Saturday, December 14, 2019 11:27 AM

ಕೇರಳದಲ್ಲಿ ಮಳೆ ಜೋರು : ಕೊಡಗಿನಲ್ಲೂ ಎಚ್ಚರದಿಂದಿರಲು ಜಿಲ್ಲಾಡಳಿತ ಮನವಿ
151
ಕೇರಳದಲ್ಲಿ ಮಳೆ ಜೋರು : ಕೊಡಗಿನಲ್ಲೂ ಎಚ್ಚರದಿಂದಿರಲು ಜಿಲ್ಲಾಡಳಿತ ಮನವಿ

ಮಡಿಕೇರಿ ಆ.13 :
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ್ದ ಮುಂಗಾರು ಮಳೆ ಮಂಗಳವಾರ ಅಪರಾಹ್ನದಿಂದ ಮತ್ತೆ ಚುರುಕುಗೊಳ್ಳುವ ಮುನ್ಸೂಚನೆ ನೀಡಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಕೇರಳ ರಾಜ್ಯದಲ್ಲಿ ಮುಂಗಾರು ತೀವ್ರಗೊಂಡಿದ್ದು, ಇದರ ಪ್ರಭಾವದಿಂದ ಕೊಡಗು ಜಿಲ್ಲೆಯಲ್ಲೂ ಸಾಮಾನ್ಯ ಮಳೆಯ ಜೊತೆಗೆ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದಾಗಿ ಹೇಳಿದೆ.
ಈಗಾಗಲೇ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರು ಆ.15ರವರೆಗೆ ಪರಿಹಾರ ಕೇಂದ್ರಗಳಲ್ಲೇ ಇರುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಮತ್ತು ಕೆಲವು ಪ್ರದೇಶಗಳಲ್ಲಿ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ಜಿಲ್ಲಾಡಳಿತದ 24*7 ಕಂಟ್ರೋಲ್‍ರೂಂ ದೂರವಾಣಿ ಸಂಖ್ಯೆ 08272-221077 ಹಾಗೂ ವಾಟ್ಸ್‍ಆಪ್ ಸಂಖ್ಯೆ 8550001077ನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 45.05 ಮಿ.ಮೀ, ವೀರಾಜಪೇಟೆ ತಾಲೂಕಿನಲ್ಲಿ 3.55 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 13.17 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 20.59 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನಾಂಕದಂದು 87.06 ಮಿ.ಮೀ. ಮಳೆಯಾಗಿತ್ತು.
ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸರಾಸರಿ 1961.03 ಮಿ.ಮೀ ಮಳೆಯಾದಂತಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2970.51 ಮಿ.ಮೀ ಮಳೆಯಾಗಿತ್ತು.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 51.40, ನಾಪೋಕ್ಲು 25.40, ಸಂಪಾಜೆ 54.20, ಭಾಗಮಂಡಲ 49.20, ವೀರಾಜಪೇಟೆ ಕಸಬಾ 8.40, ಹುದಿಕೇರಿ 2, ಶ್ರೀಮಂಗಲ 2, ಪೊನ್ನಂಪೇಟೆ 2.40, ಅಮ್ಮತ್ತಿ 2.50, ಬಾಳೆಲೆ 4, ಸೋಮವಾರಪೇಟೆ ಕಸಬಾ 5.40, ಶನಿವಾರಸಂತೆ 8.40, ಶಾಂತಳ್ಳಿ 22.20, ಕೊಡ್ಲಿಪೇಟೆ 17.60, ಕುಶಾಲನಗರ 7.20, ಸುಂಟಿಕೊಪ್ಪ 18.20 ಮಿ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಮಂಗಳವಾರ ಜಲಾಶಯದ ನೀರಿನ ಮಟ್ಟವನ್ನು 2855.74 ಅಡಿಗಳೀಗೆ ಕಾಯ್ದರಿಸಿಕೊಂಡು ಜಲಾಶಯದಿಂದ ನದಿಗೆ 2609 ಹಾಗೂ ನಾಲೆಗೆ 850 ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 2857.10 ಅಡಿ ನೀರಿತ್ತು. ಪ್ರಸಕ್ತ ಜಲಾಶಯಕ್ಕೆ 8746 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಒಳಹರಿವು 24127 ಕ್ಯುಸೆಕ್‍ನಷ್ಟಿತ್ತು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್