ಹೊರ ರಾಜ್ಯಗಳಿಂದ ಕೊಡಗು ಜಿಲ್ಲೆಗೆ ಹಿಂತಿರುಗುವವರಿಗೆ ಮಾರ್ಗಸೂಚಿ

02/05/2020

ಮಡಿಕೇರಿ ಮೇ.2 : ಜಿಲ್ಲೆಗೆ ಹಿಂತಿರುಗುವವರು ಗುರುತಿನ ಚೀಟಿ ಮತ್ತು ಕೊಡಗು ಜಿಲ್ಲೆಯಲ್ಲಿರುವವರು ಎಂಬ ಬಗ್ಗೆ ವಾಸ ಧೃಢೀಕರಣ ಪತ್ರವನ್ನು ಜೊತೆಯಲ್ಲಿ ಇರಿಸಿಕೊಳ್ಳತಕ್ಕದ್ದು (ಸರ್ಕಾರ ನೀಡಿರುವ ಭಾವಚಿತ್ರವಿರುವ ಯಾವುದಾದರು ಗುರುತಿನ ಚೀಟಿ). ಜಿಲ್ಲೆಗೆ ಹಿಂತಿರುಗುವವರಿಗಾಗಿ ಮೈಸೂರು-ಕೊಡಗು ಜಿಲ್ಲೆ ಗಡಿಭಾಗದ ಕೊಪ್ಪ ಚೆಕ್‍ಪೋಸ್ಟ್ ಮುಖಾಂತರ ಆಗಮಿಸುವ ಮಾರ್ಗವನ್ನು ನಿಗಧಿಪಡಿಸಲಾಗಿದ್ದು, ಬೇರೆ ಯಾವುದೇ ಬದಲಿ ಮಾರ್ಗ ಇರುವುದಿಲ್ಲ.
ಜಿಲ್ಲೆಗೆ ಹಿಂತಿರುಗುವವರನ್ನು ಈ ಚೆಕ್‍ಪೋಸ್ಟ್‍ನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಈ ಕಾರ್ಯದ ಮೇಲುಸ್ತುವಾರಿಯನ್ನು ತಹಶೀಲ್ದಾರ್, ಸೋಮವಾರಪೇಟೆ ಇವರು ನಿರ್ವಹಿಸಲಿದ್ದಾರೆ. ಚೆಕ್‍ಪೋಸ್ಟ್‍ನಲ್ಲಿ ದಾಖಲಾತಿಗಳ ವಿವರವಾದ ಪರಿಶೀಲನೆ, ವೈದ್ಯಕೀಯ ತಪಾಸಣೆ ಮತ್ತು ನೋಂದಣಿ ಕಾರ್ಯವನ್ನು ಕಡ್ಡಾಯವಾಗಿ ನಡೆಸಿ ಸಂಪರ್ಕ ತಡೆ ಮೊಹರನ್ನು ಹಚ್ಚಲಾಗುವುದು.
ವೈದ್ಯಕೀಯ ವರದಿಯ ಆಧಾರದ ಮೇಲೆ ಎಲ್ಲಾ ಆಗಮಿತರನ್ನು 14 ದಿನಗಳ ಗೃಹ ಸಂಪರ್ಕ ತಡೆಯಲ್ಲಿ ಅಥವಾ ಸರ್ಕಾರಿ ಸಂಪರ್ಕ ತಡೆಯಲ್ಲಿ ಇರಿಸಲಾಗುವುದು. ಜಿಲ್ಲೆಗೆ ಆಗಮಿಸಿದವರನ್ನು ಕಡ್ಡಾಯವಾಗಿ ಸಂಪರ್ಕ ತಡೆಯಲ್ಲಿರಿಸುವ ಜವಾಬ್ದಾರಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ/ ಪಟ್ಟಣ ಪಂಚಾಯಿತಿ ಮತ್ತು ನಗರಸಭೆಯದ್ದಾಗಿದೆ.
ಕಾಲ ಕಾಲಕ್ಕೆ ಸರಿಯಾಗಿ ಆರೋಗ್ಯ ತಪಾಸಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸುವುದು. ಯಾರೇ ವ್ಯಕ್ತಿ ರಾಜ್ಯದೊಳಗಿನ ಇತರೆ ಜಿಲ್ಲೆಗಳಿಂದ (ಉದಾ:ಬೆಂಗಳೂರು, ಮೈಸೂರು ಮತ್ತಿತರ) ಹಿಂತಿರುಗುವುದಿದ್ದಲ್ಲಿ ಆನ್‍ಲೈನ್ ನೋಂದಣಿ ನಡೆಸುವ ಅಗತ್ಯತೆ ಇರುವುದಿಲ್ಲ. ಬದಲಾಗಿ ಅವರು ಅಥವಾ ಅವರ ಕುಟುಂಬ ಸದಸ್ಯರು ಮಾಹಿತಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆಗೆ ಸಲ್ಲಿಸುವುದು. ರಾಜ್ಯ ಸರ್ಕಾರದ ಅಂತರ್ ಜಿಲ್ಲಾ ಸಂಚಾರದ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಿದ ನಂತರ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ ಸಂಪರ್ಕಿಸಬಹುದಾಗಿದೆ.
ಜಿಲ್ಲೆಗೆ ಆಗಮಿಸುವವರ ಸಂಚಾರದ ವಿಚಾರವಾಗಿ ಉಪ ನಿರ್ದೇಶಕರು, ಕೃಷಿ ಇಲಾಖೆ ಇವರನ್ನು ನೋಡಲ್ ಅಧಿಕಾರಿಯವರನ್ನಾಗಿ ನೇಮಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಕಂಟ್ರೋಲ್ ರೂಂ 1077 ಅಥವಾ ವಾಟ್ಸಪ್ ಸಂಖ್ಯೆ 8550001077ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.