Sunday, August 18, 2019 8:20 AM

ಮಳೆ ತಗ್ಗಿದರೂ ಪ್ರವಾಹ ಭೀತಿ
49
ಮಳೆ ತಗ್ಗಿದರೂ ಪ್ರವಾಹ ಭೀತಿ

ಬೆಳಗಾವಿ ಆ.೧೧ : ರಾಜ್ಯದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಳೆಯ ಪ್ರಮಾಣ ತಗ್ಗಿದ್ದರೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಬೆಳಗಾವಿಯಲ್ಲಿ ೭ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ, ವೇದಗಂಗಾ, ದೂದಗಂಗಾ, ಮಲಪ್ರಭಾ, ಘಟಪ್ರಭಾ ನದಿಗಳು ಸೇರಿದಂತೆ ಏಳು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ೧೪ ತಾಲೂಕಿನ ೨೪೫ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಜಿಲ್ಲೆಯ ನೆರೆ ಬಾಧಿತ ಪ್ರದೇಶಗಳಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಾಥ್ ನೀಡಲಿದ್ದಾರೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ಕೋಟೆ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದ್ದು, ಕಂಪ್ಲಿ ಮತ್ತು ಗಂಗಾವತಿ ನಡುವಿನ ಸಂಚಾರ ಸ್ಥಗಿತಗೊಂಡಿದೆ. ತುಂಗಭದ್ರಾ ಜಲಾಶಯಕ್ಕೆ ತುಂಗಾ ಮತ್ತು ಭದ್ರ ಜಲಾಶಯದಿಂದ ಸುಮಾರು ೨ ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದೆ.
ತುಂಗಭದ್ರಾ ನದಿ ಪಾತ್ರದ ಕೋಟೆ ಪ್ರದೇಶದ ಆಂಜನೇಯ ದೇವಸ್ಥಾನ, ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಪ್ರವಾಹಪೀಡಿತ ಮಳೆಗೆ ಮತ್ತೆ ನಾಲ್ಕು ಮಂದಿ ನಿನ್ನೆ ಮೃತಪಟ್ಟು ಇದುವರೆಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ ೩೧ಕ್ಕೇರಿದೆ. ೧೪ ಮಂದಿ ಕಣ್ಮರೆಯಾಗಿದ್ದಾರೆ. ಸುಮಾರು ೩.೧೪ ಲಕ್ಷ ಮಂದಿಯನ್ನು ಇದುವರೆಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಅವರಲ್ಲಿ ೨.೧೮ ಲಕ್ಷ ಮಂದಿ ೯೨೪ ನಿರಾಶ್ರಿತ ತಾಣಗಳಲ್ಲಿ ಉಳಿದುಕೊಂಡಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್