ಸೌಂದರ್ಯ ದ ತಾಣ ಕುಂದಾದ್ರಿ ಬೆಟ್ಟ

24/12/2022

ಕುಂದಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಇದೆ. ತೀರ್ಥಹಳ್ಳಿಯಿಂದ ಆಗುಂಬೆ ಕಡೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು 9 ಕಿ.ಮೀ ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ. ಎತ್ತರ 1343 ಮೀ. ಬೆಟ್ಟವನ್ನು ತಲುಪಲು ಡಾಂಬರು ರಸ್ತೆಯಿದೆ ಹಾಗೂ ನಡೆದು ಹೋಗಲು ಕಾಲು ದಾರಿ ಕೂಡ ಇದೆ. ಕುಂದಾದ್ರಿ ಬೆಟ್ಟವು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಬೆಟ್ಟದ ಮೇಲೆ ಪಾರ್ಶ್ವನಾಥ ಚೈತ್ಯಾಲಯ(ಜೈನ ಬಸದಿ)ವಿದೆ. ಇಲ್ಲಿಗೆ ಪ್ರತಿ ವರುಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ ಹಾಗೂ ನೂರಾರು ಚಾರಣಿಗರು ಚಾರಣ ಮಾಡಲು ಬರುತ್ತಾರೆ. ಬೆಟ್ಟದ ಮೇಲಿನಿಂದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬವಾಗುತ್ತದೆ. ಎಲ್ಲಿ ನೋಡಿದರಲ್ಲಿ ದಟ್ಟ ಕಾಡು, ತೋಟ, ಹೊಲ-ಗದ್ದೆಗಳು.

ಇತಿಹಾಸ :
ಈ ಬೆಟ್ಟದಲ್ಲಿ ಜೈನ ಮುನಿ ಕುಂದಕುಂದಚಾರ್ಯ ಮಹರ್ಷಿಗಳು ತಪಸ್ಸು ಮಾಡಿದರೆಂಬ ಪ್ರತೀತಿಯ ಹಿನ್ನೆಲೆಯಲ್ಲಿ ಈ ಬೆಟ್ಟಕ್ಕೆ ಕುಂದಾದ್ರಿ ಎಂಬ ಹೆಸರು ಬಂತು. ಭಾಷಾ ಶಾಸ್ತ್ರದ ನಿಟ್ಟಿನಲ್ಲಿ ನೋಡಿದರೆ, ಕನ್ನಡದಲ್ಲಿ ಕುಂದ ಎಂಬ ಪದಕ್ಕೆ ಎತ್ತರವಾದ ಗೋಡೆ ಎಂಬ ಅರ್ಥವೂ ಇರುವುದರಿಂದ, ಕುಂದದ ರೀತಿ ಇರುವ ಬೆಟ್ಟ ಕುಂದಾದ್ರಿ ಎಂಬ ಹೆಸರು ಜನಬಳಕೆಯಲ್ಲಿ ಬಂದಿರಲೂಬಹುದು.