ಕಾರ್ಮಿಕ ವರ್ಗದ ಸಂಕಷ್ಟಕ್ಕೆ ಸ್ಪಂದಿಸಿದ ಕೊಡಗು ರೆಡ್‍ಕ್ರಾಸ್

May 1, 2020

ಮಡಿಕೇರಿ.ಮೇ 1 : ಕೊಡಗು ಜಿಲ್ಲಾ ರೆಡ್‍ಕ್ರಾಸ್ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅನೀಸ್‍ಕಣ್ಮಣಿಜಾಯ್ ಮಾರ್ಗದರ್ಶನದಲ್ಲಿ ಕಳೆದ 1 ತಿಂಗಳಿನಿಂದ ರೆಡ್‍ಕ್ರಾಸ್ ಘಟಕವು ಕರೋನಾ ಸಂಕಷ್ಟ ಸಂದರ್ಭ ಅನೇಕರಿಗೆ ನೆರವು ನೀಡಿದೆ.

ಕರೋನಾ ಸಂದರ್ಭದ ಲಾಕ್‍ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ಬಡವರ್ಗದವರಿಗೆ ಕೊಡಗು ರೆಡ್‍ಕ್ರಾಸ್ ವತಿಯಿಂದ ನೆರವು ನೀಡಲಾಗಿದೆ.

ಕೋವಿಡ್ 19 ವೈರಸ್ ಹರಡುವಿಕೆ ಸಂಬಂಧಿತ ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಜಿಲ್ಲೆಯ ಹಲವು ಕಡೆ ಕರಪತ್ರಗಳನ್ನು ಹಂಚಲಾಗಿದ್ದು, ರೆಡ್‍ಕ್ರಾಸ್ ವತಿಯಿಂದ ಕೋವಿಡ್ 19 ವೈರಾಣು ಕುರಿತಾಗಿ ಜಿಲ್ಲೆಯ ಮೂರೂ ತಾಲೂಕುಗಳಲ್ಲಿ ಜಾಗೃತಿ ಸಂದೇಶದ ವಾಹನದ ಮೂಲಕ ಅರಿವು ಮೂಡಿಸಲಾಯಿತು. ಮಡಿಕೇರಿ, ಕುಶಾಲನಗರದ ನ್ಯಾಯಾಲಯಗಳ ನ್ಯಾಯಾಧೀಶರೂ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ರೆಡ್‍ಕ್ರಾಸ್ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಕೊಡಗು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕಾರ್ಮಿಕರು, ಬಡವರ್ಗದವರಿಗೆ 15 ಸಾವಿರ ಮಾಸ್ಕ್ 10 ಸಾವಿರ ಸೋಪ್, 3000 ಸ್ಯಾನಿಟೈಸರ್ ಗಳನ್ನು ವಿತರಿಸಲಾಗಿದೆ. ಅಂತೆಯೇ ಹೊರಜಿಲ್ಲೆಗೆಕೊಡಗಿನಿಂದ ತೆರಳಿದ ವಲಸೆ ಕಾರ್ಮಿಕರಿಗೂ ಸುರಕ್ಷತ ಪರಿಕರಗಳನ್ನು ರೆಡ್‍ಕ್ರಾಸ್ ನಿಂದ ವಿತರಿಸಲಾಗಿದೆಎಂದು ರೆಡ್‍ಕ್ರಾಸ್ ಸಭಾಧ್ಯಕ್ಷ ಬಿ.ಕೆ.ರವೀಂದ್ರರೈ ಮಾಹಿತಿ ನೀಡಿದ್ದಾರೆ. ರೆಡ್‍ಕ್ರಾಸ್ ನ ತಾಲೂಕು ಘಟಕವು ಕುಶಾಲನಗರದಲ್ಲಿ 20 ದಿನಗಳ ಕಾಲ ಪಡಿತರ ಕಿಟ್ ವಿತರಿಸಿದ್ದು ಗ್ರಾಮೀಣ ಪ್ರದೇಶದ ಜನರ ಸಂಕಷ್ಟಕ್ಕೂ ಕುಶಾಲನಗರ ರೆಡ್‍ಕ್ರಾಸ್ ಘಟಕದ ಅಧ್ಯಕ್ಷ ಎಸ್.ಕೆ.ಸತೀಶ್ ನೇತೃತ್ವದ ತಂಡ ಶ್ರಮಿಸಿದೆ ಎಂದೂರ ವೀಂದ್ರರೈ ತಿಳಿಸಿದರು.

ಮುಂದಿನ ದಿನಗಳಲ್ಲಿಯೂ ಕೊಡಗಿನಲ್ಲಿ ನೆರವು ಅಗತ್ಯವಿರುವ ಕಾರ್ಮಿಕರಿಗೆ ರೆಡ್‍ಕ್ರಾಸ್ ಸಹಾಯಕ್ಕೆ ಮುಂದಾಗಲಿದ್ದು, ರಕ್ತದತೀವ್ರ ಕೊರತೆ ಗಮನಿಸಿ ಲಾಕ್‍ಡೌನ್‍ತೆರವುಗೊಂಡ ಬಳಿಕ ರೆಡ್‍ಕ್ರಾಸ್ ವತಿಯಿಂದ ರಕ್ತದಾನ ಶಿಬಿರವನ್ನು ಎಲ್ಲಾ ಸುರಕ್ಷತಾ ವಿಧಾನ ಕಾಯ್ದುಕೊಂಡು ಆಯೋಜಿಸಲಾಗುತ್ತದೆ ಎಂದು ರೆಡ್‍ಕ್ರಾಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಆರ್.ಮುರಳಿಧರ ತಿಳಿಸಿದ್ದಾರೆ.