Monday, October 21, 2019 9:05 PM

ಸೆ.24 ರಂದು ತೆರೆಗೆ ಬರಲಿದೆ ಕೊಡಗ್‍ರ ಸಿಪಾಯಿ' ಕೊಡವ ಚಲನಚಿತ್ರ
145
ಸೆ.24 ರಂದು ತೆರೆಗೆ ಬರಲಿದೆ ಕೊಡಗ್‍ರ ಸಿಪಾಯಿ' ಕೊಡವ ಚಲನಚಿತ್ರ

ಮಡಿಕೇರಿ ಸೆ.20 : ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್‍ನಡಿಯಲ್ಲಿ ಕೊಟ್ಟುಕತ್ತಿರ ಪ್ರಕಾಶ್ ನಿರ್ಮಾಣ ಮತ್ತು ನಿರ್ದೇಶನದ ದೇಶಪ್ರೇಮ, ಸೌಹಾರ್ದತೆ ಹಾಗೂ ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುವ ಕೊಡವ ಕಾದಂಬರಿ ಆಧಾರಿತಕೊಡಗ್‍ರ ಸಿಪಾಯಿ’ ಕೊಡವ ಚಲನಚಿತ್ರ ಸೆ.24 ರಂದು ತೆರೆ ಕಾಣಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ನಿರ್ಮಾಣದ ನಿರ್ವಹಣೆಯ ನೇತೃತ್ವ ವಹಿಸಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ `ಕೊಡಗ್‍ರ ಸಿಪಾಯಿ’ ಕುರಿತು ಮಾಹಿತಿ ನೀಡಿದರು.
ವಿರಾಜಪೇಟೆ ಕೊಡವ ಸಮಾಜದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಚಿತ್ರ ಬಿಡುಗಡೆ ಸಮಾರಂಭ ನಡೆಯಲಿದ್ದು, ಸಮಾಜದ ಅಧ್ಯಕ್ಷ ವಾಂಚೀರ ವಿಠಲ್ ನಾಣಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುನೀಲ್ ಸುಬ್ರಮಣಿ, ಶಾಂತೆಯಂಡ ವೀಣಾಅಚ್ಚಯ್ಯ, ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ, ಕೊಡಗ್‍ರ ಸಿಪಾಯಿ ಚಿತ್ರದ ನಟ, ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಬಾಳುಗೋಡು ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಫೀ.ಮಾ.ಕಾರ್ಯಪ್ಪ, ಜ.ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, “ಕೊಡಗ್‍ರ ಸಿಪಾಯಿ” ಕಾದಂಬರಿ ಬರಹಗಾರ್ತಿ ಉಳುವಂಗಡ ಕಾವೇರಿ ಉದಯ, ಪೂಮಾಲೆ ಕೊಡವ ವಾರ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷÀ ಬೊಳ್ಳಜಿರ ಬಿ. ಅಯ್ಯಪ್ಪ ಉಪಸ್ಥಿತರಿರುವರು.
ಅಂದು ಬೆಳಗ್ಗೆ 11 ಗಂಟೆಗೆ “ಕೊಡಗ್‍ರ ಸಿಪಾಯಿ” ಮೊದಲ ಪ್ರದರ್ಶನ ಆರಂಭಗೊಳ್ಳಲಿದ್ದು, ಮಧ್ಯಾಹ್ನ 2 ಗಂಟೆ ಮತ್ತು ಸಂಜೆ 6.30ಕ್ಕೆ ಪ್ರದರ್ಶನವಿರುತ್ತದೆ.
ಕೊಡವ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಹಲವು ಚಲನಚಿತ್ರಗಳು ಈಗಾಗಲೇ ತೆರೆ ಕಂಡಿದ್ದು, “ಕೊಡಗ್‍ರ ಸಿಪಾಯಿ” ಕೊಡವ ಚಿತ್ರವನ್ನು ಕೂಡ ಇದೇ ಉದ್ದೇಶದಿಂದ ತೆರೆಗೆ ತರಲಾಗುತ್ತಿದೆ.
ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶಿಸಿ, ಎಂ.ಡಿ.ಕೌಶಿಕ್ ಸಹ ನಿರ್ದೇಶನ ಮಾಡಿರುವ ಕೊಡವ ಚಲನಚಿತ್ರದಲ್ಲಿ ಖ್ಯಾತ ಅಥ್ಲಿಟ್ ತೀತಮಾಡ ಅರ್ಜುನ್ ದೇವಯ್ಯ ಅವರು ನಾಯಕರಾಗಿ ಹಾಗೂ ತೇಜಸ್ವಿನಿ ಶರ್ಮ ನಾಯಕಿಯಾಗಿ ನಟಿಸಿದ್ದಾರೆ. “ಕೊಡಗ್‍ರ ಸಿಪಾಯಿ” ಬರಹಗಾರ್ತಿ ಉಳುವಂಗಡ ಕಾವೇರಿ ಉದಯ ಅವರು ರಚಿಸಿ, ಕೊಡವ ಮಕ್ಕಡ ಕೂಟ ಸಂಘಟನೆ ಪ್ರಕಟಿಸಿರುವ ಕೊಡವ ಕಾದಂಬರಿ ಆಧಾರಿತ ಚಿತ್ರವಾಗಿದೆ. ಕೊಡಗಿನ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿ ಅಭಿನಯಿಸಿರುವುದು ವಿಶೇಷ.
ನಿರ್ಮಾಣ ಮತ್ತು ನಿರ್ವಹಣೆ ಜವಬ್ದಾರಿಯನ್ನು ಬೊಳ್ಳಜಿರ ಬಿ.ಅಯ್ಯಪ್ಪ ನಿಭಾಯಿಸಿದ್ದು, ಯಶವಂತ್ ಛಾಯಾಗ್ರಹಣ, ಸಂಗೀತ ಆರ್‍ಜೆಬಿ, ಸಂಕಲನ ಸಂಜೀವರೆಡ್ಡಿ, ಚಿತ್ರಕಥೆ-ಸಂಭಾಷಣೆ ಹಂಸರಾಜ್ ಹಾಗೂ ಮಂಜು ಪಾಂಡವಪುರ ಸಹನಿರ್ದೇಶನ ಮಾಡಿದ್ದಾರೆ ಎಂದು ಅಯ್ಯಪ್ಪ ತಿಳಿಸಿದರು.
::: ಕುತೂಹಲ ಮೂಡಿಸುವ ಚಿತ್ರ :::
ದೇಶ ಕಾಯುವ ಸೈನಿಕನೊಬ್ಬ ನಿವೃತ್ತಿಯ ನಂತರ ತವರು ಜಿಲ್ಲೆ ಕೊಡಗಿಗೆ ಆಗಮಿಸಿ ಹೋಂಸ್ಟೇ ನಡೆಸುವ ಮೂಲಕ ತಮ್ಮ ಜೀವನವನ್ನು ಯಾವ ರೀತಿ ಸಾಗಿಸುತ್ತಾರೆ ಮತ್ತು ಆ ಹೊಂಸ್ಟೇಯಲ್ಲಿ ನಡೆಯುವ ಅನಾಹುತ, ಸವಾಲುಗಳ ಸುತ್ತ ಕಥಾ ಹಂದರ ಸಾಗಲಿದೆ. ಅರ್ಜುನ್ ದೇವಯ್ಯ ಎಂಬ ಪ್ರಮುಖ ಪಾತ್ರದ ಸುತ್ತ ಕಥೆಯನ್ನು ಹೆಣೆಯಲಾಗಿದೆ.
ಸೇನೆಯಿಂದ ನಿವೃತ್ತಿ ಹೊಂದುವ ಅರ್ಜುನ್ ದೇವಯ್ಯ ಮುಕ್ಕೋಡ್ಲು ಗ್ರಾಮಕ್ಕೆ ಬಂದು ನೆಲೆಸುತ್ತಾರೆ. ಪ್ರವಾಸೋದ್ಯಮದ ಬಗ್ಗೆ ಆಕರ್ಷಿತರಾಗಿ ಹೋಂಸ್ಟೇಯೊಂದನ್ನು ಆರಂಭಿಸುತ್ತಾರೆ. ಇದರ ಜೊತೆಯಲ್ಲೇ ಸಾಮಾಜಿಕ ಕಳಕಳಿಯನ್ನು ತೋರುವ ನಾಯಕ ತಾನು ಓದಿದ ಸರಕಾರಿ ಶಾಲೆ ಶಿಥಿಲಾವಸ್ಥೆಗೊಂಡು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿವುದನ್ನು ಕಂಡು ಮರುಗುತ್ತಾರೆ. ಶಾಲೆಗೆ ಕಾಯಕಲ್ಪ ನೀಡುವ ಉದ್ದೇಶದೊಂದಿಗೆ ಕಾರ್ಯೋನ್ಮುಖರಾಗುತ್ತಾರೆ.
ಪ್ರಮುಖವಾಗಿ ತಮ್ಮ ಊರಿನ ಯುವ ಸಮೂಹ ಸೇನೆಗೆ ಸೇರಬೇಕೆನ್ನುವ ಹೆಬ್ಬಯಕೆಯಿಂದ ಸೇನಾ ಸೇರ್ಪಡೆಗೆ ಅಗತ್ಯವಿರುವ ಎಲ್ಲಾ ತರಬೇತಿಗಳನ್ನು ಯುವಕರಿಗೆ ನೀಡಲು ಆರಂಭಿಸುತ್ತಾರೆ. ಮೀನು ಮಾರುವ ಮುಸ್ಲಿಂ ವ್ಯಕ್ತಿಯ ಮಗನಿಗೂ ತರಬೇತಿ ನೀಡಿ ಸೌಹಾರ್ದತೆಯನ್ನು ಮೆರೆಯುತ್ತಾರೆ.
ಈ ನಡುವೆ ಹೋಂಸ್ಟೇಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಬಂದು ತಂಗುತ್ತಾರೆ. ಇದರ ಹಿಂದಿನ ರಹಸ್ಯಗಳು ನಿಧಾನವಾಗಿ ನಾಯಕ ಅರ್ಜುನ್‍ಗೆ ತಿಳಿಯುತ್ತಾ ಬರುತ್ತದೆ. ಹಲವು ದಿನಗಳ ನಂತರ ನಿಗೂಢವಾಗಿ ಭಯೋತ್ಪಾದಕರೂ ನಾಯಕನ ಹೋಂಸ್ಟೇಯಲ್ಲಿ ಆಶ್ರಯ ಪಡೆದು ದೇಶದ್ರೋಹಿ ಕುತಂತ್ರದಲ್ಲಿ ತೊಡಗುತ್ತಾರೆ.
ದೇಶಕ್ಕೇ ಕಂಟಕವಾಗಬಲ್ಲ ಈ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವಲ್ಲಿ ನಾಯಕ ಅರ್ಜುನ್ ದೇವಯ್ಯ ಯಶಸ್ವಿಯಾಗುತ್ತಾರೆಯೇ ?, ತಾವು ಕಂಡ ಕನಸಿನಂತೆ ಸರಕಾರಿ ಶಾಲೆಗೆ ಕಾಯಕಲ್ಪ ದೊರೆಯುತ್ತದೆಯೇ ?, ಊರಿನ ಯುವಕರು ಸೇನೆಗೆ ಸೇರ್ಪಡೆಯಾಗುತ್ತಾರೆಯೇ ? ಎನ್ನುವ ಹಲವು ಕುತೂಹಲಗಳಿಗೆ ‘ಕೊಡಗ್‍ರ ಸಿಪಾಯಿ’ ಚಲನಚಿತ್ರದ ಕ್ಲೈಮ್ಯಾಕ್ಸ್ ಉತ್ತರ ನೀಡಲಿದೆ.
ಕೊಡಗಿನ ವೀರ ಯೋಧನೊಬ್ಬ ಸೇನೆಯಿಂದ ನಿವೃತ್ತಿ ಹೊಂದಿದ ನಂತರ ಸಾಮಾಜಿಕ ಕಳಕಳಿಯೊಂದಿಗೆ ದೇಶಭಿಮಾನವನ್ನು ಮೆರೆಯುತ್ತಾ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಥಾಹಂದರವನ್ನು ಹೊಂದಿರುವ ‘ಕೊಡಗ್‍ರ ಸಿಪಾಯಿ’ಯನ್ನು ಸಮಸ್ತ ಜನತೆ ಪ್ರೋತ್ಸಾಹಿಸಬೇಕೆಂದು ಅಯ್ಯಪ್ಪ ಮನವಿ ಮಾಡಿದರು.
ಸಾಮಾಜಿಕ ಕಳಕಳಿ, ದೇಶಪ್ರೇಮ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ಈ ಚಿತ್ರವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಆಯಾ ಶಾಲಾ, ಕಾಲೇಜುಗಳ ಆಡಳಿತ ಮಂಡಳಿ ಅವಕಾಶ ಕಲ್ಪಿಸಬೇಕೆಂದರು.
ದಕ್ಷಿಣ ಕೊಡಗಿನ ಎಲ್ಲಾ ಊರುಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ಪಟ್ಟಣಗಳು ಹಾಗೂ ಬೆಂಗಳೂರು, ಮೈಸೂರು ಕೊಡವ ಸಮಾಜಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಮಡಿಕೇರಿ ಕೊಡವ ಸಮಾಜದಲ್ಲಿ ಅ.14 ರಿಂದ ಚಿತ್ರ ಪ್ರದರ್ಶನವಾಗಲಿದೆ ಎಂದು ಅಯ್ಯಪ್ಪ ಮಾಹಿತಿ ನೀಡಿದರು.
ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಮಾತನಾಡಿ ಕಲಾತ್ಮಕ ಚಿತ್ರಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ತಾನು ಸೌಹಾರ್ದ ಸಮಾಜದ ಸಂದೇಶ ಸಾರುವ “ಕೊಡಗ್‍ರ ಸಿಪಾಯಿ”ಯನ್ನು ನಿರ್ಮಿಸಿರುವುದಾಗಿ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಎಲ್ಲಾ ಧರ್ಮೀಯರು ಒಗ್ಗಟ್ಟಿನಿಂದ ಜೀವನ ಸಾಗಿಸುತ್ತಿದ್ದ ಹಿಂದಿನ ಕಾಲಘಟ್ಟವನ್ನು ಚಿತ್ರ ನೆನಪಿಸಲಿದೆ. ಸಮಾಜಕ್ಕೆ ಮಾದರಿಯಾಗಿರುವ ಈ ಚಿತ್ರವನ್ನು ಜಿಲ್ಲೆಯ ಪ್ರತಿಯೊಬ್ಬರು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದರು.
ನಟ ಹಾಗೂ ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ವಿಠಲ್ ನಾಣಯ್ಯ ಮಾತನಾಡಿ ಇಲ್ಲಿಯವರೆಗೆ ಸುಮಾರು 13 ಕೊಡವ ಚಲನಚಿತ್ರಗಳು ಬಿಡುಗಡೆಯಾಗಿದ್ದು, “ಕೊಡಗ್‍ರ ಸಿಪಾಯಿ” ಅತ್ಯದ್ಭುತವಾಗಿ ಮೂಡಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲಾ ಧರ್ಮೀಯರ ಹೃದಯವನ್ನು ತಟ್ಟಬಲ್ಲ ಉತ್ತಮ ಬಾಂಧವ್ಯದ ಕಥಾಹಂದರದ ಚಿತ್ರವನ್ನು ಎಲ್ಲರೂ ನೋಡಬೇಕೆಂದರು.
::: ತಾರಾಂಗಣ :::
“ಕೊಡಗ್‍ರ ಸಿಪಾಯಿ”ಯಲ್ಲಿ ವಾಂಚೀರ ವಿಠಲ್ ನಾಣಯ್ಯ, ವಾಂಚಿರ ಜಯಾನಂಜಪ್ಪ, ಕರ್ನಲ್ ಕಂಡ್ರತಂಡ ಸುಬ್ಬಯ್ಯ, ತಾತಂಡ ಪ್ರಭಾ ನಾಣಯ್ಯ, ಉಳುವಂಗಡ ಅಮಿತ್ ಬೋಪಣ್ಣ, ಕುಪ್ಪಳಮಡ ಭೂಮಿಕ, ತೇಲಪಂಡ ಪವನ್, ಬೊಳ್ಳಜಿರ ಬಿ.ಅಯ್ಯಪ್ಪ, ಕೊಟ್ರಮಾಡ ಹರೀಶ್, ಪಟ್ಟಡ ಧನು ರಂಜನ್, ಬೊಳ್ಳಜಿರ ಯಮುನಾ ಅಯ್ಯಪ್ಪ, ಕೋಳುಮಾಡಂಡ ಸಾಬು ಉತ್ತಪ್ಪ, ಈರಮಂಡ ವಿಜಯ ಉತ್ತಯ್ಯ, ತೆನ್ನೀರ ಕೈಲಾಶ್ ಕುಟ್ಟಪ್ಪ, ಬಲ್ಲಾರಂಡ ರಾಜೇಶ್, ಮಂಡುವಂಡ ಪುಟ್ಟ, ಕುಂದೀರ ಪ್ರತಾಪ್, ಮಂದೆಯಂಡ ರಾಜೀಬೆಳ್ಯಪ್ಪ, ಅಚ್ಚಪಂಡ ಪ್ರಸನ್ನ ಪ್ರಸು, ಅಚ್ಚಪಂಡ ಪ್ರತಾಪ್ ಪ್ರೀತಂ, ಬಿದ್ದಂಡ ಉತ್ತಮ ಪೊನ್ನಪ್ಪ, ಕುಪ್ಪಳಮಾಡ ಜಾನ್ಸಿ, ಹಂಚೆಟ್ಟೀರ ಮನುಮುದ್ದಪ್ಪ, ಹಂಚೆಟ್ಟೀರ ಸ್ನೇಹ ಮುದ್ದಪ್ಪ, ಹಂಚೆಟ್ಟೀರ ಶಿಂಶಾ ಮುದ್ದಪ್ಪ, ಹಂಚೆಟ್ಟೀರ ಸ್ಪರ್ಷಮುದ್ದಪ್ಪ, ನಕ್ಷ್ ತಮ್ಮಯ್ಯ, ಹಂಚೆಟ್ಟೀರ ನಯನಾ ಚಂಗಪ್ಪ, ಹಂಚೆಟ್ಟೀರ ಸೌಮ್ಯ ಚೆಂಗಪ್ಪ, ಹಂಚೆಟ್ಟೀರ ಸ್ಪಂದನ ಬೊಳ್ಳಮ್ಮ, ಹೊಟ್ಟೆಯಂಡ ಉತ್ತಯ್ಯ, ಹೊಟ್ಟೆಯಂಡ ತಿಮ್ಮಯ್ಯ, ಮೊಣ್ಣಂಡ ಮಿಥುನ್ ಪೂಣಚ್ಚ, ಅಪ್ಪು, ಶ್ರೀಕಾಂತ್, ಸೈದುಲ್ಲಾ, ಚೆನ್ನಪಂಡ ನಂದ, ಕೋಳುಮಾಡಂಡ ಮನುಮಾಚಯ್ಯ, ಸರ್ಕಂಡ ಅಭಿ, ಸರ್ಕಂಡ ಲೋಕೇಶ್, ಸರ್ಕಂಡ ನಾಣಯ್ಯ, ಮೊರ್ಕಂಡ ಕುಟ್ಟಪ್ಪ, ಅಡ್ಡಂಡ ಸಿ.ಬೋಪಯ್ಯ, ಸಂತೋಷ್ ರೈ, ಹರೀಶ್ ಮೊಗೇರ, ಗಯಾಜ್ ಕುಶಾಲ್, ನಾಪಂಡ ರಘು ತಿಮ್ಮಯ್ಯ, ಮೊಣ್ಣಂಡ ಮಿಟ್ಟುಪೂಣಚ್ಚ ಅಭಿನಯಿಸಿದ್ದಾರೆ.
“ಕೊಡಗ್‍ರ ಸಿಪಾಯಿ” ಕಾದಂಬರಿಯ ಬರಹಗಾರ್ತಿ ಉಳುವಂಗಡ ಕಾವೇರಿ ಉದಯ ಚಿತ್ರ ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ವಿತರಕ ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ನಟ ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್