ದಲಿತ ಸಂಘರ್ಷ ಸಮಿತಿಯಿಂದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

02/05/2020

ಮಡಿಕೇರಿ ಮೇ 2 : ಮಡಿಕೇರಿ ಸಮೀಪದ ಮೇಕೇರಿಯ ಶಕ್ತಿನಗರದ ದಲಿತ ಹಾಗೂ ಬಡ ಕುಟುಂಬಗಳಿಗೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ದಿವಾಕರ್ ಅವರು ಕೊರೋನಾ ಸೋಂಕಿನ ಮುಂಜಾಗೃತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸರಕಾರದ ಆದೇಶವನ್ನು ಪಾಲಿಸುವಂತೆ ಕೋರಿಕೊಂಡ ಅವರು ದಲಿತ ಸಂಘರ್ಷ ಸಮಿತಿಯ ಜನಪರ ಕಾರ್ಯದ ಕುರಿತು ಶ್ಲಾಘಿಸಿದರು.
ಮೇಕೇರಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಮಾತನಾಡಿ ಬಡವರು ಹಾಗೂ ಕಾರ್ಮಿಕ ವರ್ಗದ ಜನತೆಗೆ ನೆರವಾಗುತ್ತಿರುವ ದಲಿತ ಸಂಘರ್ಷ ಸಮಿತಿ ಇತರರಿಗೆ ಮಾದರಿಯಾಗಿದೆ ಎಂದರು. ಸ್ಥಳೀಯ ಗ್ರಾಮಸ್ಥರ ಹಿತ ಕಾಯಲು ಗ್ರಾ.ಪಂ ಬದ್ಧವಾಗಿದ್ದು, ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವವರು ಯಾವುದೇ ಸಂದರ್ಭದಲ್ಲೂ ನೆರವನ್ನು ಕೇಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಸೋಂಕಿನ ತಡೆಗಾಗಿ ಜಾರಿಗೆ ಬಂದಿರುವ ಲಾಕ್ ಡೌನ್ ನಿಂದಾಗಿ ಜಿಲ್ಲೆಯ ಅನೇಕ ಕುಟುಂಬಗಳು ಆಹಾರಕ್ಕಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿದ್ದು, ಉಳ್ಳವರು ಇಲ್ಲದವರಿಗೆ ನೆರವು ನೀಡಬೇಕೆಂದು ಮನವಿ ಮಾಡಿದರು. ಸ್ಥಳೀಯ ಗ್ರಾ.ಪಂ ಕೂಡ ಬಡವರ್ಗದ ಮಂದಿಗೆ ಅಕ್ಕಿ ಸೇರಿದಂತೆ ಅಗತ್ಯ ಆಹಾರದ ಸಾಮಾಗ್ರಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಮಿತಿಯ ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ರವಿ, ಕೊಡಗು ಚಾನಲ್‍ನ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ರವಿಕುಮಾರ್, ಮೇಕೇರಿ ಗ್ರಾ.ಪಂ ಸದಸ್ಯೆ ಅರ್ಪಿತಾ ಸಂಧ್ಯಾ, ಗುತ್ತಿಗೆದಾರ ವಿಜಯ ಕುಮಾರ್ ಮತ್ತಿತರರು ಹಾಜರಿದ್ದರು. ಗ್ರಾಮಸ್ಥರು ಸಾಮಾಜಿಕ ಅಂತರ ಕಾಯ್ದುಕೊಂಡು ದಿನಸಿ ಕಿಟ್ ಗಳನ್ನು ವಿತರಿಸಿದರು.