Saturday, December 14, 2019 10:49 AM

ಸೋಮವಾರಪೇಟೆ ತಾಲೂಕು ಅಭಿವೃದ್ದಿಗೆ ಒತ್ತಾಯ : ಶಾಸಕ ಅಪ್ಪಚ್ಚುರಂಜನ್‍ಗೆ ಮನವಿ ಸಲ್ಲಿಕೆ
61
ಸೋಮವಾರಪೇಟೆ ತಾಲೂಕು ಅಭಿವೃದ್ದಿಗೆ ಒತ್ತಾಯ : ಶಾಸಕ ಅಪ್ಪಚ್ಚುರಂಜನ್‍ಗೆ ಮನವಿ ಸಲ್ಲಿಕೆ

ಸೋಮವಾರಪೇಟೆ ನ. 11 : ಸೋಮವಾರಪೇಟೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಟಿಬದ್ಧನಾಗಿದ್ದೇನೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ಸೋಮವಾರದಂದು ಶಾಸಕರ ಕಚೇರಿಯಲ್ಲಿ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ನೀಡಿದ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕು ಕೇಂದ್ರದಲ್ಲಿ ಸೂಕ್ತ ಸ್ಥಳ ದೊರೆತಲ್ಲಿ ಇನ್ನು ಒಂದು ತಿಂಗಳೊಳಗೆ ಕೆಎಸ್‍ಆರ್‍ಟಿ ಬಸ್ ಡಿಪೋ ಸ್ಥಾಪನೆಗೆ ಮುಂದಾಗುವುದಾಗಿ ಸಮಿತಿಯ ಪದಾಧಿಕಾರಿಗಳಿಗೆ ಭರವಸೆ ನೀಡಿದರು. ಅಲ್ಲದೇ ಸೋಮವಾರಪೇಟೆ ಪಟ್ಟಣದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸುಸಜ್ಜಿತ ಮೊರಾರ್ಜಿ ವಸತಿ ಶಾಲೆ ಆರಂಭಿಸಲು ಗಮನಹರಿಸಲಾಗುವುದು, ಯಡೂರಿನಲ್ಲಿ ಸ್ನಾತಕೋತ್ತರ ಕೇಂದ್ರ, ಪ್ರವಾಸೋದ್ಯಮಕ್ಕೆ ಉತ್ತೇಜನೆ, ಹಣ್ಣು ಸಂಸ್ಕರಣಾ ಘಟಕದ ಉಪಕೇಂದ್ರವನ್ನು ತೆರೆಯುವುದು, ಹಸಿ ಮೆಣಸು ಪುಡಿ ತಯಾರಿಕಾ ಘಟಕ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವ ಮೂಲಕ ಸೋಮವಾರಪೇಟೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮುಂದಾಗುವುದಾಗಿ ಭರವಸೆ ನೀಡಿದರು.
ತಾಲೂಕು ವಿಭಜನೆ ಸಂದರ್ಭ ಗಡಿಗೆ ಸಂಬಂಧಿಸಿದಂತೆ ಯಾವುದೇ ಗ್ರಾಮ ಪಂಚಾಯಿತಿಗಳನ್ನು ಬೇರ್ಪಡಿಸದಿರುವುದು, ಮಾದಾಪುರ ಹೋಬಳಿ ಸ್ಥಾಪನೆ, ಈಗಾಗಲೇ ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳು ಮಡಿಕೇರಿ, ಕುಶಾಲನಗರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸೇರಿದ್ದು, ಎಲ್ಲಾ ಗ್ರಾಮಗಳನ್ನು ಸೋಮವಾರಪೇಟೆ ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಗೆ ಸೇರ್ಪಡೆಗೊಳಿಸುವುದು ಸೇರಿದಂತೆ ಹೋರಾಟ ಸಮಿತಿಯವರು ನೀಡಿದ ಬಹುತೇಕ ಮನವಿಗಳಿಗೆ ಸಕಾರತ್ಮಾಕವಾಗಿ ಸ್ಪಂದಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿ, ಸೋಮವಾರಪೇಟೆ ತಾಲೂಕು ವಿಭಜನೆಯಾದ ನಂತರ, ಶಾಂತಳ್ಳಿ, ಮಾದಾಪುರ, ಕೊಡ್ಲಿಪೇಟೆ, ಶನಿವಾರಸಂತೆ ಸೇರಿದಂತೆ ಬಹುತೇಕ ಹಿಂದುಳಿದ ಪ್ರದೇಶಗಳು ನಮ್ಮೊಂದಿಗೆ ಸೇರಿವೆ. ಯಾವುದೇ ಉನ್ನತ ಶಿಕ್ಷಣ, ಕೈಗಾರಿಕೋದ್ಯಮಗಳು, ಪ್ರವಾಸೋದ್ಯಮ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಬಸ್ ಡಿಪೋ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹುಟ್ಟೂರಾದ ಶನಿವಾರಸಂತೆಯಲ್ಲಿ ತಾಲೂಕಿನ ಹುತಾತ್ಮ ಯೋಧರ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಅಗತ್ಯ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಈ ಕುರಿತು ಶಾಸಕರು ಗಮನಹರಿಸಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.
ಪ್ರಧಾನ ಸಂಚಾಲಕ ಎಸ್.ಮಹೇಶ್ ಮಾತನಾಡಿ, ಸೋಮವಾರಪೇಟೆ ಸುತ್ತಮುತ್ತಲಿನ ಪ್ರದೇಶಗಳನ್ನು ಸೇರ್ಪಡೆಗೊಳಿಸಿಕೊಂಡು ಹಾಲಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ, ಶನಿವಾರಸಂತೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗು ಮೇಲ್ದರ್ಜೆಗೆ ಏರಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಎಸ್.ಎಂ.ಡಿಸಿಲ್ವಾ, ಬಿ.ಬಿ.ಸತೀಶ್, ಕೆ.ಎನ್.ದೀಪಕ್, ಎಸ್.ಎ.ಮುರಳೀಧರ್, ಕೆ.ಎ.ಯಾಕೂಬ್, ಎಚ್.ಎ.ನಾಗರಾಜು, ಬಿ.ಎಸ್.ಮಂಜುನಾಥ್, ಎಸ್.ಆರ್.ಸೋಮೇಶ್, ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ ಮತ್ತಿತತರ ಪ್ರಮುಖರು ಹಾಜರಿದ್ದರು.

ನಂತರ ತಹಶೀಲ್ದಾರ್ ಗೋವಿಂದರಾಜು ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು ತಾಲೂಕು ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿದರು. ಈ ಸಂದರ್ಭ ತಹಶೀಲ್ದಾರ್ ಮಾತನಾಡಿ, ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನ ಗಡಿ ಗುರುತಿಸುವಲ್ಲಿ ಎಲ್ಲವೂ ಸೂಕ್ತವಾಗಿ ಮಾಡಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿ ವ್ಯಾಪ್ತಿಗೆ ತಾಲೂಕಿನ ಎಲ್ಲಾ ಗ್ರಾಮಗಳು ಸೇರ್ಪಡೆಯಾಗಲಿವೆ. ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಸ್ಥಳವನ್ನು ಶಾಸಕರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್