Monday, October 21, 2019 8:23 PM

ಕರ್ನಾಟಕದ ಏಳು ಮುಕ್ತಿ ಸ್ಥಳಗಳಲ್ಲೊಂದಾದ ಮಧುಕೇಶ್ವರ ದೇವಾಲಯ
97
ಕರ್ನಾಟಕದ ಏಳು ಮುಕ್ತಿ ಸ್ಥಳಗಳಲ್ಲೊಂದಾದ ಮಧುಕೇಶ್ವರ ದೇವಾಲಯ

ಮಧುಕೇಶ್ವರ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿದೆ. ಸುಮಾರು ೧೫೦೦ ವರ್ಷದ ಹಿಂದೆ ಕದಂಬರು,ಚಾಲುಕ್ಯರು,ಹೊಯ್ಸಳರ ಕಾಲದಲ್ಲಿ ದೇವಾಲಯವನ್ನು ಕಟ್ಟಲಾಗಿದೆ.ಪ್ರಸಿದ್ಧ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಈ ದೇವಾಲಯವನ್ನು ನಿರ್ಮಿಸಿದನೆಂದು ನಂಬಲಾಗಿದೆ.ಪವಿತ್ರ ವರದಾ ನದಿಯು ದೇವಾಲಯದ ಎದುರಿಗೆ ಹರಿಯುತ್ತಿದೆ.ಶ್ರೀ ಮಧುಕೇಶ್ವರ ಇಲ್ಲಿನ ಆರಾಧ್ಯದೈವ.ದೇವಾಲಯವು ಕರ್ನಾಟಕದ ಏಳು ಮುಕ್ತಿ ಸ್ಥಳಗಳಲ್ಲೊಂದು ಎಂದು ಪ್ರಸಿದ್ಧವಾಗಿದೆ.

ಪೌರಾಣಿಕ ಐತಿಹ್ಯ

ಮಾರ್ಕಂಡೇಯ ಪುರಾಣದ ಕಥೆಯ ಪ್ರಕಾರ ಕೃತಯುಗದಲ್ಲಿ ಮಹಾವಿಷ್ಣುವಿನ ಕಿವಿಯಿಂದ ಮಧು,ಕೈಟಭರೆಂಬ ಇಬ್ಬರು ದೈತ್ಯರು ಉತ್ಪತ್ತಿಯಾಗುತ್ತಾರೆ.ಅವರು ಈಶ್ವರನನ್ನು ಕುರಿತು ತಪಸ್ಸು ಮಾಡಿ ವರ ಪಡೆದು ಅಜರಾಮರರಾಗುತ್ತಾರೆ. ಕ್ರಮೇಣ ಅವರಲ್ಲಿ ಗರ್ವ ಉಂಟಾಗಿ ಲೋಕ ಕಂಟಕರಾಗುತ್ತಾರೆ.ಭೂಲೋಕಗಳನ್ನೆಲ್ಲ ಜಯಿಸಿ ಬ್ರಹ್ಮನ ಕಾರ್ಯಕ್ಕೆ,ಶಿವನ ಕಾರ್ಯಕ್ಕೆ ತೊಂದರೆ ಉಂಟುಮಾಡುತ್ತಾರೆ. ಆಗ ಬ್ರಹ್ಮ ವಿಷ್ಣುವಿನಲ್ಲಿ ಮೊರೆಯಿಟ್ಟು ಈ ಲೋಕ ಕಂಟಕ ರಾಕ್ಷಸರನ್ನು ಸಂಹರಿಸಲು ಕೇಳಿಕೊಳ್ಳುತ್ತಾನೆ. ವಿಷ್ಣುವು ಸಮ್ಮತಿಸಿ ಮಧು,ಕೈಟಭರೊಂದಿಗೆ ಯುದ್ಧಕ್ಕೆ ಆಹ್ವಾನಿಸುತ್ತಾನೆ.ಅವರೊಡನೆ ಐದು ಸಹಸ್ರ ವರ್ಷಗಳವರೆಗೆ ಯುದ್ಧ ಮಾಡಿದರೂ ಸೋಲಿಸಲಾಗುವುದಿಲ್ಲ.ಕೊನೆಗೆ ವಿಷ್ಣು ಉಪಾಯದಿಂದ ಯೋಚಿಸಿ ವರವೇನಾದರೂ ಬೇಕಿದ್ದರೆ ಕೇಳಿ,ಕೊಡುತ್ತೇನೆ ಎಂದಾಗ ಮತಾಂಧರಾದ ದೈತ್ಯರು ನಾವೇ ನಿನಗೆ ವರ ಕೊಡುತ್ತೇವೆ ಕೇಳಿಕೋ ಎಂದರು.ಇದನ್ನೇ ಆಶಿಸಿದ್ದ ವಿಷ್ಣು ಹಸನ್ಮುಖದಿಂದ ಹಾಗಾದರೆ ನನ್ನಿಂದ ನೀವು ಹತರಾಗುವ ವರ ಕೊಡಿರೆಂದು ಕೇಳುತ್ತಾನೆ.ಈ ಮಾತನ್ನು ಕೇಳಿ ಗರಬಡಿದವರಂತೆ ಆಗಿ ಅಹಂಕಾರ ಅಳಿದು ಮಧು-ಕೈಟಭರು ತಾವಾಗೇ ಇಂಥ ಪ್ರಸಂಗ ತಂದುಕೊಂಡೆವಲ್ಲ ಎಂದು ಚಿಂತಿಸಿ,ಮರುಗಿ ನಮ್ಮನ್ನು ಸಂಹರಿಸಿ ನಮ್ಮ ಪ್ರತೀಕವಾಗಿ ಇಲ್ಲಿ ಈಶ್ವರಾಲಯ ನಿರ್ಮಿಸಬೇಕೆಂದು ಪ್ರಾರ್ಥಿಸುತ್ತಾರೆ.ಮಹಾವಿಷ್ಣು ಹಾಗೇ ಆಗಲೆಂದು ಅವರೀರ್ವರನ್ನು ಸಂಹರಿಸಿ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವನ್ನು ಇಲ್ಲಿಂದ ೧೫ ಕಿ.ಮೀ.ದೂರದಲ್ಲಿ ಕೈಟಭೇಶ್ವರಾಲಯವನ್ನು ನೆಲೆಗೊಳಿಸಿದನೆಂಬ ಪ್ರತೀತಿಯಿದೆ.ಈಗಲೂ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯ,ಸೊರಬ ತಾಲೂಕಿನ ಆನವಟ್ಟಿಯ ಸಮೀಪ ಕೋಟೆಪುರದಲ್ಲಿ ಕೈಟಭೇಶ್ವರ ದೇವಾಲಯವಿದೆ.

ವಾಸ್ತುಶಿಲ್ಪದ ವೈಶ್ಶಿಷ್ಟ್ಯತೆ

ದಕ್ಷಿಣ ಭಾರತದಲ್ಲೇ ಅತೀ ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಕದಂಬರ ನಿರ್ಮಿತ ಶ್ರೀ ಮಧುಕೇಶ್ವರ ದೇವಾಲಯ ತನ್ನದೇ ಆದ ಪ್ರತ್ಯೇಕ ಶೈಲಿ ಹೊಂದಿದೆ.ಇದು ಸುಮಾರು ಹದಿನೈದು ಶತಮಾನಗಳ ವಿವಿಧ ಶಿಲ್ಪಕಲಾ ಶೈಲಿಯ ಸಂಗಮವಾಗಿರುವುದಕ್ಕೆ ಹತ್ತು ಹಲವು ರಾಜಮನೆತನಗಳು ಕಾಲಕಾಲಕ್ಕೆ ನೀಡಿರುವ ಕೊಡುಗೆಯೇ ಕಾರಣವಾಗಿದೆ.ಕರ್ನಾಟಕದ ಪ್ರಾಚೀನ ಇತಿಹಾಸದ ಎಲ್ಲ ಶಿಲ್ಪಕಲಾ ವಿನ್ಯಾಸಗಳನ್ನು ಈ ದೇವಾಲಯ ಹೊಂದಿದೆ.ಗುಡಿಯ ಪ್ರಾಂಗಣದಲ್ಲಿ ಕೆತ್ತಿದ ಹನ್ನೊಂದು ಏಕಾದಶ ರುದ್ರರ ಮೂರ್ತಿಗಳು,ಹನ್ನೆರೆಡು ದ್ವಾದಶ ಆದಿತ್ಯರ ಮೂರ್ತಿಗಳು ಮತ್ತು ಅಷ್ಟದಿಕ್ಪಾಲಕರನ್ನು ಅವರವರ ದಿಕ್ಕಿನಲ್ಲಿ ಪತ್ನಿ,ಆಯುಧ,ಹಾಗೂ ವಾಹನಗಳ ಮೇಲೆ ವಿಗ್ರಹಗಳನ್ನು ಕೆತ್ತಿ ಸ್ಥಾಪಿಸಿರುವುದು ನೋಡಲು ಲಭ್ಯವಿರುವುದು ಇದೊಂದೇ ಸ್ಥಳದಲ್ಲಿ.ದೇವಾಲಯದ ಹೊರವಲಯದಲ್ಲಿರುವ ೪೦ ಅಡಿ ಎತ್ತರದ ದೀಪಸ್ತಂಭ,ಧ್ವಜಸ್ತಂಭಗಳು ಒಂದೇ ಕಲ್ಲಿನಿಂದ ಮಾಡಲ್ಪಟ್ಟಿವೆ.ಕದಂಬರಿಂದ ನಿರ್ಮಿತವಾದ ಕದಂಬ ಶಿಲ್ಪವನ್ನು ಉಪನಾಗರ ಶೈಲಿ ಎಂದು ಹೇಳಲಾಗಿದೆ.ಮಧುಕೇಶ್ವರ ದೇವಾಲಯದ ಗೋಪುರವನ್ನು ‘ಕದಂಬವಿಮಾನ’ ಎಂದು ಹೇಳುತ್ತಾರೆ.ಇದು ಉತ್ತರ ಭಾರತದ ನಾಗರ ಬೌದ್ಧ ಪ್ರಸ್ತಾನದ ಸುಧಾರಿಸಿದ ಆವೃತ್ತಿಯಾಗಿದೆ.ದೇವಾಲಯದ ಗರ್ಭಗುಡಿ ಈಗ ಆರ್ವಾಚೀನ ಆಕಾರವನ್ನು ತಳೆದಿದೆ.ಸುಂದರ ಕೆತ್ತನೆಯ ಕಂಬ,ಕೂಡುಕಟ್ಟೆಗಳಿಂದ ಆವೃತ್ತವಾದ ಸುಖನಾಸಿನಿ,ಮುಖಮಂಟಪ,ಪ್ರದಕ್ಷಿಣಾಪಥಗಳು ದೇವಾಲಯದ ಆಕರ್ಷಣೆಗಳು.೨ನೇ ಶತಮಾನದ ಐದು ಹೆಡೆಗಳ ನಾಗರ ಶಿಲ್ಪದ ಮೇಲೆ ಶಾಸನ ಪ್ರಾಕೃತ ಭಾಷೆಯಲ್ಲಿ ಬರೆದಿದ್ದಾರೆ.

ದೇವಾಲಯದ ಪ್ರಮುಖ ಆಕರ್ಷಣೆಗಳು

ಮಧುಕೇಶ್ವರ ಲಿಂಗ

ಶ್ರೀ ಮಧುಕೇಶ್ವರ ಲಿಂಗವು ೫.೫ ಅಡಿ ಎತ್ತರವಿದ್ದು,ಲಿಂಗದ ಶಿಲೆಯು ಜೇನು ತುಪ್ಪ(ಮಧು)ದ ಬಣ್ಣದಲ್ಲಿದೆ.ಅಂತೆಯೇ ಮಧುಕೇಶ್ವರ ಲಿಂಗವೆಂದು ಹೆಸರು.ಇಂತಹ ಕಲ್ಲಿನ ಶಿವಲಿಂಗಗಳು ಅತಿವಿರಳ.

ಮಾಯಾದೇವಿ ನಾಟ್ಯಮಂಟಪ

ಗುಡಿಯ ಮುಖಮಂಟಪದ ಮಧ್ಯದಲ್ಲಿ ನಾಟ್ಯಮಂಟಪವಿದೆ.ಮಮಕಾರ ರಾಜನ ಮಗಳಾದ ಮಾಯಾದೇವಿ ಶಿವನನ್ನೇ ಒಲಿಸಿಕೊಳ್ಳಬೇಕೆಂದು ನಾಟ್ಯಸೇವೆ ಮಾಡುತ್ತಿರುವಾಗ ಅಲ್ಲಮ ಪ್ರಭುವು ಮದ್ದಳೆಕಾರನಾಗಿ ಬಂದು ಮದ್ದಳೆ ನುಡಿಸಿ ಮಾಯೆಯನ್ನು ಸೋಲಿಸಿದನೆಂದು ಪ್ರಭುಲಿಂಗಲೀಲೆಯಲ್ಲಿ ಹೇಳಿದೆ.ಈ ಮಂಟಪದ ದುಂಡಗಿನ ನಾಲ್ಕು ಕಂಬಗಳಲ್ಲಿ ನಮ್ಮ ಪ್ರತಿಬಿಂಬವು ಏಕಕಾಲದಲ್ಲಿ ನೇರವಾಗಿ,ತಲೆ ಕೆಳಗಾಗಿಯೂ ಕಾಣುತ್ತದೆ.

ನಂದಿ ವಿಗ್ರಹ

ನಾಟ್ಯಮಂಟಪದ ಎದುರು ೭.೫ ಅಡಿ ಎತ್ತರದ ಬೃಹತ್ ನಂದಿ ಇದೆ.ಇದು ಹಾನಗಲ್ ಕದಂಬರ ಕಾಲಕ್ಕೆ ಸೇರಿದ್ದಾಗಿದೆ.ಈ ನಂದಿಯು ಎಡಗಣ್ಣಿನಿಂದ ಎದುರಿಗೆ ಶಿವನನ್ನು ಬಲಗಣ್ಣಿನಿಂದ ಪಕ್ಕದಲ್ಲಿರುವ ಪಾರ್ವತಿ ಗುಡಿಯಲ್ಲಿರುವ ಪಾರ್ವತಿಯನ್ನು ನೋಡುತ್ತಿದೆ.ನಂದಿಯನ್ನು ಅತ್ಯಂತ ನುಣುಪಾದ ಬಳಪದ ಕಲ್ಲಿನಿಂದ ಮಾಡಲಾಗಿದೆ.

ಕಲ್ಲು ಮಂಚ

ದೇವಾಲಯದ ದಕ್ಷಿಣ ಪಾರ್ಶ್ವದಲ್ಲಿರುವ ಕಲ್ಲಿನಮಂಚವು ಗ್ರೆನೈಟ್ ಶಿಲೆಯಿಂದ ಮಾಡಿದ್ದಾಗಿದೆ.ಇದು ಹತ್ತು ತುಂಡು ಕಲ್ಲಿನಿಂದ ಮಾಡಿದುದಾಗಿದೆ.ಇದು ಹೊಳಪಿನಿಂದ ಕೂಡಿದ್ದು ಇದರ ಮೇಲೆ ಶಾಸನಗಳನ್ನು ಕೆತ್ತಲಾಗಿದೆ.ಮಂಚದ ಮೇಲೆ ಗಿಳಿ,ಸಿಂಹಗಳು,ಆನೆಗಳು,ಛಾವಣಿಯ ಕಮಲಗಳನ್ನು ಕೆತ್ತಲಾಗಿದೆ.ಸೋಂದೆಯ ರಘುನಾಥ ನಾಯಕನು ೧೬೨೮ರಲ್ಲಿ ಇದನ್ನು ಮಧುಕೇಶ್ವರನಿಗೆ ಅರ್ಪಿಸಿದನು.

ಅರ್ಧಗಣಪತಿ

ಗುಡಿಯ ಬಲಭಾಗಕ್ಕೆ ಅನನ್ಯವಾದ ಅರ್ಧಗಣಪತಿಯ ಮೂರ್ತಿಯಿದೆ.ಇದರ ಇನ್ನೊಂದು ಅರ್ಧಭಾಗ ವಾರಣಾಸಿಯಲ್ಲಿದೆಯೆಂದು ನಂಬಲಾಗಿದೆ.ಇದು ಅರ್ಧಾಂಗಿಯಿಲ್ಲದೇ ನಿಂತಿರುವ ಏಕದಂತನ ಬ್ರಹ್ಮಚರ್ಯವನ್ನು ಸಂಕೇತಿಸುತ್ತದೆ.

recent reaserch explored that the garbha gudi belong to 2nd century.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್