ಹಸಿರ ಕೊಡಗಿನಲ್ಲಿ ಮುಂದುವರಿದ ಅಧಿಕಾರಿಗಳ ಕಣ್ಗಾವಲು

ಮಡಿಕೇರಿ ಮೇ 2 : ಕೊರೊನಾ ಮಹಾ ಮಾರಿಯ ನಿಯಂತ್ರಣಕ್ಕೆ ಇಡೀ ಭಾರತ ಎರಡನೇ ಲಾಕ್ ಡೌನ್ಗೆ ಒಳಗಾಗಿ ಮುಕ್ತಾಯದ ಹಂತವನ್ನು ಸಮೀಪಿಸುತ್ತಿರುವ ಬೆನ್ನಲ್ಲೆ, ಹಸಿರು ವಲಯದ ಜಿಲ್ಲೆಗಳಲ್ಲಿ ಒಂದಾಗಿರುವ ಗಡಿನಾಡು ಕೊಡಗು ನಿರ್ಬಂಧಗಳ ಸಡಿಲಿಕೆಯ ನಡುವೆಯೂ ಆತಂಕದ ನೆರಳು ಕಾಡುತ್ತಲೇ ಇದೆ.
ಕೊಡಗಿನಲ್ಲಿ ಇಲ್ಲಿಯವರೆಗೆ ಕೇವಲ ಒಂದು ಕೊರೊನಾ ಪ್ರಕರಣ ಪಾಸಿಟಿವ್ ಆಗಿದ್ದು, ಸಂಬಂಧಪಟ್ಟ ವ್ಯಕ್ತಿ ಗುಣಮುಖ ಹೊಂದಿ ಮನೆಗೆ ತೆರಳಿಯಾಗಿದೆ. ಮತ್ತೆ ಹೊಸ ಪ್ರಕರಣಗಳು ವರದಿಯಾಗಿಲ್ಲ. ಇದರಿಂದ ಸಂತುಷ್ಟಗೊಂಡು ಕೊಡಗು ಎಲ್ಲಾ ವ್ಯಾಪಾರ ವಹಿವಾಟು, ಜನ ಸಂಚಾರಕ್ಕೆ ತೆರೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಕಾರಣ, ಕೇರಳದ ಗಡಿ ಜಿಲ್ಲೆಗಳು ಮತ್ತು ಕೊಡಗನ್ನು ಒತ್ತಿಕೊಂಡಂತಿರುವ ಮೈಸೂರು ಜಿಲ್ಲೆ ರೆಡ್ ಜೋನ್ನ ಅಪಾಯದ ಸ್ಥಿತಿಯಲ್ಲಿರುವುದು.
ಕೊಡಗಿನ ಮಡಿಕೇರಿಯ ಕರಿಕೆ ವಿಭಾಗ ಕೇರಳದ ಕಾಸರಗೋಡು ಜಿಲ್ಲೆಯ ಪಕ್ಕದಲ್ಲೆ ಇರುವ ಪ್ರದೇಶ. ರೆಡ್ ಜೋನ್ನಲ್ಲಿ ಬರುವ ಕಾಸರಗೋಡಿನಲ್ಲಿ ಇಲ್ಲಿಯವರೆಗೆ 130 ಕ್ಕೂ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗಿದೆ ಎಂದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾದೀತು. ಕಾಸರಗೋಡಿನಲ್ಲಿ ಕೊರೊನಾ ಸಂಕ್ರಮಣದ ಆರಂಭದೊಂದಿಗೆ ಕೊಡಗು ಜಿಲ್ಲಾಡಳಿತ ಕರಿಕೆಯಲ್ಲಿ ಕೇರಳ ಸಂಪರ್ಕದ ರಸ್ತೆಯನ್ನು ಮುಚ್ಚುವ ಮೂಲಕ ಮಹತ್ವದ ಹೆಜ್ಜೆಯನ್ನಿಟ್ಟದ್ದು ಎಷ್ಟು ಉಪಯುಕ್ತವಾಗಿದೆ ಎನ್ನುವುದು ಈಗ ಅರಿವಿಗೆ ಬರಲಾರಂಭಿಸಿದೆ.
ದಕ್ಷಿಣ ಕೊಡಗಿನ ವೀರಾಜಪೇಟೆ ತಾಲ್ಲೂಕು ಕೇರಳದ ಕಣ್ಣೂರು ಮತ್ತು ಮಾನಂದವಾಡಿ ಜಿಲ್ಲೆಗಳನ್ನು ಸಂಪರ್ಕಿಸುವ ಮಾಕುಟ್ಟ ಮತ್ತು ಕುಟ್ಟ ಅಂತರರಾಜ್ಯ ಹೆದ್ದಾರಿಗಳನ್ನು ಹೊಂದಿದೆ. ಇವೆರಡು ರಸ್ತೆಗಳು ಪ್ರಸ್ತುತ ಮುಚ್ಚಲ್ಪಟ್ಟಿರುವುದರಿಂದ ನೆರೆ ರಾಜ್ಯದಿಂದ ಕೊರೊನಾ ಹರಡುವ ಸಾಧ್ಯತೆಗಳನ್ನು ಇಲ್ಲವಾಗಿಸುವ ಪ್ರಯತ್ನ ಹಿಂದೆಯೇ ನಡೆದಿದೆ ಮತ್ತು ಅದನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ.
ಮತ್ತೊಂದೆಡೆ ರೆಡ್ ಜೋನ್ನಲ್ಲಿ ಬರುವ ಮೈಸೂರು ಜಿಲ್ಲೆಯನ್ನು ಸಂಪರ್ಕಿಸುವ ಮಾರ್ಗಗಳನ್ನು ಮುಚ್ಚಲಾಗಿದ್ದು, ಮೇ3ರ ಲಾಕ್ ಡೌನ್ ಅಂತ್ಯದ ಬಳಿಕವೂ ಕೊಡಗು-ಮೈಸೂರು ನಡುವಿನ ಸಂಪರ್ಕಕ್ಕೆ ಅವಕಾಶ ದೊರಕುವುದು ಅತ್ಯಂತ ಕ್ಷೀಣ. ಈ ಎಲ್ಲಾ ಸುರಕ್ಷಿತ ಕ್ರಮಗÀಳಿಂದ ಕೊಡಗು ಹಸಿರು ವಲಯದಲ್ಲಿ ಕುಳಿತಿದೆ. ಕೊಂಚ ಎಚ್ಚರ ತಪ್ಪಿದರೂ ಹಸಿರು ಬಣ್ಣ ಬದಲಾಗುವುದಕ್ಕೆ ಹೆಚ್ಚಿನ ಸಮಯವೇನು ಬೇಕಾಗಿಲ್ಲ.
ಮಡಿಕೇರಿ ತಾಲ್ಲೂಕಿನ ಪಕ್ಕದಲ್ಲೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿಯೂ ಕೊರೊನಾ ಹಿನ್ನೆಲೆಯಲ್ಲಿ ಉತ್ತಮವಾಗಿಲ್ಲ. ಜಿಲ್ಲೆಯಲ್ಲಿ ಒಂದಷ್ಟು ನೆಮ್ಮದಿಯ ಪ್ರದೇಶವೆಂದು ಭಾವಿಸುವುದಾದಲ್ಲಿ ಅದು ಶನಿವಾರಸಂತೆ, ಕೊಡ್ಲಿಪೇಟೆ ವಿಭಾಗಗಳು. ಕಾರಣ, ಇವುಗಳು ಹಸಿರು ವಲಯಕ್ಕೆ ಸೇರಿರುವ ನೆರೆಯ ಹಾಸನ ಜಿಲ್ಲೆಯ ಒತ್ತಿನಲ್ಲಿರುವುದರಿಂದ ಒಂದಷ್ಟು ನೆಮ್ಮದಿಯಿಂದಿದೆ.
::: ಡಿಸಿ, ಎಸ್ಪಿ ಭೇಟಿ :::
ಲಾಕ್ ಡೌನ್ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಸಿಲುಕಿರುವ ಇತರೆ ರಾಜ್ಯ/ಜಿಲ್ಲೆಗಳ ಜನರು ಮತ್ತು ಹೊರ ಜಿಲ್ಲೆ/ರಾಜ್ಯಗಳಲ್ಲಿ ಸಿಲುಕಿರುವ ಕೊಡಗು ಜಿಲ್ಲೆಯ ಜನರು ಅವರವರ ಸ್ವಂತ ಊರುಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಹಿಂತಿರುಗುವಾಗ ಆರೋಗ್ಯ ತಪಾಸಣೆ ನಡೆಸಲು ಕುಶಾಲನಗರದ ಕೊಪ್ಪ ಚೆಕ್ ಪೋಸ್ಟ್ ಬಳಿ ತಪಾಸಣಾ ಕೇಂದ್ರ ತೆರೆಯಲಾಗಿದೆ. ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.