ಕೊಡಗಿನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ : ಕುಟ್ಟ, ಮಾಕುಟ್ಟ, ಕರಿಕೆ ವ್ಯಾಪ್ತಿಯಲ್ಲಿ ನಿರ್ಬಂಧ

03/05/2020

ಮಡಿಕೇರಿ ಮೇ 3 : ಕೋವಿಡ್ ಸಾಂಕ್ರಾಮಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ‘ಹಸಿರು’ ವಲಯವಾಗಿ ಗುರುತಿಸಲ್ಪಟ್ಟಿರುವ ಕೊಡಗು ಜಿಲ್ಲೆಯಲ್ಲಿ ಮೇ 4 ರಿಂದ ರಾಜ್ಯ ಸರ್ಕಾರದ ಸೂಚನೆಗಳ ಅನ್ವಯ ಮದ್ಯ ಮಾರಾಟಕ್ಕೆ ವಾರದ ನಾಲ್ಕು ದಿನಗಳ ಕಾಲ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರದ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರದಂದು ಮಾತ್ರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ಮದ್ಯವನ್ನು ಮದ್ಯದಂಗಡಿಗಳಲ್ಲಿ ಕುಳಿತು ಕುಡಿಯುವುದಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದರು.
ಇಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ- ಕೊರೊನಾ ಸಾಂಕ್ರಾಮಿಕ ಹರಡಬಹುದಾದ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗಗಳಾದ ಕರಿಕೆ, ಕುಟ್ಟ ಮತ್ತು ಮಾಕುಟ್ಟದ 5 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆಯೆಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭ ಸ್ಪಷ್ಟಪಡಿಸಿದರು.
ಚಿನ್ನಾಭರಣ ಅಂಗಡಿಗಳಿಗೆ ಅವಕಾಶ- ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತಿರುವುದರ ಜೊತೆಯಲ್ಲೆ ಜಿಲ್ಲಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಮಳಿಗೆಗಳನ್ನು ವಾರದ ನಾಲ್ಕು ದಿನಗಳ ಕಾಲ ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ತೆರೆಯಲು ಅವಕಾಶವನ್ನು ಕಲ್ಪಿಸಲಾಗಿದೆಯೆಂದು ಇದೆ ಸಂದರ್ಭ ಸ್ಪಷ್ಟಪಡಿಸಿದರು.
ಮಾಸ್ಕ್ ಧರಿಸದಿದ್ದಲ್ಲಿ ಮತ್ತು ಉಗುಳಿದರೆ ದಂಡ- ಕೊರನಾ ಸಾಂಕ್ರಾಮಿಕ ತಡೆಯ ಪ್ರಯತ್ನವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್( ಕರ್ಚೀಫ್) ಧರಿಸದಿದ್ದಲ್ಲಿ ಮತ್ತು ತಾವು ಸಂಚರಿಸುವ ಸ್ಥಳಗಳಲ್ಲಿ ಉಗುಳುವುದು ಕಂಡು ಬಂದಲ್ಲಿ ಅಂತಹವರಿಗೆ ಮಾ.4 ರಿಮದ 100 ರೂ. ದಂಡ ವಿಧಿಸಲಾಗುತ್ತದೆಂದು ತಿಳಿಸಿದರು.
ಅಗತ್ಯ ಸಾಮಗ್ರಿ ಸಾಗಾಟಕ್ಕೆ ಆಟೋಕ್ಕೆ ಅವಕಾಶ- ಲಾಕ್ ಡೌನ್ ಸಡಿಲಿಕೆಯ ದಿನಗಳಂದು ಸಾರ್ವಜನಿಕರಿಗೆ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯಲು, ಔಷಧಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುವುದಕ್ಕೆ ಪೂರಕವಾಗಿ ಆಟೋ ರಿಕ್ಷಾಗಳಿಗೆ ಅವಕಾಶ ಒದಗಿಸಲಾಗಿದೆ. ಆದರೆ, ಇಲ್ಲಿಯೂ ರಿಕ್ಷಾ ಚಾಲಕ ಮತ್ತು ಒಬ್ಬ ಪ್ರಯಾಣಿಕನಿಗೆ ಅವಕಾಶ ನೀಡಲಾಗಿದೆ. ಇದೇ ರೀತಿ ಟ್ಯಾಕ್ಸಿಗಳಲ್ಲಿ ಚಾಲಕ ಸೇರಿದಂತೆ ಇಬ್ಬರಿಗೆ ಅವಕಾಶ ಒದಗಿಸಲಾಗಿದೆಯೆಂದು ಜಿಲ್ಲಾಧಿಕಾರಿಗಳು ಮಾಹಿತಿಯನ್ನಿತ್ತರು.
ಬಸ್ ಸಂಚಾರಕ್ಕೆ ಅವಕಾಶವಿಲ್ಲ- ಎರಡನೇ ಲಾಕ್ ಡೌನ್ ಮುಕ್ತಾಯಗೊಳ್ಳುವ ಹಂತದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅವಕಾಶವನ್ನ ನೀಡಿಲ್ಲವೆಂದು ಸ್ಪಷ್ಪಪಡಿಸಿದ ಅವರು, ಉಳಿದ ಎಲ್ಲಾ ನಿರ್ಬಂಧಗಳು ಹಿಂದಿನಂತೆಯೇ ಮುಂದುವರಿಯಲಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‍ಪಿ ಡಾ. ಸುಮನ್ ಪನ್ನೇಕರ್, ಡಿಹೆಚ್‍ಒ ಡಾ. ಮೋಹನ್ ಉಪಸ್ಥಿತರಿದ್ದರು.