Monday, June 1, 2020 11:15 AM

ಜಾರುತ್ತಿವೆ ಬಂಡೆಕಲ್ಲುಗಳು : ಪೆರಾಜೆಯ ಕೋಳಿಕಲ್ಲು ಮಲೆ ಗ್ರಾಮದಲ್ಲಿ ಆತಂಕ
182
ಜಾರುತ್ತಿವೆ ಬಂಡೆಕಲ್ಲುಗಳು : ಪೆರಾಜೆಯ ಕೋಳಿಕಲ್ಲು ಮಲೆ ಗ್ರಾಮದಲ್ಲಿ ಆತಂಕ

ಮಡಿಕೇರಿ ಸೆ.15 :
ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ ಪೆರಾಜೆ ಗ್ರಾಮದ ಕೋಳಿಕಲ್ಲು ಮಲೆ ಬೆಟ್ಟದಿಂದ ಬೃಹತ್ ಗಾತ್ರದ ಬಂಡೆ ಕಲ್ಲುಗಳು ಜಾರಿ ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೆರಾಜೆಯ ಕೋಳಿಕಲ್ಲು ಮಲೆ ಎಂಬ ಬೆಟ್ಟದ ತಪ್ಪಲಿನಲ್ಲಿ ಹಲವಾರು ಕುಟುಂಬಗಳು ನೆಲೆನಿಂತಿದ್ದು ಉರುಳುತ್ತಿರುವ ಬಂಡೆಗಳಿಂದ ನೂರಾರು ಗ್ರಾಮಸ್ಥರು ಜೀವ ಭಯ ಎದುರಿಸುತ್ತಿದ್ದಾರೆ. ಭಾಗಮಂಡಲ ಅರಣ್ಯಕ್ಕೆ ಒಳಪಡುವ ಈ ಪ್ರದೇಶ ಹಚ್ಚ ಹಸುರಿನ ಶೋಲಾ ಕಾಡುಗಳಿಂದ ಆವೃತ್ತವಾಗಿದ್ದು, ಬೆಟ್ಟದ ಮೇಲಿಂದ ಉರುಳಿದ ಬೃಹತ್ ಗಾತ್ರದ ಬಂಡೆಗಳು ಅರಣ್ಯದೊಳಗಿನ ಮರಗಳಿಗೆ ಬಡಿದು ನಿಂತಿದೆ.
ಶತಕಗಳಿಂದ ನೆಲೆ ನಿಂತಿರುವ ಈ ಗ್ರಾಮದ ಜನರು ಇದೇ ಮೊದಲ ಬಾರಿಗೆ ಇಂತಹ ಘಟನೆಗಳನ್ನು ನೋಡುತ್ತಿದ್ದು, ಇದೀಗ ಗ್ರಾಮಸ್ಥರ ನೆಮ್ಮದಿ ಮಾಯವಾಗಿದೆ. ಕಳೆದ ವರ್ಷ ಸುಬ್ರಹ್ಮಣ್ಯ ಅರಣ್ಯ ಪ್ರದೇಶದ ಸುತ್ತಮುತ್ತ ಭೂಕಂಪನ ಸಂಭವಿಸುವುದರೊಂದಿಗೆ ಜೋಡುಪಾಲದಲ್ಲಿ ಭಾರೀ ಪ್ರಮಾಣದ ಭೂಕುಸಿತ ಘಟಿಸಿ ಜೀವಗಳನ್ನು ಬಲಿ ಪಡೆದಿತ್ತು. ಇದೇ ಸಂದರ್ಭ ಈ ಕೋಳಿಕಲ್ಲು ಬೆಟ್ಟದ ಬಂಗಾರಕೋಡಿ ಎಂಬ ಪ್ರದೇಶದಲ್ಲಿಯೂ ಭಾರೀ ಜಲಸ್ಫೋಟದೊಂದಿಗೆ ಭೂ ಕುಸಿತದ ದುರಂತ ಘಟಿಸಿತ್ತು. ಈ ವರ್ಷ ದಕ್ಷಿಣ ಕೊಡಗಿನ ತೋರಾ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಹಾನಿಯಾಗಿದೆ. ಈ ನಡುವೆ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಬಿರುಕು ಕಾಣಿಸಿಕೊಂಡು ಅಪಾಯದ ಮುನ್ಸೂಚನೆ ನೀಡಿದ್ದು, ಕೋಳಿಕಲ್ಲು ಬೆಟ್ಟದಲ್ಲೂ ಬೃಹತ್ ಗಾತ್ರದ ಬಂಡೆಕಲ್ಲುಗಳು ಉರುಳಿವೆ.
ಕೋಳಿಕಲ್ಲು ಬೆಟ್ಟದ ಇನ್ನೊಂದು ಭಾಗದಲ್ಲಿ ಅರೆಕಲ್ಲ್ಲು ಪ್ರದೇಶವಿದ್ದು, ಅಲ್ಲಿನ ಕೊಪ್ಪರಿಗೆ ಗುಡ್ಡೆ ಎಂಬ ಪ್ರದೇಶದಲ್ಲಿ ಮೊದಲಿಗೆ ಬಂಡೆಗಳು ಉರುಳಿದ್ದು, ನಂತರ ಕುಂಡಾಡು ಚಾಮಕಜೆಯಲ್ಲಿಯೂ ಬಂಡೆಗಳು ಉರುಳಿ ಬಂದಿವೆ ಎಂದು ಅಲ್ಲಿನ ಗ್ರಾಮಸ್ಥರು ಹೇಳಿದ್ದಾರೆ. ಈ ಪ್ರದೇಶದ ತಪ್ಪಲಲ್ಲಿ ನೈಸರ್ಗಿಕ ತೊರೆಯೊಂದು ತುಂಬಿ ಹರಿಯುತ್ತಿದ್ದು, ನೀರಿನ ಹರಿವಿನ ಶಬ್ದಕ್ಕೆ ಕೆಳಭಾಗದಲ್ಲಿರುವ ಮನೆಗಳ ನಿವಾಸಿಗಳಿಗೆ ಬಂಡೆ ಉರುಳಿದ ವಿಚಾರವೇ ಗೊತ್ತಾಗಲಿಲ್ಲ. ಆದರೆ ಬೆಟ್ಟದ ಎದುರು ಭಾಗದಲ್ಲಿರುವ ನಿವಾಸಿಗಳಿಗೆ ಗುಡುಗು ರೀತಿಯ ಭಾರೀ ಶಬ್ದ ಕೇಳಿದ ಹಿನ್ನಲೆಯಲ್ಲಿ ಮರುದಿನ ಗ್ರಾಮದ ಯುವಕರು ಅಲ್ಲಿಗೆ ಹೋಗಿ ನೋಡಿದಾಗ ಬಂಡೆಗಳು ಗ್ರಾಮಗಳ ಕಡೆಗೆ ಉರುಳಿ ಬಂದಿರುವುದು ಗೋಚರಿಸಿದೆ. ಭಾಗಮಂಡಲ ವಲಯ ಅರಣ್ಯ ಪ್ರದೇಶಕ್ಕೆ ಸೇರಿರುವ ಬೆಟ್ಟದ ಕಾಡಿನಲ್ಲಿರುವ ಬಂಡೆಗಳು ಉರುಳಿ ಬಂದಿದ್ದು, ಅರಣ್ಯದಲ್ಲಿರುವ ಮರಗಳಿಗೆ ಬಡಿದು ನಿಂತಿದೆ. ಈ ಬಂಡೆಗಳು ಚಪ್ಪಟೆಯಾಗಿದ್ದ ಹಿನ್ನಲೆಯಲ್ಲಿ ಸಂಭಾವ್ಯ ಭಾರಿ ಅನಾಹುತವೂ ತಪ್ಪಿದಂತಾಗಿದೆ. ಒಂದು ವೇಳೆ ಈ ಬಂಡೆ ಕಲ್ಲುಗಳು ಮರದಿಂದ ಬೇರ್ಪಟ್ಟು ಮತ್ತೆ ಜಾರಿದರೆ ಕೆಳಗಿರುವ ಮನೆಗಳಿಗೆ ಅಪಾಯ ತಪ್ಪಿದಲ್ಲ. ಬೆಟ್ಟದ ಮೇಲಿಂದ ಬಂಡೆಗಳು ಜಾರಿ ಬಂದಿರುವ ಸ್ಥಳದ ಉದ್ದಕ್ಕೂ ತನ್ನೆದುರಿಗೆ ಸಿಕ್ಕಿದ ಚಿಕ್ಕಪುಟ್ಟ ಮರ ಗಿಡಗಳನ್ನು ಬಂಡೆ ದ್ವಂಸ ಮಾಡಿದ್ದು, ಆ ಸಂದರ್ಭದ ಘೋರತೆಯನ್ನು ಸಾಕ್ಷೀಕರಿಸುತ್ತಿವೆ.
ಸದ್ಯದ ಮಟ್ಟಿಗೆ ಬಂಡೆಗಳೇನೋ ಮರದ ಬುಡದಲ್ಲಿ ಜಾರಿ ನಿಂತಿವೆ. ಆದರೆ ಭವಿಷ್ಯದ ದಿನಗಳಲ್ಲಿ ಏನಾಗಬಹುದೆಂದು ಯಾರೂ ಊಹಿಸಲು ಸಾಧ್ಯವಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಭೂಕುಸಿತದಿಂದ ಸಾಕಷ್ಟು ಸಾವು – ನೋವು ಸಂಭವಿಸಿದ್ದು, ಇದೀಗ ಕೋಳಿಕಲ್ಲು ಮಲೆಯಲ್ಲೂ ಭಾರೀ ಅಪಾಯವಿದೆ ಎಂಬ ಸುಳಿವು ಲಭಿಸಿದೆ. ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಬಂಡೆ ಜಾರುವಿಕೆಗೆ ಕಾರಣ ಕಂಡು ಹಿಡಿಯಬೇಕಿದೆ. ಬ್ರಹ್ಮಗಿರಿ ಬೆಟ್ಟಕ್ಕೂ, ಕೋಳಿಕಲ್ಲು ಬೆಟ್ಟಕ್ಕೂ ಇದುವರೆಗೆ ಹಾನಿಯಾಗಿರಲಿಲ್ಲ. ಆದರೆ ಈ ಬಾರಿ ಈ ಎರಡೂ ಬೆಟ್ಟಗಳಲ್ಲೂ ಹಾನಿ ಸಂಭವಿಸಿದೆ.
ಇಲ್ಲಿನವರು ಅದೆಷ್ಟೋ ವರ್ಷಗಳಿಂದ ನೆಲಿಸಿದ್ದರೂ, ಈವರೆಗೆ ಇಂತಹ ದೃಶ್ಯವನ್ನು ಕಂಡಿಲ್ಲ. ಸದ್ದು ಕೇಳಿ ನಾವುಗಳು ಬಂದು ನೋಡುವಾಗ ಈ ರೀತಿಯಲ್ಲಿ ಬಂಡೆಗಳು ಉರುಳಿರುವುದು ಕಂಡು ಬಂದಿದೆ. ಬಂಡೆಗಳು ಜಾರಿದ ಜಾಗದಲ್ಲಿ ನೀರು ಕೂಡ ಹರಿಯುತ್ತಿತ್ತು. ಆದರೆ ಇದೀಗ ಇಲ್ಲವಾಗಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಆಗಿರಲಿಲ್ಲ, ಇನ್ನೂ ಮೇಲ್ಭಾಗದಲ್ಲಿ ಏನೂ ಆಗಿದೆಯೋ ಗೊತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್