ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ವಾಹನ ಚಾಲಕರಿಗೆ ಕಿಟ್ ವಿತರಣೆ

04/05/2020

ಗೋಣಿಕೊಪ್ಪಲು ಮೇ 4 : ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಗೋಣಿಕೊಪ್ಪಲಿನ ಕಾರು, ಜೀಪು, ವ್ಯಾನ್ ಮತ್ತು ಲಾರಿ ಚಾಲಕರುಗಳಿಗೆ ದಿನನಿತ್ಯ ಗೃಹೋಪಯೋಗಿ ವಸ್ತುಗಳ ಕಿಟ್, ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಿದರು.
ಈ ಸಂದರ್ಭ ಮಾತನಾಡಿದ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ‌ಬೋಧಸ್ವರೂಪಾನಂದಜೀ ಮಹರಾಜ್ ಪ್ರಪಂಚಕ್ಕೆ ಮಾಹಾಮಾರಿಯಾಗಿ ಬಂದಿರುವ ಕೊರೊನಾವನ್ನು ನಿಷ್ಕ್ರಿಯ ಗೊಳಿಸುವ ಕಡೆಗೆ ನಾವು ಸಾಗಬೇಕು ಮತ್ತು ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು. ಜನಜೀವನ ಕಷ್ಟದಲ್ಲಿ ಸಾಗುತ್ತಿದೆ. ವಾಹನ ಚಾಲಕರು ಮತ್ತು ದಿನನಿತ್ಯ ಕೆಲಸದಿಂದಲೇ ಜೀವನ ಸಾಗಿಸುವಂತಹವರಿಗೆ ಆಶ್ರಮದ ವತಿಯಿಂದ ಸಾದ್ಯವಾದಷ್ಟು ಸಹಾಯ ಮಾಡುತ್ತಿರುವುದಾಗಿ ನುಡಿದರು.
ಈಗಾಗಲೇ ಜಿಲ್ಲೆಯ ಆಟೋಚಾಲಕರಿಗೆ, ಜಿಲ್ಲೆಯ ಹಲವು ಗ್ರಾಮಗಳ ಬಡಬಗ್ಗರಿಗೆ ಆಶ್ರಮದಿಂದ ಆಹಾರದ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಒದಗಿಸಲಾಗಿದೆ ಎಂದರು.
ಗೋಣಿಕೊಪ್ಪಲು ವಾಹನ ಚಾಲಕರ ಸಂಘದ ಗೌರವಾಧ್ಯಕ್ಷ, ಜಿಲ್ಲಾ ಪಂಚಾಯತಿ ಸದಸ್ಯ ಸಿ. ಕೆ. ಬೋಪಣ್ಣ ಮಾತನಾಡಿ, ಇಂದಿನ ಕ್ಲಿಷ್ಟಕರ ಸಂದರ್ಭದಲ್ಲಿ ನೀಡುತ್ತಿರುವ ಸಹಾಯ ಹಸ್ತ ವಾಹನ ಚಾಲಕರಿಗೆ ಬಹಳಷ್ಟು ಉಪಕಾರವಾಗಲಿದೆ ಎಂದರು.
ನಂತರ ಮಾತನಾಡಿದ ಉದ್ಯಮಿ ಚಂದನ್ ಕಾಮತ್ ಶ್ರೀ ರಾಮಕೃಷ್ಣ ಆಶ್ರಮವು ಜನರ ಸಂಕಷ್ಟದ ಸಮಯದಲ್ಲಿ ಅವರಿಗೆ ಬೇಕಾದ ಸಹಾಯ ಹಸ್ತ ನೀಡುತ್ತಿದೆ. ಅದರ ಸದುಪಯೋಗ ಪಡೆದುಕೊಂಡು ಕರೋನಾ ಸಮಸ್ಯೆಯ ನಂತರ ಶ್ರೀ ರಾಮಕೃಷ್ಣ ವಿವೇಕಾನಂದರ ತತ್ವ ಆದರ್ಶಗಳನ್ನು ಪಾಲಿಸಿ ಮುಂದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದರು.
ಕಾರು, ಜೀಪು, ವ್ಯಾನ್ ಮತ್ತು ಲಾರಿ ಚಾಲಕರುಗಳಿಗೆ ದಿನನಿತ್ಯದ ಆಹಾರದ ಕಿಟ್, ಮಾಸ್ಕ್ ಮತ್ರು ಸ್ಯಾನಿಟೈಸರ್ ವಿತರಿಸಲಾಯಿತು.
ಅಲ್ಲದೆ ಕೋಟೂರು, ಬಲ್ಯಮಂಡೂರು, ಚಿಕ್ಕಮಂಡೂರು ಮತ್ತು ಬೆಸಗೂರು ಗ್ರಾಮದವರಿಗೆ 154 ದಿನನಿತ್ಯದ ಆಹಾರದ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷ ಎಂ.ಪಿ.ಕೇಶವ ಕಾಮತ್ , ಚಾಲಕರ ಸಂಘದ ಅಧ್ಯಕ್ಷ , ಕಾರ್ಯದರ್ಶಿ ಮತ್ತು ಸದಸ್ಯರು ಉಪಸ್ಥಿತರಿದ್ದರು.