Sunday, August 18, 2019 8:42 AM

ಪರಿಹಾರದ ಮೊತ್ತ ಹೆಚ್ಚಿಸಲು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಒತ್ತಾಯ
81
ಪರಿಹಾರದ ಮೊತ್ತ ಹೆಚ್ಚಿಸಲು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಒತ್ತಾಯ

ಮಡಿಕೇರಿ ಆ.13 :
ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಹಾಮಳೆಯಿಂದ ಪ್ರವಾಹ ಏರ್ಪಟ್ಟು ಕೊಡಗಿನ ನೂರಾರು ಮಂದಿ ಮನೆ ಮತ್ತು ಕೃಷಿಭೂಮಿಯನ್ನು ಕಳೆದುಕೊಂಡಿದ್ದಾರೆ. ಮನೆ ನಿರ್ಮಿಸಲು ರಾಜ್ಯ ಸರಕಾರ ತಲಾ ರೂ.10 ಲಕ್ಷವನ್ನು ಘೋಷಿಸಬೇಕು ಮತ್ತು ಕೃಷಿಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎ.ಕೆ.ಹ್ಯಾರಿಸ್ ಒತ್ತಾಯಿಸಿದ್ದಾರೆ.
ಅವರು ಮಳೆಹಾನಿ ಪ್ರದೇಶಗಳಾದ ನೆಲ್ಲಿಹುದಿಕೇರಿ, ಸಿದ್ದಾಪುರ, ಗುಹ್ಯ, ಕೊಂಡಂಗೇರಿ, ಚೆರಿಯಪರಂಬು, ಎಮ್ಮೆಮಾಡು, ಬೇತ್ರಿ, ತೋರ, ನಾಪೆÇೀಕ್ಲು, ಕೊಟ್ಟಮುಡಿಗೆ ಹಾಗೂ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಮನೆ ಮತ್ತು ಕೃಷಿಭೂಮಿ ಕಳೆದುಕೊಂಡವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಮಾತನಾಡಿದ ಹ್ಯಾರಿಸ್, ಕೊಡಗಿನ ನೆರೆ ಸಂತ್ರಸ್ತರ ಸ್ಥಿತಿ ಶೋಚನೀಯವಾಗಿದ್ದು, ಶಾಶ್ವತ ಪರಿಹಾರಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರಕಾರ ಶೀಘ್ರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಜ್ಯ ಸರಕಾರ ಮನೆ ನಿರ್ಮಿಸಿಕೊಳ್ಳಲು ರೂ.5 ಲಕ್ಷ ಹಾಗೂ ಮನೆ ಬಾಡಿಗೆ ಕೇವಲ ರೂ.5 ಸಾವಿರ ನೀಡುವುದಾಗಿ ಘೋಷಿಸಿದೆ. ಆದರೆ ಇದು ಅತ್ಯಂತ ಅಲ್ಪಮೊತ್ತದ ಪರಿಹಾರವಾಗಿದ್ದು, ಸಂತ್ರಸ್ತರು ಮತ್ತಷ್ಟು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರಕಾರ ಕಳೆದ ವರ್ಷ ಮಳೆಹಾನಿಗೆ ತುತ್ತಾದವರಿಗೆ ಮನೆ ಬಾಡಿಗೆ ಮೊತ್ತ 10 ಸಾವಿರ ರೂ. ನೀಡುತ್ತಿತ್ತು. ಸುಮಾರು 9.50 ಲಕ್ಷ ರೂ.ಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯನ್ನು ರೂಪಿಸಿತ್ತು. ಆದರೆ ಈಗಿನ ಸರಕಾರ ಪರಿಹಾರದ ಮೊತ್ತವನ್ನು ಅಲ್ಪಮೊತ್ತಕ್ಕೆ ಇಳಿಸಿದೆ ಎಂದು ಹ್ಯಾರಿಸ್ ಟೀಕಿಸಿದರು.
ರಾಜ್ಯದ ಬಹುತೇಕ ಭಾಗಕ್ಕೆ ಕಾವೇರಿ ನೀರನ್ನು ಒದಗಿಸುವ ಮತ್ತು ಬೆಟ್ಟಗುಡ್ಡಗಳ ಪ್ರದೇಶಗಳಿಂದ ಆವೃತ್ತವಾಗಿರುವ ಕೊಡಗು ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಹೆಚ್ಚಿನ ಮೊತ್ತದ ಪರಿಹಾರವನ್ನು ಘೋಷಿಸಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ನೆರೆ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಿದೆ ಎಂದು ಹ್ಯಾರಿಸ್ ಭರವಸೆ ನೀಡಿದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್