ಬಾಳೆಲೆ ದೇವನೂರು ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ

ಮಡಿಕೇರಿ ಮೇ 3 : ವೀರಾಜಪೇಟೆ ತಾಲೂಕಿನ ಬಾಳೆಲೆ ಸಮೀಪದಲ್ಲಿ ಭಾನುವಾರ ಬೆಳಗ್ಗೆ ಹುಲಿ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬಾಳೆಲೆ ದೇವನೂರು ಗ್ರಾಮದ ಅದೇಂಗಡ ದಿನೇಶ್ ಎಂಬವರು ತಮ್ಮ ಕುಟುಂಬದೊಂದಿಗೆ ವಾಹನದಲ್ಲಿ ಸಾಗುತ್ತಿದ್ದಾಗ ರಾಜಾಪುರ ಮಾರ್ಗದಲ್ಲಿ ವ್ಯಾಘ್ರವೊಂದು ರಸ್ತೆ ದಾಟುವುದನ್ನು ಕಂಡು ಆತಂಕ ಮತ್ತು ಆಶ್ಚರ್ಯಗೊಂಡಿದ್ದಾರೆ.
ದಕ್ಷಿಣ ಕೊಡಗಿನಲ್ಲಿ ಮೂರು ತಿಂಗಳ ಅವಧಿಯಲ್ಲಿ ಹುಲಿ ದಾಳಿಗೆ 20ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿದ್ದು, ವ್ಯಾಘ್ರವನ್ನು ಸೆರೆ ಹಿಡಿಯಲು 40 ಸಿಬ್ಬಂದಿಗಳು ಹಾಗೂ 5 ಆನೆಗಳ ಸಹಾಯದಿಂದ ಅರಣ್ಯ ಇಲಾಖೆ ಹಗಲು ರಾತ್ರಿ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಹುಲಿ ಕಣ್ಣಿಗೆ ಬಿದ್ದಿರಲಿಲ್ಲ.
ಇಲಾಖೆಯು ವ್ಯಾಘ್ರನನ್ನು ಸೆರೆ ಹಿಡಿಯಲು ನಡಿಕೇರಿ ಮತ್ತು ತೂಚಮಕೇರಿ ಗ್ರಾಮಗಳಲ್ಲಿ ಬೋನುಗಳನ್ನು ಅಳವಡಿಸಿದೆ. ಆದರೆ ಇದೀಗ ಬಾಳೆಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವ್ಯಾಘ್ರ ಕಾಣಿಸಿರುವುದು ಸಾರ್ವಜನಿಕರಲ್ಲಿ ಮತ್ತು ಇಲಾಖಾ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ.
ಮಾಹಿತಿ ಪಡೆದ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.