Sunday, January 19, 2020 7:20 AM

ಅರಣ್ಯ ಹುತಾತ್ಮರ ದಿನಾಚರಣೆ : ಅರಣ್ಯ ರಕ್ಷಣೆಗಾಗಿ ಅಧಿಕಾರಿಗಳೊಂದಿಗೆ ಕೈಜೋಡಿಸಿ : ಸೆಷನ್ ನ್ಯಾಯಾಧೀಶ ವಿ.ವಿ.ಮಲ್ಲಾಪುರ ಕರೆ
96
ಅರಣ್ಯ ಹುತಾತ್ಮರ ದಿನಾಚರಣೆ : ಅರಣ್ಯ ರಕ್ಷಣೆಗಾಗಿ ಅಧಿಕಾರಿಗಳೊಂದಿಗೆ ಕೈಜೋಡಿಸಿ : ಸೆಷನ್ ನ್ಯಾಯಾಧೀಶ ವಿ.ವಿ.ಮಲ್ಲಾಪುರ ಕರೆ

ಮಡಿಕೇರಿ ಸೆ.11 : ರಾಷ್ಟ್ರದಲ್ಲಿರುವ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು, ಅರಣ್ಯ ಪ್ರದೇಶ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ವಿ.ವಿ.ಮಲ್ಲಾಪುರ ಅವರು ಕರೆ ನೀಡಿದ್ದಾರೆ.
ನಾಡಿನ ಅರಣ್ಯ ಮತ್ತು ವನ್ಯ ಜೀವಿ ಸಂಪತ್ತು ಸಂರಕ್ಷಿಸುವ ಸಂದರ್ಭ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಪ್ರಯುಕ್ತ ಗೌರವ ನಮನ ಸಲ್ಲಿಸಲಾಯಿತು.
ನಗರದ ಅರಣ್ಯ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ನ್ಯಾಯಾಧೀಶರು ರಾಷ್ಟ್ರದ ಗಡಿಯನ್ನು ಸೈನಿಕರು ಕಾಯುತ್ತಾರೆ. ಹಾಗೆಯೇ ರಾಷ್ಟ್ರದ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಕಾರ್ಯವನ್ನು ಅರಣ್ಯ ಅಧಿಕಾರಿಗಳು ಮಾಡುತ್ತಾರೆ. ಯೋಧರು ಹಾಗೂ ಅರಣ್ಯ ಅಧಿಕಾರಿಗಳ ಸೇವೆ ಮಹತ್ವವನ್ನು ಪಡೆದುಕೊಂಡಿದೆ ಎಂದರು. ದೇಶಕ್ಕಾಗಿ ಹುತಾತ್ಮರಾದವರನ್ನು ಸ್ಮರಿಸುವುದು ಅತ್ಯಗತ್ಯವಾಗಿದೆ. ಅರಣ್ಯ ಮತ್ತು ಅರಣ್ಯ ಜೀವಿಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ಎಲ್ಲರೂ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕಿದೆ ಎಂದು ಸೆಷನ್ ನ್ಯಾಯಾಧೀಶರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಆರೋಗ್ಯಕರ ಪರಿಸರಕ್ಕಾಗಿ ಅರಣ್ಯ ಸಂರಕ್ಷಣೆಯ ಅಗತ್ಯವಿದೆ, ಆದರೆ ಮಾನವರ ಬದುಕಿನೊಂದಿಗೆ ಅರಣ್ಯ ಉಳಿಯಬೇಕು ಎಂದು ಅಭಿಪ್ರಾಯಪಟ್ಟರು. ಪ್ರಾಮಾಣಿಕ ಅಧಿಕಾರಿಗಳು ಅರಣ್ಯ ಸಂರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಾರೆ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ನಿಷ್ಠಾವಂತ ಅಧಿಕಾರಿಗಳ ಕರ್ತವ್ಯದ ಕಾಳಜಿಯನ್ನು ಜನರು ಮೆಚ್ಚುವುದರೊಂದಿಗೆ ನಾಡಿನ ಉಳಿವಿಗಾಗಿ ಅರಣ್ಯ ಸಂರಕ್ಷಣೆಗೂ ಆಸಕ್ತಿ ತೋರಬೇಕೆಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತುರಾಜ ಅವರು ಮಾತನಾಡಿ ರಾಷ್ಟ್ರೀಯ ಸಂಪತ್ತಾದ ಅರಣ್ಯವನ್ನು ಅಧಿಕಾರಿಗಳು ಸಂರಕ್ಷಿಸುತ್ತಾ ಬರುತ್ತಿರುವುದರಿಂದ ಪರಿಸರದ ಸಮಾತೋಲನ ಕಾಯ್ದುಕೊಳ್ಳಲು ಸಾಧ್ಯವಾಗಿದೆ ಎಂದರು. ಈ ಮಹತ್ತರ ಕಾರ್ಯಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದು ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿಂಧೆ ನೀಲೇಶ್ ಡಿಯೋಬ, ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಿ.ಕಾರ್ಯಪ್ಪ, ಸಾಮಾಜಿಕ ಅರಣ್ಯ ವಿಭಾಗದ ಎಂ.ಜೆ.ಗೋವರ್ಧನ್ ಸಿಂಗ್, ವಲಯ ಅರಣ್ಯಾಧಿಕಾರಿ ಸೀಮಾ, ಸರೋಜ, ಕೆ.ಪಿ.ಗೋಪಾಲ, ದೇವಯ್ಯ, ಗಣೇಶ್ ಕುಮಾರ್, ತಳವಾರ ಚಂದ್ರಯ್ಯ, ಬಸವರಾಜು ಮತ್ತಿತರರು ಹುತಾತ್ಮರಿಗೆ ಹೂ ಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
ಕಳೆದ 53 ವರ್ಷಗಳಲ್ಲಿ ಅರಣ್ಯ ಸಂರಕ್ಷಣಾ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಹುತಾತ್ಮರಾದವರ ಹೆಸರನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಅವರು ಓದಿದರು.
ವಲಯ ಅರಣ್ಯಾಧಿಕಾರಿ ಶ್ರಮಾ ಅವರು ನಿರೂಪಿಸಿದರು, ಡಿಆರ್‍ಎಫ್‍ಒ ಮನು ಅವರು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಪೊಲೀಸ್ ವಾದ್ಯ ವೃಂದದವರಿಂದ ಗೌರವ ಸಲ್ಲಿಸಲಾಯಿತು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್