ನಾಯಕರುಗಳ ಸ್ವಪ್ರತಿಷ್ಠೆಗೆ, ಸ್ವಾರ್ಥ ಸಾಧನೆಗೆ ಭೂಮಂಡಲ ಬಲಿಯಾಗುತ್ತಿದೆಯೇ?

ನಾವು ಇತಿಹಾಸವನ್ನು ಅವಲೋಕಿಸಿದಾಗ ಹಾಗೂ ಆನಂತರದ ಬೆಳವಣಿಗೆಯನ್ನು ಅವಲೋಕಿಸಿದಾಗ, ಪ್ರಸ್ತುತ ಪರಿಸ್ಥಿತಿಯನ್ನು ವಿಮರ್ಶಿಸಿದಾಗ ರಾಷ್ಟ್ರಗಳನ್ನಾಳುವ ಅದರಲ್ಲೂ ಯುರೋಪ್ ದೇಶಗಳ ರಾಷ್ಟ್ರ ನಾಯಕರ ಸ್ವಾರ್ಥಪರ ಚಿಂತನೆಗಳಿಂದ ಅಧಿಕಾರದ ಲಾಲಸೆಯಿಂದ ಭೂಮಂಡಲದಲ್ಲಿ ಜೀವಿಗಳು ತಮ್ಮ ಉಳಿವಿಗಾಗಿ ಪರಿತಪಿಸುವಂತಾಗಿದೆ. ಇದರ ಪರಿಣಾಮವೇ ಇಂದು ಕರೋನ ಎಂಬ ವೈರಸ್ ಇಡೀ ಭೂಮಂಡಲವನ್ನು ಹೈರಾಣಾಗಿಸಿದೆ. ಪ್ರಬಲ ರಾಷ್ಟ್ರಗಳು ಇದರ ಮುಂದೆ ಮಂಡಿಯೂರಿ ನಿಂತಿದೆ. ಈ ವೈರಸ್ ಮಾನವ ನಿರ್ಮಿತವೋ ಅಥವಾ ಪ್ರಕೃತಿ ನಿರ್ಮಿತವೋ ಎಂಬ ಜಿಜ್ಞಾಸೆಗೆ ಉತ್ತರ ಸಿಕ್ಕಿಲ್ಲ. ಆದರೂ ಒಂದಂತೂ ನಿಜ ಮನುಷ್ಯನ ಅಧಿಕಾರ ದಾಹಕ್ಕಾಗಿ ಇಷ್ಟು ದಿನ ಭೂಮಂಡಲ ಮತ್ತು ಜೀವ ಸಂಕುಲಗಳು ನಾಶವಾಗುತ್ತಿದ್ದವು. ಆದರೆ ಇಂದು ಮನುಷ್ಯನೇ ಬಲಿಯಾಗುತ್ತಿದ್ದಾನೆ. ಯಾವಾಗ ಮನುಷ್ಯನು ಅಧಿಕಾರ ದಾಟಿ ವಿಜ್ಞಾನದ ಆವಿಷ್ಕಾರಕ್ಕೆ ಒತ್ತು ನೀಡುತ್ತಾ ಬಂದನೋ ಅಂದಿನಿಂದ ತನ್ನ ನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ.
ಹಿಂದಿನಿಂದಲೂ ರಾಜ ಮಹಾರಾಜರುಗಳ ಕಾಲದಿಂದಲೂ ಅಧಿಕಾರ ದಾಹಕ್ಕಾಗಿ ಯುದ್ಧಗಳು ನಡೆಯುತ್ತಿದ್ವು. ಆನಂತರ ದೇಶಗಳ ನಡುವೆ ಯುದ್ಧಗಳು ನಡೆಯಲು ಪ್ರಾರಂಭವಾಯಿತು. ಯೂರೋಪ್ ದೇಶಗಳ ಹಿತಾಸಕ್ತಿ ಮತ್ತು ವಿಶ್ವವನ್ನು ಆಳಬೇಕೆಂಬ ವಿಸ್ತಾರವಾದ ಹಂಬಲ ಒಂದು ಮತ್ತೊಂದಕ್ಕೆ ಕಾರಣವಾಗುವಂತೆ ಎರಡು ಮಹಾಯುದ್ಧಗಳು ನಡೆದು ಹೋದವು. ಇದರಿಂದ ಎಲ್ಲಾ ರಾಷ್ಟ್ರಗಳು ಪೆಟ್ಟು ತಿಂದವು. ಒಂದು ಗಾದೆಯ ಮಾತಿನಂತೆ ಗೆದ್ದವನು ಸೋತ. ಸೋತವನು ಸತ್ತ ಎಂಬಂತೆ ಯಾರಿಗೂ ಯುದ್ಧದಿಂದ ಲಾಭವಾಗಿಲ್ಲ. ಇನ್ನೊಬ್ಬರೊಡನೆ ನಾನು ನಾಶವಾಗುತ್ತೇನೆಂಬ ಅರಿವಿದ್ದರೂ ಮಾನವ ತಪ್ಪು ಹೆಜ್ಜೆಯನ್ನು ಇಡುತ್ತಿದ್ದಾನೆ. ಯುದ್ಧದಿಂದ ಎಲ್ಲಾ ರಾಷ್ಟ್ರಗಳು ಆರ್ಥಿಕವಾಗಿ ಜರ್ಜರಿತವಾಗುತ್ತದೆ. ಭೌಗೋಳಿಕವಾಗಿ ನಾಶವನ್ನು ಹೊಂದುತ್ತಾನೆ. ಮೊದಲೆರಡು ಮಹಾ ಯುದ್ಧದ ನಂತರ ಮೂರನೆಯ ಮಹಾಯುದ್ಧ ಯಾರಿಗೂ ಬೇಡವಾಗಿತ್ತು. ಯಾರೂ ಅದರ ಹೊಡೆತ ತಿನ್ನಲು ತಯಾರಿರಲಿಲ್ಲ. ಅದರ ಪರಿಣಾಮವಾಗಿ ನಂತರದ ದಿನಗಳಲ್ಲಿ ಯೂರೋಪ್ ರಾಷ್ಟ್ರಗಳ ನಡುವೆ ಶೀತಲ ಸಮರ ಪ್ರಾರಂಭವಾದವು. ಅದು ಮುಂದೆ ಏಷ್ಯಾದ ರಾಷ್ಟ್ರಗಳಿಗೂ ಪಸರಿಸಿತು. ಅದರ ಪರಿಣಾಮವೇ ಜಾಗತಿಕ ಮಾರುಕಟ್ಟೆಯ ವಿಸ್ತರಣೆ. ಆರ್ಥಿಕ ಬೆಳವಣಿಗೆಯ ಪರಿಣಾಮವಾಗಿ ಈ ಶೀತಲ ಸಮರ ಪ್ರಾರಂಭವಾಯಿತು. ಮುಂದೆ ಅದು ಭಯೋತ್ಪಾದನೆಯ ವೇದಿಕೆಯಾಗಿ ಪರಿವರ್ತನೆಯಾಯಿತು. ಅದು ತಹಬದಿಗೆ ಬರುವ ವೇಳೆಗೆ ಸೃಷ್ಠಿಯಾಯಿತು ಇಂದಿನ ಜೈವಿಕ ಸಮರ.
ಮೊದಲೆರಡು ಮಹಾಯುದ್ಧದ ನಂತರ ವಿಜ್ಞಾನದ ಆವಿಷ್ಕಾರ ನಿರೀಕ್ಷೆಗೂ ಮೀರಿ ಬೆಳೆಯಿತು. ಇದರ ಪರಿಣಾಮವನ್ನು ಮನಗಂಡ ವಿಶ್ವದ ನಾಯಕರುಗಳು ಮೂರನೇ ವಿಶ್ವಯುದ್ಧಕ್ಕೆ ನಾಂದಿ ಹಾಡಲು ಹಿಂತೆಗೆದರು. ಎರಡನೇ ಮಹಾಯುದ್ಧದ ನಂತರ ಶಾಂತಿಯ ಮಂತ್ರಗಳು ಆರಂಭವಾದವು. ಅದರ ಪರಿಣಾಮವಾಗಿ ವಿಶ್ವ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ನಂತರದ ದಿನಗಳಲ್ಲಿ ನಾಯಿಕೊಡೆಗಳಂತೆ ಅನೇಕ ಒಕ್ಕೂಟಗಳು ಆರಂಭವಾದವು. ಅನೇಕ ಒಪ್ಪಂದಗಳು ನಡೆದವು. ಕ್ರೀಡೆಯ ಮೂಲಕ ಶಾಂತಿಯ ಮಂತ್ರ ಜಪಿಸಲಾಯಿತು. ಇದಕ್ಕಾಗಿ ಒಲಂಪಿಕ್ ಕ್ರೀಡೆಯನ್ನು ಬೆಳಕಿಗೆ ತರಲಾಯಿತು. ಎಲ್ಲಾ ತರದ ಶಾಂತಿ ಮಂತ್ರವನ್ನು ಪಠಿಸಲಾಯಿತು. ನಾನು ಎಂಬ ಅಹಂ ನಿಂದಾಗಿ ಹಾಗೂ ಸಂಶಯದ ಮನಸ್ಥಿತಿಯಿಂದಾಗಿ ವಿಶ್ವದಲ್ಲಿ ಶಾಂತಿಯ ಪರ ಕನಸುಗಳು ಕೇವಲ ಬರವಣಿಗೆಯಲ್ಲೇ ಉಳಿಯುವಂತಾಯಿತು.
ನಂತರದ ದಿನಗಳಲ್ಲಿ ನೆರೆ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ರಾಷ್ಟ್ರಗಳು ಕಂಡುಕೊಂಡ ಮಾರ್ಗವೆಂದರೆ ಭಯೋತ್ಪಾದನೆಯನ್ನು ಹುಟ್ಟುಹಾಕುವುದು. ಇದು ಪರೋಕ್ಷವಾಗಿ ಇನ್ನೊಂದು ರಾಷ್ಟ್ರವನ್ನು ಅಸ್ಥಿರಗೊಳಿಸುವಂತಹ ತಂತ್ರವಾಗಿತ್ತು. 19ನೇ ಶತಮಾನದಲ್ಲಿ ಭಯೋತ್ಪಾದನೆ ಒಂದು ಸಾಮಾಜಿಕ ಪಿಡುಗಾಗಿ ಪರಿವರ್ತನೆಯಾಗಿತ್ತು. ಇದರ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಬಹುತೇಕ ಎಲ್ಲಾ ರಾಷ್ಟ್ರಗಳ ಅದರಲ್ಲೂ ಮುಂದುವರೆದ ರಾಷ್ಟ್ರಗಳ ಪಾತ್ರವು ಬಹುಪಾಲಿತ್ತು. ಇದರಿಂದ ಎಲ್ಲರೂ ಪೆಟ್ಟುತಿಂದರು. ಭಯೋತ್ಪಾದನೆ ಸೆರಗಿನಲ್ಲಿ ಕೆಂಡವನ್ನು ಕಟ್ಟಿಕೊಂಡಂತಹ ಅನುಭವ ಎಲ್ಲರಿಗೂ ಆಗತೊಡಗಿತು. ಎಲ್ಲರೂ ನೆರವಾಗಿ ಅದರ ವಿರುದ್ಧ ಸಮರ ಸಾರಿದರು. ಅದರ ಪರಿಣಾಮವಾಗಿ ಅದು ತಹಬದಿಗೆ ಬಂದಿತು ಎಂದು ನಿಟ್ಟುಸಿರು ಬಿಟ್ಟಾಗ ಬಂದಿತು ‘ಕರೋನ’ ಎಂಬ ಮಹಾಮಾರಿಯು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರಿತು. ಇದು ಮನುಷ್ಯನೇ ಹುಟ್ಟು ಹಾಕಿದ ಜೈವಿಕ ವೈರಸ್ ಎಂಬ ಸಂಶಯ ಅಲ್ಲಲ್ಲಿ ಹರಿದಾಡುತ್ತಿದೆ. ಇದರ ಪರಿಣಾಮವಾಗಿ ಮನುಷ್ಯ ತನ್ನ ನಾಶವನ್ನು ತಾನೇ ಮಾಡಿಕೊಳ್ಳತೊಡಗಿದನು.
‘ಕರೋನ’ ಎಂಬ ಮಹಾಮಾರಿಯು ಇಂದು ಒಂದು ರೀತಿಯ ಮೂರನೆಯ ಮಹಾಯುದ್ಧದ ತೀವ್ರತೆಯನ್ನು ಸಾರಿದ್ದು, ಒಂದು ವೇಳೆ ವಿಜ್ಞಾನದ ಆವಿಷ್ಕಾರ ಪರಿಣಾಮವಾಗಿ ಮೂರನೆಯ ಮಹಾಯುದ್ಧ ನಡೆದಿದ್ದರೆ ಎಷ್ಟು ಹಾನಿಯಾಗುತ್ತಿತ್ತೋ ಅಷ್ಟು ಹಾನಿಯು ಕರೋನ ವೈರಸ್‍ನಿಂದ ಆಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ. ಇದರ ಸಾಧಕ ಬಾಧಕಗಳ ತೀವ್ರತೆಯನ್ನು ಕಾಲವೇ ನಿರ್ಧರಿಸಬೇಕು. ಇದರ ಜನನವು ನಾಯಕರುಗಳ ಅಂಧ ದೇಶಾಭಿಮಾನ, ಸ್ವಾರ್ಥಪರ ಚಿಂತನೆಯೇ ಮೂಲ ಎಂಬುದು ನಗ್ನ ಸತ್ಯ. ಇಂದು ಜಾಗತಿಕ ಮಟ್ಟದಲ್ಲಿ ಜನರು ಎಚ್ಚೆತ್ತುಕೊಳ್ಳಬೇಕು. ವಿಶ್ವದಾದ್ಯಂತ ದೇಶಗಳ ಜನರು ನಾಯಕರುಗಳು ನಿರ್ಮಿಸುವ ಕಂದಕವನ್ನು ದಾಟಬೇಕು. ಮುಖಂಡರುಗಳ ಅಧಿಕಾರದ ವ್ಯಾಮೋಹ ಅದರ ಹಿಂದಿರುವ ಮರ್ಮ ಅರಿಯಬೇಕು. ಜಾಗತಿಕ ಮಾರುಕಟ್ಟೆಯ ವಿಸ್ತರಣೆ ಆರ್ಥಿಕತೆಯ ಬೆಳವಣಿಗೆಗೆ ನಾವು ಪ್ರಯತ್ನಿಸುತ್ತಿದ್ದೇವೆ. ಅದು ಇಂದು ನಮ್ಮ ನಾಶಕ್ಕೆ ಕಾರಣವಾಗಿದೆ. ಇಂತಹ ಅವಿಷ್ಕಾರಗಳಿಂದ ಮನುಕುಲವು ಪ್ರಯೋಜನವನ್ನು ಪಡೆಯಬೇಕು. ಆದರೆ ಅದೇ ಸ್ವಾರ್ಥಪರ ನಿಲುವು ನಮ್ಮ ಬದುಕನ್ನು ದುಸ್ಥರಗೊಳಿಸಿದೆ.
ಮನುಷ್ಯನ ವಿಕೃತ ಮನೋಭಾವವೇ ಇಂದು ಇಂತಹ ಪರಿಸ್ಥಿತಿಯನ್ನು ಎದುರಿಸಲು ಕಾರಣ. ಮನುಷ್ಯನಿಂದ ಭೂಮಂಡಲ ನಾಶವಾಗಿದೆ. ನಾಗರಿಕತೆಯನ್ನು, ತಂತ್ರಜ್ಞಾನವನ್ನು ರೂಢಿಸಿಕೊಂಡಂತೆ ನಾವು ಹೆಚ್ಚು ಹೆಚ್ಚಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಪ್ರಾಣಿಗಳು ಜೀವಿಸುವ ನೆಮ್ಮದಿಯ ಬದುಕು ನಮಗಿಲ್ಲ ಎಂಬುದನ್ನು ಕೊರೋನಾ ತೋರಿಸಿಕೊಟ್ಟಿತು. ಇಷ್ಟು ದಿನ ಪ್ರಾಣಿಗಳನ್ನು ಬಂದಿಸಿ ನಾವು ಸ್ವತಂತ್ರವಾಗಿದ್ದೆವು. ಇಂದು ನಾವು ಬಂದಿಗಳಾಗಿದ್ದೇವೆ. ಈ ಪರಿಣಾಮ ಪ್ರಕೃತಿಯಲ್ಲಿ ಅನೇಕ ಬದಲಾವಣೆ ಕಂಡುಬಂದದ್ದು ಅಲ್ಲಲ್ಲಿ ವರದಿಯಾಗುತ್ತಿದೆ. ನದಿಗಳು ಶುದ್ಧವಾದರೆ ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ತಹಬದಿಗೆ ಬಂದಿದೆ. ಅಲ್ಲಲ್ಲಿ ಕಂಡುಬರುವ ಕಸದ ಕೊಂಪೆಗಳು ಮಾಯವಾಗಿದೆ. ಜೀವ ಸಂಕುಲಗಳು ನಿರ್ಭೀತಿಯಿಂದ ಸಂಚರಿಸಲು ಆರಂಭಿಸಿವೆ. ಒಟ್ಟಿನಲ್ಲಿ ಪ್ರಕೃತಿಯಲ್ಲಿ ಶತಮಾನದಿಂದ ಕಂಡರಿಯದ ಬದಲಾವಣೆಯನ್ನು ಕಾಣುವಂತಾಯಿತು. ಇಂದು ದೇಶದ ಅಭಿವೃದ್ಧಿಗೆ ಜನರ ನೆಮ್ಮದಿಯ ಬದುಕಿಗೆ ನಾಯಕರುಗಳ ದೂರದ ಆಲೋಚನೆ ಇರಬೇಕಾಗಿತ್ತು. ಆದರೆ ಇಂದು ದುರಾಲೋಚನೆಯಾಗಿ ಪರಿವರ್ತನೆಯಾಗಿ ಮನುಕುಲವು ದುರಂತದೆಡೆಗೆ ಸಾಗಿದೆ.
ಇಂದು ವಿಶ್ವ ಮಟ್ಟದಲ್ಲಿ ಬದಲಾವಣೆಯ ಚಿಂತನೆಯಾಗಬೇಕು. ಕೊರೋನಾದಿಂದ ಬುದ್ಧಿ ಕಲಿಯಬೇಕು. ಇಂದಿನ ಪರಿಸ್ಥಿತಿಯಲ್ಲಿ ದೊಡ್ಡಣ್ಣನಿಂದ ಸಣ್ಣಣ್ಣನವರೆಗೂ ಪೆಟ್ಟು ತಿನ್ನುತ್ತಿದ್ದಾರೆ. ಪರಿಸ್ಥಿತಿ ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಯಾರಿಗೂ ಊಹಿಸಲೂ ಸಾಧ್ಯವಿಲ್ಲ. ಪರಿಸ್ಥಿತಿ ಕೈಚೆಲ್ಲಿದೆ. ವಿಶ್ವದ ಅಗ್ರಮಾನ್ಯ ರಾಷ್ಟ್ರಗಳು ಇದರಿಂದ ಹೈರಾಣಾಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಚಿಂತನೆ ನಡೆಸದಿದ್ದರೆ ಪರಿಸ್ಥಿತಿಯು ಕೈಮೀರುತ್ತದೆ. ನಾವು ಇದರ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಜೈವಿಕ ಯುದ್ಧಗಳು ನಮ್ಮ ಜೀವನದ ಅಂಗವಾಗುತ್ತದೆ.
ಭಾರತ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ವಿಶ್ವಮಟ್ಟದಲ್ಲಿ ಭಾರತವು ಇದರ ಬಗ್ಗೆ ಅರಿವು ಮೂಡಿಸಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ನಾಯಕರುಗಳು ಇದರಲ್ಲಿ ಯಶಸ್ವಿಯಾಗುವಲ್ಲಿ ಪ್ರಯತ್ನಿಸಬೇಕು. ಈ ಹಿಂದೆ ಕೂಡ ಭಾರತದ ಅನೇಕ ನಾಯಕರು ವಿಶ್ವ ಶಾಂತಿಗಾಗಿ ಪ್ರಯತ್ನಿಸಿ ಫಲಪ್ರದರಾಗಿದ್ದಾರೆ. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಇವರುಗಳು ಈ ನಿಟ್ಟಿನಲ್ಲಿ ಯಶಸ್ವಿಯಾಗಿರುವುದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಎಲ್ಲಾ ರಾಷ್ಟ್ರದ ನಾಯಕರುಗಳು ನಾನು, ನನ್ನದು ಎನ್ನುವುದನ್ನು ಬಿಟ್ಟು ಕಾರ್ಯ ನಿರ್ವಹಿಸಬೇಕು. ನಾವು ಯಾವ ಜಾಗತಿಕ, ಆರ್ಥಿಕ ಮಾರುಕಟ್ಟೆಗೆ ಪ್ರಯತ್ನಿಸಿ ಈಗಿನ ಪರಿಸ್ಥಿತಿಗೆ ಕಾರಣವಾದೆವೋ ಎಂಬುದನ್ನು ಅರಿಯಬೇಕು. ಆದರೆ ಎಲ್ಲರ ಆರ್ಥಿಕ ಪರಿಸ್ಥಿತಿಯು ಶೋಚನೀಯ ಸ್ಥಿತಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕಡಿವಾಣದ ಅವಶ್ಯಕತೆ ಇದೆ.
ವಾಟ್ಸಾಪ್ ನಲ್ಲಿ ಬಂದ ಸಂದೇಶವೊಂದು ಪ್ರಸ್ತುತ ಪರಿಸ್ಥಿತಿಗೆ ಕೈಗನ್ನಡಿ. “ಬದಲಿಸಲಾಗದ ಮನುಷ್ಯನ ವ್ಯಕ್ತಿತ್ವವನ್ನು ಪ್ರಕೃತಿ ಬದಲಿಸುತ್ತದೆ. ಇದೇ ಮನುಷ್ಯನಿಗೂ ಪ್ರಕೃತಿಗೂ ಇರುವ ವ್ಯತ್ಯಾಸ. ಕಾಲಾಯ ತಸ್ಮೈ ನಮಃ.”
ಬಾಳೆಯಡ ಕಿಶನ್ ಪೂವಯ್ಯ
(9448899554, 9448809553).