Tuesday, November 12, 2019 2:54 PM

ಕೊಡಗಿನ ಕುಗ್ರಾಮಗಳಿಗೆ ಮರೀಚಿಕೆಯಾದ ಮೂಲಭೂತ ಸೌಲಭ್ಯ : ಹಮ್ಮಿಯಾಲ, ಹಚ್ಚಿನಾಡು, ಮುಟ್ಲು ಗ್ರಾಮಸ್ಥರ ಅರಣ್ಯರೋಧನ
184
ಕೊಡಗಿನ ಕುಗ್ರಾಮಗಳಿಗೆ ಮರೀಚಿಕೆಯಾದ ಮೂಲಭೂತ ಸೌಲಭ್ಯ : ಹಮ್ಮಿಯಾಲ, ಹಚ್ಚಿನಾಡು, ಮುಟ್ಲು ಗ್ರಾಮಸ್ಥರ ಅರಣ್ಯರೋಧನ

ಮಡಿಕೇರಿ ಅ.22 :
ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ದಟ್ಟ ಹಾಗೂ ಹಚ್ಚಹಸಿರಿನಿ ಶ್ರೀಮಂತ ಕಾಡುಗಳಿಂದ ಆವೃತ್ತವಾಗಿರುವ ಹಮ್ಮಿಯಾಲ, ಹಚ್ಚಿನಾಡು, ಮುಟ್ಲು ಎಂಬ ಹೆಸರಿನ ಮೂರು ಕುಗ್ರಾಮಗಳು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದು, ಗ್ರಾಮಸ್ಥರ ಸ್ಥಿತಿ ಅತ್ಯಂತ ಹೀನಾಯವಾಗಿದೆ.
ಈ ಗ್ರಾಮಗಳಲ್ಲಿ ಸುಮಾರು 150 ಕುಟುಂಬಗಳು ಅನೇಕ ದಶಕಗಳ ಹಿಂದೆಯೇ ನೆಲೆ ನಿಂತಿವೆ. ಆದರೆ ಎಲ್ಲಾ ಇದ್ದು ಏನು ಇಲ್ಲದಂತಿರುವ ಈ ಗ್ರಾಮದಲ್ಲಿ ಯುವಕರ ಸಂಖ್ಯೆ ವಿರಳ. ಏನು ಬೆಳೆಯದ, ಬೆಳೆದರೂ ಕೈಗೆ ದಕ್ಕದ ಊರಲ್ಲಿ ಇದ್ದು ಮಾಡೋದಾದರು ಏನು ಎಂದು ಪ್ರಶ್ನಿಸಿಕೊಂಡು ಯುವ ಸಮೂಹ ನಗರದೆಡೆಗೆ ಮುಖ ಮಾಡುತ್ತಿದೆ.
ಕಾಫಿ ಗಿಡವಿದೆ, ಫಸಲು ಬಿಡದೇ ವರ್ಷಗಳೇ ಉರುಳಿದೆ. ಕರಿಮೆಣಸು ಬಳ್ಳಿ ಇದ್ದರೂ ಮದ್ದಿಗೂ ಒಂದು ಕಾಳು ಸಿಗಲ್ಲ. ಅಲ್ಲಿ ಇರೋದು ಬರೀ ಏಲಕ್ಕಿ ಗಿಡಗಳು ಮಾತ್ರವೇ. ಆದರೆ ಕಳೆದ ವರ್ಷ ಸುರಿದ ಮಹಾಳೆಗೆ ಈ ಏಲಕ್ಕಿ ಗಿಡಗಳು ಕೂಡ ಕೊಳೆತು ಹೋಗಿವೆ.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯ ಅಡಿಯಲ್ಲಿ ರಸ್ತೆ ಮಾಡಲಾಗಿದೆ. ಕಳೆದ ವರ್ಷ ಸುರಿದ ಮಳೆಯಿಂದÀ ಭೂ ಕುಸಿತ ಉಂಟಾಗಿ ಕೆಲವು ಕಡೆಗಳಲ್ಲಿ ರಸ್ತೆಗೆ ಹಾನಿಯಾಗಿದೆ. ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡಿದ್ದರೂ ಕೂಡ ಅದು ಕಳೆಪೆಯಾಗಿರುವುದು, ಗುಣಮಟ್ಟ ಇಲ್ಲದಿರುವುದು ಕಣ್ಣಿಗೆ ರಾಚುತ್ತದೆ. ಈ 3 ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆ ಮತ್ತು ಮೊಬೈಲ್ ಟವರ್ ಕಲ್ಪಿಸಿಕೊಡಿ ಎಂಬುವುದೇ ಗ್ರಾಮಸ್ಥರ ಪ್ರಮುಖ ಬೇಡಿಕೆ. ಈ ಬಗ್ಗೆ ಸಂಸದರು, ಶಾಸಕರು, ಕೊಡಗು ಜಿಲ್ಲಾಡಳಿತ, ಪುತ್ತೂರು ವಿಭಾಗದ ಕೆಎಸ್‍ಆರ್‍ಟಿಸಿ ಡಿಪ್ಪೋ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಗಳಿಗೆ ಲೆಕ್ಕವಿಲ್ಲ. ಆದರೆ ಸ್ಪಂದನೆ ಮಾತ್ರ ದೊರಕಿಲ್ಲ. ಸಮಸ್ಯೆಗಳ ಬಗೆಹರಿಕೆಗಾಗಿ ಮಾಡಲಾದ ಮನವಿಗಳೆಲ್ಲ ಕಸದ ಬುಟ್ಟಿ ಸೇರಿತೇ ಎಂದು ಗ್ರಾಮಸ್ಥರು ಮುಗ್ದರಂತೆ ಪ್ರಶ್ನಿಸುತ್ತಾರೆ.
ಇನ್ನು ಹಮ್ಮಿಯಾಲದಿಂದ 5 ಕಿ.ಮೀ ದೂರದಲ್ಲಿರುವ ಮುಕ್ಕೋಡ್ಲು ಹಾಗೂ 8 ಕಿ.ಮೀ ದೂರದಲ್ಲಿರುವ ಸೂರ್ಲಬ್ಬಿ ಗ್ರಾಮಗಳಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳು ಗ್ರಾಮೀಣ ಸೇವೆ ನೀಡುತ್ತಿವೆ. ಹಮ್ಮಿಯಾಲದ ಗ್ರಾಮಸ್ಥರು ಮತ್ತು ಅಲ್ಲಿನ ಶಾಲಾ ಮಕ್ಕಳು ಬಸ್ ಸೇವೆ ಪಡೆಯಬೇಕೆಂದರೆ ಮುಕ್ಕೋಡ್ಲು ಅಥವಾ ಸೂರ್ಲಬ್ಬಿಗೆ ನಡೆದುಕೊಂಡೇ ಸಾಗಬೇಕು. ಇನ್ನು ಜೀಪುಗಳಲ್ಲಿ ತೆರಳಲು ಬರೋಬ್ಬರಿ 2 ಸಾವಿರ ರೂ. ಬಾಡಿಗೆ ಪಾವತಿಸಬೇಕು. ಕಾಫಿ, ಕರಿಮೆಣಸು ಅಂತಹ ಗಿಡಗಳಿದ್ದರೂ ಆರ್ಥಿಕ ಬೆಳೆಗಳು ಬೆಳೆಯದ, ಏಲಕ್ಕಿ ಬೆಳೆಯನ್ನೇ ನೆಚ್ಚಿಕೊಂಡಿರುವ ಹಮ್ಮಿಯಾಲ, ಮುಟ್ಲು, ಹಚ್ಚಿನಾಡು ಗ್ರಾಮಸ್ಥರು ದುಬಾರಿ ಬಾಡಿಗೆ ತೆತ್ತು ನಗರಕ್ಕೆ ಬಂದು ಹೋಗಲು ಸಾಧ್ಯವೆ ಎಂಬ ಪ್ರಶ್ನೆಗೆ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಉತ್ತರಿಸಬೇಕು ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರು.
ಇನ್ನು ಹಮ್ಮಿಯಾಲದಲ್ಲಿ ತಂಬುಕುತ್ತೀರ ಎಂಬ ಒಂದು ಪ್ರದೇಶವಿದೆ. ಇಲ್ಲಿ ಅನಾದಿ ಕಾಲದಿಂದ 11ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಇಂದಿಗೂ ಅವರು ವಿದ್ಯುತ್ ಬೆಳಕು ಕಂಡಿಲ್ಲ. ಇತ್ತೀಚೆಗೆ ಈ ಭಾಗದಲ್ಲಿ ವಿದ್ಯುತ್ ಕಂಬಗಳನ್ನು ನಡೆಲಾಗಿದ್ದು, ಕಾಮಗಾರಿಯ ಗುತ್ತಿಗೆ ಪಡೆದವರು ತಂತಿ ಎಳೆಯದೇ ಹಾಗೇ ಬಿಟ್ಟು ಬೆನ್ನು ತಿರುಗಿಸಿ ಹೋಗಿದ್ದಾರೆ. ಮತ್ತೆ ಯಾವಾಗ ಬರುತ್ತಾರೋ ಗೊತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಹತಾಶರಾಗಿ ಹೇಳುತ್ತಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಂದಾಜು 40 ಮೀಟರ್ ರಸ್ತೆಯನ್ನು ಗ್ರಾಮಸ್ಥರೇ ನಿರ್ಮಿಸಿದ್ದಾರೆ. ಉಳಿದ ರಸ್ತೆಯಲ್ಲಿ ಜಾನುವಾರುಗಳು ಕೂಡ ನಡೆಯಲು ಸಾಧ್ಯವಿಲ್ಲದಂತಿದೆ.
ಗ್ರಾಮಸ್ಥರ ಬಳಿ ಮೊಬೈಲ್ ಇದೆ. ಮೊಬೈಲ್‍ನಲ್ಲಿ ಮಾತನಾಡಲು 4 ಕಿ.ಮೀ ಎತ್ತರದ ಬೆಟ್ಟ ಏರಲೇಬೇಕು. ಈ ಗ್ರಾಮದ ನಿವಾಸಿಗಳ ಆರೋಗ್ಯ ಹದಗೆಟ್ಟರೆ ಆ ದೇವರೇ ಕಾಪಾಡಬೇಕು.
ಸ್ವಾತಂತ್ರ ಬಂದು 70 ವರ್ಷಗಳೇ ಉರುಳಿದರೂ ಶತಮಾನದ ಹಿಂದೆಯೇ ನಾಗರಿಕತೆ ಆರಂಭವಾದ ಊರಲ್ಲಿ ಇಂದಿಗೂ ಮೂಲಸೌಕರ್ಯಗಳಿಲ್ಲ ಎಂಬುವುದು ಸರಕಾರ ಮತ್ತು ಆಡಳಿತ ವ್ಯವಸ್ಥೆಯನ್ನೇ ಅಣಕಿಸುವಂತ್ತಿದೆ. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತ, ಚುನಾಯಿತ ಜನ ಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಬೇಕು ಎಂಬುವುದೇ ಈ ಮುಗ್ದ ಗ್ರಾಮಸ್ಥರ ಆಗ್ರಹವಾಗಿದೆ.
ರಸ್ತೆ ದುರಸ್ತಿ ಮಾಡಿದರೆ ಬಸ್‍ಗಳು ಬರಲು ಸಾಧ್ಯವಿದೆ, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ರಸ್ತೆ ಸರಿಯಾದರೆ ಬಸ್ ಸೇವೆ ನೀಡುತ್ತೇವೆ ಎನ್ನುತ್ತಾರೆ. ಬೆಳಗೆ 7 ಗಂಟೆಗೆ ಶಾಲೆಗೆ ಹೊರಡುವ ಮಕ್ಕಳು ರಾತ್ರಿ 7 ಗಂಟೆಗೆ ಮನೆಗೆ ಬರಬೇಕಾದ ದುಸ್ಥಿತಿ ಈಗ ನಮ್ಮದು ಎಂದು ಗ್ರಾಮಸ್ಥ ಪಿ.ಸಿ. ತಮ್ಮಯ್ಯ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸೂರ್ಲಬ್ಬಿ ಮತ್ತು ಮುಕ್ಕೋಡ್ಲುವಿಗೆ ಬಸ್ ವ್ಯವಸ್ಥೆ ಇದೆ, ಈ ಸೇವೆಯನ್ನು ಅಕ್ಕಪಕ್ಕದ ಗ್ರಾಮಗಳಿಗೂ ವಿಸ್ತರಿಸಬೇಕು, ಕಳೆದ ವರ್ಷ ಸಂಭವಿಸಿದ ಭೂ ಕುಸಿತದಿಂದ ಹಾನಿಯಾದ ರಸ್ತೆಯನ್ನು ಇಂದಿಗೂ ದುರಸ್ತಿ ಪಡಿಸದೆ ಇರುವುದು ಬೇಸರ ತಂದಿದೆ ಎಂದು ಗ್ರಾಮಸ್ಥ ಪವನ್ ದೂರಿಕೊಂಡಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್