ಕಾದಾಟದಿಂದ ಗಾಯಗೊಂಡಿದ್ದ ಕಾಡು ಕೋಣ ಸಾವು

01/05/2020

ಮಡಿಕೇರಿ ಏ.30 : ಪರಸ್ಪರ ಗುದ್ದಾಡಿಕೊಂಡಿದ್ದ ಎರಡು ಕಾಡು ಕೋಣಗಳ (ಕಾಟಿ) ಪೈಕಿ ಒಂದು ತೀವ್ರವಾಗಿ ಗಾಯಗೊಂಡು ಅಸ್ವಸ್ಥಗೊಂಡಿದ್ದ ಕಾಡು ಕೋಣ ಮೃತಪಟ್ಟಿದೆ.
ದಕ್ಷಿಣ ಕೊಡಗಿನ ಕೆ. ಬಾಡಗದ ಹೆರ್ಮಾಡು ಶ್ರೀ ಈಶ್ವರ ದೇವಸ್ಥಾನ ಸಮೀಪದ ಪೆಮ್ಮಣಮಾಡ ನವೀನ್ ಎಂಬುವವರ ತೋಟದಲ್ಲಿ ಎರಡು ದಿನಗಳ ಹಿಂದೆ ಎರಡು ಕಾಡು ಕೋಣಗಳು ಪರಸ್ಪರ ಕಾದಾಡಿಕೊಂಡಿದ್ದು, ಇವುಗಳ ಪೈಕಿ ಒಂದು ಕೋಣ ತೀವ್ರವಾಗಿ ಗಾಯಗೊಂಡು ತೋಟದ ಹೊಂಡದೊಳಗೆ ಬಿದ್ದಿತ್ತು. ಈ ಬಗ್ಗೆ ಮಾಹಿತಿ ದೊರೆತ ಅರಣ್ಯ ಮತ್ತು ಪಶು ಸಂಗೋಪನಾ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಹೊಂಡದಲ್ಲಿ ಬಿದ್ದಿದ್ದ ಕಾಡು ಕೋಣವನ್ನು ಕ್ರೇನ್ ಮತ್ತು ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಿ ಸೂಕ್ತ ಚಿಕಿತ್ಸೆಯನ್ನು ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಂಟೈನರ್ ಮೂಲಕ ಮೈಸೂರು ಮೃಗಾಲಯಕ್ಕೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾಡುಕೋಣ ಮೃತಪಟ್ಟಿದೆ.