Sunday, September 15, 2019 3:35 AM

ನಾಗರಹೊಳೆ ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನ
17
ನಾಗರಹೊಳೆ ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನ

ಮಡಿಕೇರಿಯಿಂದ ೯೫ ಕಿ.ಮೀ. ದೂರದಲ್ಲಿರುವ ವಿಶ್ವವಿಖ್ಯಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ನೀಲಗಿರಿ ಜೈವಿಕ ವಲಯದ ವ್ಯಾಪ್ತಿಗೆ ಒಳಪಡುತ್ತದೆ. ನಾಗರಹೊಳೆಗೆ ಇದೀಗ ವಿಶ್ವಮಾನ್ಯತೆ. ಪ್ರತಿಷ್ಠಿತ ಹುಲಿ ಸಂರಕ್ಷಣಾ ಯೋಜನೆಯ ವ್ಯಾಪ್ತಿಗೂ ನಗರಹೊಳೆ ರಾಜೀವ್‌ಗಾಂಧಿ ಉದ್ಯಾನವನ ಒಳಪಟ್ಟಿದೆ.
೧೯೭೨ ನೇ ಇಸವಿಯಲ್ಲಿ ವನ್ಯಜೀವಿ ಕಾನೂನು ಅಳವಡಿಕೆಯಾದ ನಂತರ ನಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಳ್ಳಬೇಟೆಗೆ ಕಡಿವಾಣ ಬಿತ್ತು. ಪ್ರಾಣಿಗಳ ಸಂಖ್ಯೆಯಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂತು. ವಿಶ್ವದ ಅತೀ ಕಡಿಮೇ ಪ್ರದೇಶದಲ್ಲಿ ಅತ್ಯಧಿಕ ವನ್ಯಪ್ರಾಣಿಗಳ ಸಾಂದ್ರತೆ ಇರುವ ಸ್ಥಳದಲ್ಲಿ ನಾಗರಹೊಳೆಯೂ ಒಂದು.

ಕಾಡಾನೆ, ಕಡವೆ, ಕಾಡುಕೋಣ, ಜಿಂಕೆ, ಕಾಡುಕುರಿ ಮುಂತಾದ ಸಸ್ಯಾಹಾರಿ ಪ್ರಾಣಿಗಳಲ್ಲದೆ, ಹುಲಿ, ಚಿರತೆ, ಕಾಡುನಾಯಿಯಂತಹ ಮಾಂಸಾಹಾರಿ ಪ್ರಾಣಿಗಳೂ ಅಧಿಕವಾಗಿ ಕಂಡುಬರುತ್ತವೆ. ಸಿಂಗಳೀಕ, ಕಾಮನ್‌ಲಂಗೂರ್, ಕಾಡುಹಂದಿ, ಕರಡಿ, ನವಿಲು, ಕಾಡುಕೋಳಿ, ಹೆಬ್ಬಾವು ಇತ್ಯಾದಿ ಪ್ರಾಣಿಗಳೂ ನಾಗರಹೊಳೆಯಲ್ಲಿ ಅಧಿಕವಾಗಿ ಕಂಡುಬರುತ್ತದೆ. ಪ್ರಾಣಿ, ಪಕ್ಷಿಗಳಲ್ಲದೆ ಹಲವು ಪ್ರಭೇದದ ಮರಗಿಡಗಳು, ಔಷಧಿ ಸಸ್ಯಗಳಿಗೂ ನಾಗರಹೊಳೆ ಪ್ರಸಿದ್ಧಿ. ದೇಶ- ವಿದೇಶದ ಪ್ರವಾಸಿಗರನ್ನು ವರ್ಷವಡೀ ಆಕರ್ಷಿಸುವ ನಾಗರಹೊಳೆ ಸಫಾರಿಗೆ ಹೆಸರುವಾಸಿ.

ಸುಮಾರು ೬೪೩ ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದ ನಾಗರಹೊಳೆಗೆ ಸೊಳ್ಳೆಪುರ ಇತ್ಯಾದಿ ಅರಣ್ಯ ಸರಹದ್ದನ್ನು ಇತ್ತೀಚೆಗೆ ಸೇರ್ಪಡೆಗೊಳಿಸಿದ ಹಿನ್ನಲೆಯಲ್ಲಿ ೬೯೦ ಚ.ಕಿ.ಮೀ ವ್ಯಾಪ್ತಿಗೆ ವಿಸ್ತರಿಸಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ್ನು ೭ ಅರಣ್ಯವಲಯಗಳನ್ನಾಗಿ ವಿಂಗಡಿಸಲಾಗಿದೆ. ನಾಗರಹೊಳೆ, ಕಲ್ಲಹಳ್ಳ, ವೀರನಹೊಸಳ್ಳಿ, ಮೀಟಿಕುಪ್ಪೆ, ಅಂತರಸಂತೆ, ದೊಡ್ಡ ಬೈರನಕುಪ್ಪೆ ಹಾಗೂ ಆನೆ ಚೌಕೂರು ವನ್ಯಜೀವಿ ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ಅರಣ್ಯೇತರ ಚಟುವಟಿಕೆ ನಿಷೇಧ. ಸಂಶೋಧನೆ, ಪ್ರಕೃತಿ ಶಿಬಿರ, ಪರಿಸರ ಶಿಕ್ಷಣ ಇವುಗಳಿಗೆ ಮಾತ್ರ ಅವಕಾಶ. ನಾಗರಹೊಳೆಯಲ್ಲಿ ಕಾವೇರಿ, ಗಂಗೋತ್ರಿ, ಡಾರ್ಮೇಟರಿ ವಸತಿ ವ್ಯವಸ್ಥೆ ಇದ್ದು, ಮೈಸೂರು ಅರಣ್ಯ ಭವನದಲ್ಲಿ ೦೮೨೧-೨೪೧೦೯೦೧ ಕರೆ ಮಾಡಿ ಮಾಹಿತಿ ಹೊಂದಬಹುದಾಗಿದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್