ಆಸ್ಪತ್ರೆಯಲ್ಲಿ ವಿದ್ಯುಚ್ಛಕ್ತಿ ಕೈಕೊಟ್ಟಾಗ ಕ್ಯಾಂಡಲ್ ಹಚ್ಚಿಕೊಂಡು ಸೇವೆ ಮಾಡಿದ ದಿನಗಳು ಇವೆ. ಇದನ್ನು ಕಂಡ ರೋಗಿಯೊಬ್ಬರು ಅವರ ತಾಯಿಯ ಹೆಸರಿನಲ್ಲಿ ಇನ್‍ವರ್ಟರ್ ಒಂದನ್ನು ದಾನವಾಗಿ ನೀಡಿದ್ದರು. ಅಷ್ಟು ಸರಳತೆಯಿಂದ ಆಸ್ಪತ್ರ್ರೆಯನ್ನು ನಡೆಸುತ್ತಿದ್ದರು.
ಡಾ|| ಗಣಪತಿಯವರಿಗೆ ಸ್ವಲ್ಪ ಮುಂಗೋಪ ಜಾಸ್ತಿ, ಸಿಡುಕುತ್ತಾರೆ ಎಂಬ ಮಾತು ಜನವಲಯದಲ್ಲಿದೆ. ಕೆಲವರು ಅವರೊಡನೆ ಮಾತನಾಡಲು ಹೆದರುತ್ತಾರೆ. ಇದಕ್ಕೆ ಕಾರಣವು ಇದೆ ಒಂದು ಕಡೆ ಕೆಲಸದ ಒತ್ತಡವಾದರೆ ಇನ್ನೊಂದೆಡೆ ತಮ್ಮ ನೆಚ್ಚಿನ ಪತ್ನಿಯ ಕಿಡ್ನಿ ಸಮಸ್ಯೆಯು ಬಹುವಾಗಿ ಕಾಡಿತು. ಅವರನ್ನು ಕಳೆದುಕೊಂಡ ನಂತರ ಅವರಿಗೆ ಮಾನಸಿಕವಾಗಿ ತುಂಬಾ ಬಳಲುವಂತೆ ಮಾಡಿತು. ಅವರ ಅಂತರಾಳವನ್ನು ಅರಿತವರಿಗೆ ಅವರೆಂತಹ ಸ್ನೇಹ ಜೀವಿ ಎಂಬುದು ಅರಿವಾಗುತ್ತಿತ್ತು. ಇದಕ್ಕೆ ಉದಾಹರಣೆ ನನ್ನ ತಂದೆ ಮತ್ತು ಇವರ ನಡುವಿನ ಸ್ನೇಹ. ಇದು ಸುಮಾರು 53 ವರ್ಷಗಳಷ್ಟು ಹಳೆಯದು. ಇಂದಿಗೂ ಅನೇಕ ರೋಗಿಗಳೇ ಇವರ ಒಡನಾಡಿಗಳು. ಅದೇ ರೀತಿ ಅವರ ಆಸ್ಪತ್ರೆ ಸಿಬ್ಬಂದಿಗಳು ಕೂಡಾ ಅನೇಕ ವರ್ಷ ಇವರ ಕೈ ಕೆಳಗೆ ಕೆಲಸ ಮಾಡಿರುವ ನಿದರ್ಶನವಿದೆ. ಇಂದಿಗೂ ಕೂಡ ಅನೇಕರು ಅವರಲ್ಲಿಯೇ ಅನೇಕ ವರ್ಷಗಳಿಂದ ಕಾಯಕವನ್ನು ಮಾಡುತ್ತಿದ್ದಾರೆ. ಇದು ಅವರ ಮೃದು ಮನೋಭಾವಕ್ಕೆ ಸಾಕ್ಷಿ.
ಅವರ ಸೇವಾ ಮನೋಭಾವದೊಡನೆ ಅವರ ಶಿಸ್ತು ಮತ್ತು ಸ್ವಚ್ಛತೆ, ಅವರ ಸರಳತೆ ಬಗ್ಗೆ ಬರೆಯದಿದ್ದರೆ ಈ ಬರವಣಿಗೆ ಅಪೂರ್ಣವೆನಿಸುತ್ತದೆ. ಕಳೆದ 43 ವರ್ಷಗಳಿಂದ ಅವರ ಆಸ್ಪತ್ರೆಯಲ್ಲಿ ಅದೇ ಶಿಸ್ತು, ಅದೇ ಸ್ವಚ್ಛತೆ, ಅದೇ ಸೇವೆ ಒಂದಿಷ್ಟು ಕೂಡ ಬದಲಾಗಲಿಲ್ಲ. ಇವರು ಧರಿಸುವ ವಸ್ತ್ರಗಳು, ಇವರ ವಾಹನ, ಇವರ ಮನೆಯ ಪರಿಸರ ಪ್ರತಿಯೊಂದರಲ್ಲೂ ಶಿಸ್ತು, ಸ್ವಚ್ಛತೆ, ಸಮಯಪ್ರಜ್ಞೆ ಎದ್ದು ಕಾಣುತ್ತದೆ. ಇವರು ಆಸ್ಪತ್ರೆಗೆ ಬರುವ ಸಮಯದಲ್ಲಿ ಒಂದಿಷ್ಟು ವ್ಯತ್ಯಾಸವಾಗುತ್ತಿರಲಿಲ್ಲ. ಅದೇ ರೀತಿ ಬರುವ ರೀತಿಯಲ್ಲೂ ಕೂಡ. ಕೆಲವು ವೇಳೆ ರಾತ್ರಿಯ ತುರ್ತು ಸಂದರ್ಭದಲ್ಲಿಯೂ ಕೂಡ ಬೆಳಗಿನ ಜಾವ ಆಸ್ಪತ್ರೆಗೆ ಹೇಗೆ ಬರುತ್ತಿದ್ದರೋ ಹಾಗೆಯೆ ರಾತ್ರಿಯೂ ಕೂಡ ಬರುವಾಗ ಯಾವುದೇ ವ್ಯತ್ಯಾಸ ಕಂಡುಬರುತ್ತಿರಲಿಲ್ಲ. ವೃತ್ತಿ ನಿರತರು ತಮ್ಮ ವೃತ್ತಿಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕೆಂದು ಹಲವು ಸಾರಿ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಬರುತ್ತಿದ್ದ ಇವರು ಹಗಲು ವೇಳೆ ಹೇಗೆ ವಸ್ತ್ರ ಧರಿಸಿ ಬರುತ್ತಿದ್ದರೋ ಅದೇ ರೀತಿ ರಾತ್ರಿ ಕೂಡ ಬರುತ್ತಿದ್ದರು. ವೃತ್ತಿಪರರು ಯಾವ ರೀತಿ ವಸ್ತ್ರ ಧರಿಸಬೇಕೆಂದು ಇವರನ್ನು ನೋಡಿ ಕಲಿಯಬೇಕು.
1968ರಲ್ಲಿ ಕಳ್ಳಿಚಂಡ ಕುಟುಂಬಕ್ಕೆ ಸೇರಿದ ವಾಣಿರವರನ್ನು ವಿವಾಹವಾದ ಇವರಿಗೆ ಇಬ್ಬರು ಹೆಣ್ಣುಮಕ್ಕಳು. ಇವರ ಪತ್ನಿಯು ಬಹಳ ಸರಳ ಮತ್ತು ಸ್ನೇಹಪರ ಜೀವಿಯಾಗಿದ್ದರು. ಗಂಡನಿಗೆ ಸರಿಸಮಾನವಾಗಿ ಇದ್ದಂತಹವರು. ಇವರ ಹಿರಿಯ ಮಗಳು ಮಮತ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಡೀನ್ ಆಗಿರುವ ಚೆಪ್ಪುಡಿರ ಡಾ|| ಕುಶಾಲಪ್ಪ ಇವರನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳು. ಇವರ ಮೊದಲ ಮಗ ಡಾ||ಕುನಾಲ್ ಕುಶಾಲಪ್ಪ ಅಜ್ಜನ ವೃತ್ತಿಯನ್ನೇ ಆರಿಸಿಕೊಂಡಿದ್ದಾನೆ. ಎರಡನೇ ಮಗಳು ಡಾ|| ನಮಿತರವರು ಡಾ||ನಿಖಿಲ್ ಕಪೂರ್‍ರವರನ್ನು ಮದುವೆಯಾಗಿ ದೆಹಲಿಯಲ್ಲಿ ನೆಲೆಸಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಮಗಳು, ಅಳಿಯ, ಮೊಮ್ಮಗ ವೈದ್ಯಕೀಯ ಡಾಕ್ಟರ್‍ಗಳಾದರೆ ಇನ್ನೊಬ್ಬ ಅಳಿಯ ಪಿ.ಹೆಚ್.ಡಿ. ಡಾಕ್ಟರ್. ಒಂದು ರೀತಿಯಲ್ಲಿ ಡಾಕ್ಟರ್‍ಗಳ ಕುಟುಂಬ.
ಒಂದು ಸಾಮಾನ್ಯ ಕುಟುಂಬ ಸಾಮಾನ್ಯ ಹಳ್ಳಿಯಿಂದ ಬಂದು ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಇವರಿಗೆ ವಿದೇಶಕ್ಕೆ ಹೋಗುವ ಅವಕಾಶವಿತ್ತು. ತಾಯಿಯ ವಿರೋಧದಿಂದ ಅವರ ಅಭಿಲಾಷೆಯಂತೆ ಹುಟ್ಟೂರಿನಲ್ಲೇ ಜನರಿಗೆ ಸೇವೆಯನ್ನು ಮಾಡಲು ಅವರು ಇಲ್ಲಿಯೇ ಉಳಿದರು. ತಾವು ವಿದೇಶಕ್ಕೆ ಹೊರಟಾಗ ತಾಯಿಯು ಎರಡು ದಿನ ಊಟ ಬಿಟ್ಟದ್ದನ್ನು ನಂತರ ಆ ಪತ್ರವನ್ನು ಹರಿದ ನಂತರ ಊಟ ಮಾಡಿದ್ದನ್ನು ಹಾಸ್ಯಭರಿತವಾಗಿ ನೆನೆಸಿಕೊಳ್ಳುತ್ತಾರೆ. ಆದ್ದರಿಂದ ಅವರ ಆಸ್ಪತ್ರೆ, ಅವರ ಸೇವೆ ಇಂದಿಗೂ ವ್ಯಾಪಾರೋದ್ಯಮವಾಗಿ ಪರಿವರ್ತನೆಯಾಗಿಲ್ಲ. ಇಂದಿಗೂ ಇಳಿ ವಯಸ್ಸಿನಲ್ಲೂ ತಾವೇ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡದ್ದನ್ನು ನೋಡಿದರೆ ನಿಜಕ್ಕೂ ಮೂಕ ವಿಸ್ಮಯ.
‘Mother who was illiterate brought me up’ ಎಂದು ತನ್ನ ಇಂದಿನ ಈ ಬೆಳವಣಿಗೆಗೆ ಅವರು ತನ್ನ ಅನಕ್ಷರಸ್ಥೆ ತಾಯಿಯೆ ಕಾರಣ ಎಂದು ನೆನೆಯುತ್ತಾರೆ. ಅವರು ಕಷ್ಟಪಟ್ಟು ನನ್ನ ಡಾಕ್ಟರ್ ಓದಿಸುವ ಅವರ ಕನಸನ್ನು ತಾನು ನನಸು ಮಾಡಿದ್ದನ್ನು ಈಗಲೂ ನೆನೆಸಿಕೊಳ್ಳುತ್ತಾರೆ. ಇವರು ಉನ್ನತ ವ್ಯಾಸಂಗ ಮಾಡುವ ಸಮಯದಲ್ಲಿ ಸೀಮೆಣ್ಣೆ ಸ್ಟೌವ್‍ನಲ್ಲಿ ಅಡಿಗೆ ಮಾಡಿಕೊಳ್ಳುತ್ತಿದ್ದುದನ್ನು, ಇವರ ಸ್ನೇಹಿತರೊಬ್ಬರು ವಿದೇಶಕ್ಕೆ ಹೋಗುವಾಗ ಇವರಿಗೆ ಅವರ ಗ್ಯಾಸ್ ಸ್ಟೌವ್ ಮತ್ತು ಸಿಲಿಂಡರನ್ನು ನೀಡಿದ್ದನ್ನು ತುಂಬಾ ಹಾಸ್ಯಭರಿತವಾಗಿ ಹೇಳುತ್ತಾರೆ. ಅಂದರೆ ತಮ್ಮ ಕಷ್ಟಕರ ದಿನಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇವರು ಮಹಾನ್ ದೈವ ಭಕ್ತರು. ನೋಡುಗರಿಗೆ ಹಾಗನಿಸುವುದಿಲ್ಲ. ಇವರು ಅನೇಕ ವರ್ಷಗಳ ಕಾಲ ಶಬರಿಮಲೆಗೂ ಕೂಡ ಹೋಗಿದ್ದರು. ತಮ್ಮ ಆಸ್ಪತ್ರೆಯಲ್ಲಿ ಬೆಳಿಗ್ಗೆ ಗಣಪತಿಯ ಮೂರ್ತಿಗೆ ನಿಂತಲ್ಲಿಂದಲೇ ನಮಸ್ಕರಿಸಿ ರೋಗಿಗಳ ಸೇವೆಯಲ್ಲಿ ತೊಡಗಿಕೊಳ್ಳುವರು.
ನಾನು ನನ್ನ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಹೊರ ಜಿಲ್ಲೆಯಲ್ಲಿ ವೈದ್ಯರೊಬ್ಬರನ್ನು ಭೇಟಿಯದಾಗ ನನ್ನ ವೈದ್ಯಕೀಯ ದಾಖಲೆಗಳಲ್ಲಿ ಡಾ||ಗಣಪತಿಯವರ ದಾಖಲೆಗಳನ್ನು ನೋಡಿ ‘He is the last physician of this generation ಎಂಬುದು ಆ ಡಾಕ್ಟರ್‍ರವರ ಬಾಯಿಯಿಂದ ಅವರಿಗೆ ಅರಿವಿಲ್ಲದೇ ಉದ್ಘರಿಸಿದ ಮಾತು. ಇದು ವಾಸ್ತವ, ಆದರೆ ಉತ್ಪ್ರೇಕ್ಷೆಯಾಗಿರಲಿಲ್ಲ. ಇಂದಿಗೂ ಇವರು ನೀಡಿದಂತಹ ಔಷಧಿಗಳು, ರೋಗಿಯ ರೋಗದ ಕಾರಣವನ್ನು ಕಂಡುಹಿಡಿದಿದ್ದನ್ನು ಯಾರೂ ಅಲ್ಲಗಳೆಯುವುದಿಲ್ಲ. ಅಷ್ಟರಮಟ್ಟಿಗೆ ಇವರು ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
1968ರಲ್ಲಿ ಆರಂಭವಾದ ಇವರ ವೈದ್ಯಕೀಯ ಸೇವೆ 53 ವರ್ಷಗಳ ಸುಧೀರ್ಘ ಸೇವೆಯ ಜನರ ಮನದಲ್ಲಿ ಹಚ್ಚ ಹಸಿರಾಗಿದೆ,
ಇವರು ಎಂದೂ ತಮ್ಮ ಸೇವೆಗೆ ಸನ್ಮಾನ ಹರಸಿದವರಲ್ಲ. ತಮ್ಮ ಸೇವೆಯನ್ನು ಪ್ರಚಾರಕ್ಕೆ ಬಳಸಿಕೊಂಡವರಲ್ಲ. ಕಾಯಕವೇ ಕೈಲಾಸ ಎಂದು ವೃತ್ತಿಯಲ್ಲಿ ನಿಷ್ಠೆಯನ್ನು ಕಾದುಕೊಂಡವರು. ಇಂತಹವರು ಸಮಾಜದಲ್ಲಿ ಕಾಣಬರುವುದು ಅಪರೂಪ. ಇಂಥವರು ಸಮಾಜದಲ್ಲಿ ಇನ್ನು ಕಾಣ ಸಿಗುವುದು ಅಪರೂಪ, ನಿಮ್ಮ ಸೇವೆ ಈ ಸಮಾಜಕ್ಕೆ ಇನಷ್ಟು ಕಾಲ ಬೇಕಿತ್ತು, ತಾನೊಂದು ಬಗೆದರೆ ದೈವವೊಂದು ಬಗೆಯಿತು. ಪುರ್ನಜನ್ಮವಿದ್ದರೆ ಮತ್ತೊಮ್ಮೆ ಕೊಡಗಿನಲ್ಲಿ ಹುಟ್ಟಿ ಬನ್ನಿ ಎಂದು ನಮ್ಮೆಲರ ಆಶಾಯ, ನಿಮ್ಮ ಸೇವೆಯು ಸದಾ ಜನರ ಮನದಲ್ಲಿ ಚಿರಾಸ್ಥಯವಾಗಿ ಉಳಿಯಲಿ.

ವರದಿ :  ಬಾಳೆಯಡ ಕಿಶನ್ ಪೂವಯ್ಯ
ವಕೀಲರು ಮತ್ತು ನೋಟರಿ
ಮಡಿಕೇರಿ
ಮೊ. 9448899554