ಸರ್ಕಾರದ ವಿರುದ್ಧ ಡಿಕೆಶಿ ವಾಗ್ಧಾಳಿ

04/05/2020

ಬೆಂಗಳೂರು ಮೇ 3 : ವಲಸೆ ಕೂಲಿ ಕಾರ್ಮಿಕರ ಕಷ್ಟ ಸುಖಗಳನ್ನು ಸರ್ಕಾರದ ಒಬ್ಬ ಸಚಿವಾರಗಲಿ, ಪ್ರತಿನಿಧಿಗಳಾಗಲಿ ಬಂದು ಆಲಿಸಿಲ್ಲ. ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಾಯಕರ ತಂಡ ಇಂದು ನಗರದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ ತಮ್ಮೂರುಗಳಿಗೆ ಪ್ರಯಾಣಿಸಲು ಸಿದ್ದರಾಗಿ ಬಂದಿದ್ದ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಲು ಬಂದರು. ಬಸ್ಸಿನೊಳಗೆ ಕುಳಿತಿದ್ದ ಕಾರ್ಮಿಕರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಖುದ್ದು ವಿಚಾರಿಸಿದರು. ವಿವಿಧ ಊರುಗಳಿಗೆ ತೆರಳಲು ಬಂದಿದ್ದ ಮಹಿಳೆಯರು, ಮಕ್ಕಳನ್ನು ಮಾತನಾಡಿಸಿದರು.
ಸರ್ಕಾರ ಕೂಲಿ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಲು ಇನ್ನೂ ವ್ಯವಸ್ಥೆಗಳನ್ನು ಸರಿಯಾಗಿ ಮಾಡಿಲ್ಲ. ಜನರು ಇಲ್ಲಿಗೆ ಬಂದು ಇನ್ನೂ ಆತಂಕದಲ್ಲಿದ್ದಾರೆ. ನಾವಿಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಸರ್ಕಾರದ ಒಬ್ಬ ಸಚಿವರುಗಳೂ ಬಾರದ ಕಾರಣ ಜನರ ಕಷ್ಟ ಆಲಿಸಲು ಬಂದಿದ್ದೇವೆ. ಇಲ್ಲಿ ಏನು ನಡೆಯುತ್ತಿದೆ ಎಂದು ಮಾಧ್ಯಮಗಳಿಂದಷ್ಟೇ ಗೊತ್ತಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.