ಕೃಷಿ ಚಟುವಟಿಕೆ, ಅಗತ್ಯ ಮಾರುಕಟ್ಟೆ ಸೌಲಭ್ಯಕಗಕೆ ಅವಕಾಶ ಕಲ್ಪಿಸಲು ಮನವಿ

ಮಡಿಕೇರಿ ಮೇ.2 : ಜಿಲ್ಲಾಡಳಿತ ವತಿಯಿಂದ ಫೋನ್ ಇನ್ ಕಾರ್ಯಕ್ರಮವು ಶನಿವಾರ ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜು, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್, ನೋಡಲ್ ಅಧಿಕಾರಿ ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.
ಲಾಕ್‍ಡೌನ್ ಹಿನ್ನೆಲೆ ಪಿರಿಯಾಪಟ್ಟಣ, ಅರಕಲಕೂಡು, ಸುಳ್ಯ ಮತ್ತಿತರ ಗಡಿ ಪ್ರದೇಶದಲ್ಲಿ ಭೂಮಿ ಹೊಂದಿದ್ದು, ಕೃಷಿ ಚಟುವಟಿಕೆ ಕೈಗೊಳ್ಳಲು ಕೃಷಿ ಪಾಸ್ ನೀಡುವಂತೆ ಜಿಲ್ಲೆಯ ಕೃಷಿಕರು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ಜಂಟಿ ನಿದೇಶಕರಾದ ರಾಜು ಅವರು ಕೃಷಿ ಚಟುವಟಿಕೆಗೆ ಯಾವುದೇ ರೀತಿಯ ತೊಂದರೆ ಇಲ್ಲ. ಜಮೀನಿನ ದಾಖಲೆ ತೋರಿಸಿ ಕೃಷಿ ಚಟುವಟಿಕೆ ಕೈಗೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಬಾಳೆ ಬೆಳೆಯಲಾಗಿದ್ದು ಅಗತ್ಯ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು ಎಂದು ರೈತರೊಬ್ಬರು ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಶಿಧರ್ ಅವರು ಬಾಳೆ , ಹಸಿಮೆಣಸಿನ ಕಾಯಿ ಹಾಗೂ ಗೆಣಸಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಇತರರು ಹಾಜರಿದ್ದರು.