ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

01/05/2020

ಮಡಿಕೇರಿ ಮೇ 1 : ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿದ್ದ ವ್ಯಕ್ತಿಯ ಅಪರಾಧ ಸಾಬೀತಾದ ಹಿನ್ನೆಲೆ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ಹಾಗೂ 96 ಸಾವಿರ ರೂ. ದಂಡ ವಿಧಿಸಿದೆ.
2019 ಮಾ.12 ರಂದು ಕೇರಳ ರಾಜ್ಯದ ಮಾನಂದವಾಡಿಯ ಗ್ರಾಮವೊಂದರ ನಿವಾಸಿ ಸಿ.ಡಿ. ನಿತಿನ್ ಎಂಬವರು ಕೊಡಗು ಜಿಲ್ಲೆಯ ಪುಲಿಯೇರಿ ಗ್ರಾಮಕ್ಕೆ ತನ್ನ ಪತ್ನಿಯ ತವರು ಮನೆಗೆ ಬಂದಿದ್ದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಸಿ.ಪಿ.ಐ.ರವರಾದ ಕೆ.ಎನ್.ನಾಗೇಗೌಡ ಅವರು ಪ್ರಕರಣದ ತನಿಖೆಯನ್ನು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ವರದಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಆರೋಪಿ ಸಿ.ಡಿ.ನಿತಿನ್ ಗೆ ಶಿಕ್ಷೆ ವಿಧಿಸಿದರು.
ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾದ ಡಿ.ನಾರಾಯಣ ಅವರು ವಾದವನ್ನು ಸಮರ್ಪಕವಾಗಿ ಮಂಡಿಸಿದರು. ಈ ಪ್ರಕರಣದ ತನಿಖೆಯನ್ನು ಕೈಗೊಂಡ ತನಿಖಾಧಿಕಾರಿ ಕೆ.ಎನ್. ನಾಗೇಗೌಡ (ಹಿಂದಿನ ಸಿ.ಪಿ.ಐ. ಮಡಿಕೇರಿ ನಗರ ವೃತ್ತ) ಇವರ ಉತ್ತಮ ರೀತಿಯ ತನಿಖೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.