ಕೊಡಗು ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ತೆರಳುವವರಿಗಾಗಿ ಮಾರ್ಗಸೂಚಿ

ಮಡಿಕೇರಿ ಮೇ.2 : ಕಾರ್ಮಿಕರು ತಮ್ಮ ಅರ್ಜಿಯನ್ನು ಅಂತರ್ಜಾಲ ಪುಟ https://sevasindhu.karnataka.gov.in ನಲ್ಲಿ ಸಲ್ಲಿಸಬೇಕಿದೆ. ಯಾರೇ ಅರ್ಜಿದಾರರು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ, ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರ ಸಭೆಯನ್ನು ಸಂಪರ್ಕಿಸಿದಲ್ಲಿ ಉಚಿತ ರೂಪದಲ್ಲಿ ತಮ್ಮ ಅರ್ಜಿಯನ್ನು ನೋಂದಾಯಿಸಲಾಗುವುದು.
ಸ್ವೀಕರಿಸಿದ ಎಲ್ಲಾ ಅರ್ಜಿಗಳಿಗೆ ಪ್ರತ್ಯೇಕವಾದ ನೋಂದಣಿ ಸಂಖ್ಯೆ ಲಭ್ಯವಾಗಲಿದ್ದು, ಈ ಸಂಖ್ಯೆ ಮಾಹಿತಿಗೆ ಮತ್ತು ಮುಂದಿನ ವ್ಯವಹಾರಗಳಿಗೆ ಅನುಕೂಲಕರವಾಗಿದೆ. ಅರ್ಜಿ ನೋಂದಣಿಯಾದ ಬಳಿಕ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ ವತಿಯಿಂದ ಸಮೀಪದ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಧೃಢೀಕರಣ ಒದಗಿಸಲಾಗುತ್ತದೆ.
ಸರ್ಕಾರದ ಅನುಮತಿ ದೊರೆತ ನಂತರ ಜಿಲ್ಲಾಡಳಿತದ ವತಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಮುಖಾಂತರ ಕಳುಹಿಸಿಕೊಡಲಾಗುತ್ತದೆ. ಪ್ರಯಾಣದ ವೆಚ್ಚವನ್ನು ಪ್ರಯಾಣಿಕರು ಭರಿಸಬೇಕಿದೆ. ಈ ಬಸ್‍ಗಳು ನಿಗಧಿತ ಚೆಕ್‍ಪೋಸ್ಟ್ ಆದ ಹಾಸನ ಜಿಲ್ಲಾ ಗಡಿಭಾಗವಾದ ಶಿರಂಗಾಲ ಚೆಕ್‍ಪೋಸ್ಟ ಮೂಲಕ ಮಾತ್ರ ಸಂಚರಿಸಲಿದ್ದು, ಯಾವುದೇ ಬದಲಿ ಮಾರ್ಗಗಳು ಇರುವುದಿಲ್ಲ.
ಎಲ್ಲಾ ವಿಚಾರಗಳಿಗಾಗಿ ಉಪ ವಿಭಾಗಾಧಿಕಾರಿ ಅವರನ್ನು ಘಟನಾ ನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿದ್ದು, ರಾಜ್ಯ ನೋಡಲ್ ಅಧಿಕಾರಿಯವರ ಒಪ್ಪಿಗೆ ದೊರೆತ ನಂತರ ಈ ಅಧಿಕಾರಿಯವರು ಸಂಚಾರಕ್ಕೆ ಅನುಮತಿ ನೀಡುತ್ತಾರೆ. ಪ್ರಯಾಣಿಕರು ಸಂಚರಿಸುವ ವೇಳೆ ಗುರುತಿನ ಚೀಟಿ ಮತ್ತು ವಾಸ ಧೃಢೀಕರಣವನ್ನು ಜೊತೆಯಲ್ಲಿ ಇರಿಸಿಕೊಳ್ಳತಕ್ಕದ್ದು (ಸರ್ಕಾರ ನೀಡಿರುವ ಭಾಚಚಿತ್ರವಿರುವ ಯಾವುದಾದರು ಗುರುತಿನ ಚೀಟಿ).
ಯಾವುದೇ ವಲಸೆ ಕಾರ್ಮಿಕರು ರಾಜ್ಯದೊಳಗಿನ ಅವರ ಸ್ವಂತ ಸ್ಥಳಕ್ಕೆ ತೆರಳಲು ಇಚ್ಛಿಸಿದಲ್ಲಿ ಆನ್‍ಲೈನ್ ಮುಖಾಂತರ ನೋಂದಾಯಿಸುವ ಅಗತ್ಯತೆ ಇರುವುದಿಲ್ಲ. ಬದಲಾಗಿ ಕಾರ್ಮಿಕರ ವೈದ್ಯಕೀಯ ಧೃಢೀಕರಣದೊಂದಿಗೆ ಸಮೀಪದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆಗೆ ಸಂಬಂಧಪಟ್ಟ ಉದ್ಯೋಗದಾತರು, ಗುತ್ತಿಗೆದಾರರು, ಎಸ್ಟೇಟ್ ಮಾಲೀಕರು ಅರ್ಜಿ ಸಲ್ಲಿಸುವುದು ಮತ್ತು ಸ್ವ ಖರ್ಚಿನಲ್ಲಿ ಬಸ್ ವ್ಯವಸ್ಥೆ ಮಾಡುವುದು.
ಹೆಚ್ಚಿನ ಮಾಹಿತಿಗೆ ಕಂಟ್ರೋಲ್ ರೂಂ 1077 ಅಥವಾ ವಾಟ್ಸಪ್ ಸಂಖ್ಯೆ 8550001077 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.