Sunday, September 15, 2019 3:35 AM

ಶ್ರದ್ಧಾ ಭಕ್ತಿಯಿಂದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆ
36
ಶ್ರದ್ಧಾ ಭಕ್ತಿಯಿಂದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆ

ಸೋಮವಾರಪೇಟೆ : ಇತಿಹಾಸ ಪ್ರಸಿದ್ಧ ದೊಡ್ಡಮಳ್ತೆ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣಾ ಕಾರ್ಯಕ್ರಮ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಕೆರೆಯ ದಡದ ದೇವಾಲಯದಲ್ಲಿನ ಹೊನ್ನಮ್ಮತಾಯಿ, ಬಸವೇಶ್ವರ ಹಾಗೂ ಗಣಪತಿಗೆ ಬೆಳಗಿನಿಂದಲೇ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಹಿರಿಯರು ಮನೆಯಿಂದ ಪೂಜಿಸಿ ತಂದ ಬಾಗಿನವನ್ನು ವಾದ್ಯಗೋಷ್ಠಿಯೊಂದಿಗೆ ಮೆರೆವಣಿಗೆಯಲ್ಲಿ ತರಲಾಯಿತು. ನಂತರ ದೇವಾಲಯದ ಮುಂಭಾದಲ್ಲಿರುವ ಬಂಗಾರದ ಕಟ್ಟೆಯ ಮೇಲಿಟ್ಟ ಬಾಗಿನಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಪಟೇಲರ ಕುಟುಂಬಸ್ಥರು ಹಾಗೂ ಗ್ರಾಮ ಸಮಿತಿಯವರು ಕೆರೆಯಲ್ಲಿ ಮೊದಲಿಗೆ ಬಾಗಿನ ಅರ್ಪಿಸಿದರು.
ಬಿದಿರಿನಿಂದ ಹೆಣೆದ ಮೊರದಲ್ಲಿ ಹರಿಸಿಣ, ಕುಂಕುಮ, ಬಿಚ್ಚೋಲೆ, ರವಿಕೆ ಕಣ, ಕನ್ನಡಿ, ಬಾಚಣಿಕೆ, ಬಳೆ, ಗೌರಿ ಹೂ, ತೆಂಗಿನ ಕಾಯಿ, ಫಲತಾಂಬೂಲಗಳನ್ನೊಳಗೊಂಡ ಬಾಗಿನವನ್ನು ವಿವಿಧ ಕಡೆಗಳಿಂದ ಆಗಮಿಸಿದ್ದ ನವದಂಪತಿಗಳು ಕೆರೆಯಲ್ಲಿ ಅರ್ಪಿಸಿದರು.
ಗ್ರಾಮದ ಸ್ವರ್ಣಗೌರಿ ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ.ಯೋಗೇಶ್, ಶಾಸಕ ಅಪ್ಪಚ್ಚು ರಂಜನ್, ದೊಡ್ಡಮಳ್ತೆ ಗ್ರಾಪಂ ಅಧ್ಯಕ್ಷ ಎಸ್.ಡಿ.ದಿವಾಕರ್, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಕೆ.ಪಿ.ಚಂದ್ರಕಲಾ, ಸರೋಜಮ್ಮ, ಬಿ.ಜೆ.ದೀಪಕ್, ತಾಪಂ ಸದಸ್ಯೆ ಕುಸುಮಾ ಅಶ್ವಥ್, ಲೀಲಾವತಿ ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ಗಿರೀಶ್ ಮಲ್ಲಪ್ಪ ಮತ್ತಿತರರು ಬಾಗಿನ ಅರ್ಪಿಸಿ, ಗ್ರಾಮಗಳ ಸಮೃದ್ಧಿಗೆ ಸಾಮೂಹಿಕವಾಗಿ ಪ್ರಾರ್ಥಿಸಿದರು.
ಅಕ್ಕಪಕ್ಕದ ಜಿಲ್ಲೆಯ ಭಕ್ತಾಧಿಗಳು, ನವದಂಪತಿಗಳು, ಮುತೈದೆಯರು ತಂಡೋಪತಂಡವಾಗಿ ಆಗಮಿಸಿದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ, ಕೆರೆಯ ಪಕ್ಕದಲ್ಲಿರುವ ಸುಮಾರು 900 ಅಡಿಗೂ ಹೆಚ್ಚಿನ ಎತ್ತರದ ಗವಿಬೆಟ್ಟ ಹಾಗು ಮೋರಿಬೆಟ್ಟಕ್ಕೆ ಚಾರಣ ಮಾಡಿದರು. ಬೆಟ್ಟದ ಮಧ್ಯದಲ್ಲಿರುವ ಗುಹೆಯೊಳಗಿನ ತೀರ್ಥಕೊಳದಲ್ಲಿನ ತೀರ್ಥವನ್ನು ಸೇವಿಸಿದರು. ದೇವಾಲಯ ಆವರಣದಲ್ಲಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಮಹಿಳೆಯರು ಬಳೆ ಇತ್ಯಾದಿ ವಸ್ತುಗಳನ್ನು ಖರೀದಿಸಿದರೆ, ಮಕ್ಕಳು ಆಟದ ಸಾಮಾನುಗಳನ್ನು ಖರೀದಿಸಿ ಸಂಭ್ರಮಿಸಿದರು. ಸರ್ಕಲ್ ಇನ್ಸ್‍ಪೆಕ್ಟರ್ ನಂಜುಂಡೇಗೌಡ, ಠಾಣಾಧಿಕಾರಿಗಳಾದ ಶಿವಶಂಕರ್, ಮರಿಸ್ವಾಮಿ ಹಾಗೂ ಸಿಬ್ಬಂದಿಗಳು ಅವರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್