ಲಾಕ್‍ಡೌನ್ ಸಡಿಲಿಕೆ : ಗಡಿಭಾಗದಲ್ಲಿ ಬಿಗಿ ಬಂದೋಬಸ್ತ್

05/05/2020

ಮಡಿಕೇರಿ ಮೇ 4 : ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಹೊರ ತೆರಳುವ ಹಾಗೂ ಜಿಲ್ಲೆಗೆ ಆಗಮಿಸುವವರ ಸಂಖ್ಯೆ ಹೆಚ್ಚಳವಾಗಲಿರುವ ಹಿನ್ನೆಲೆಯಲ್ಲಿ ಕೊಡಗು ಗಡಿ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.
ಜಿಲ್ಲೆಗೆ ಆಗಮಿಸುವ ಮತ್ತು ಜಿಲ್ಲೆಯಿಂದ ತೆರಳುವವರ ಬಗ್ಗೆ ಪೊಲೀಸ್ ಇಲಾಖೆಯಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ. ಮತ್ತೊಂದು ಭಾಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ಕೋವಿಡ್-19 ತಪಾಸಣಾ ಕೇಂದ್ರದಲ್ಲಿ ವಲಸಿಗರ ಆರೋಗ್ಯ ತಪಾಸಣೆ ಕಾರ್ಯ ಕೈಗೊಳ್ಳಲಾಗಿದೆ.
ಇತರೆಡೆಗಳಿಂದ ಜಿಲ್ಲೆಗೆ ಆಗಮಿಸುವವರನ್ನು ಥರ್ಮಲ್ ಸ್ಕ್ಯಾನ್‍ಗೆ ಒಳಪಡಿಸಿ ಜ್ವರ ತಪಾಸಣೆ ಮಾಡಿ ಸೀಲ್ ಹಾಕುವ ಮೂಲಕ ಹೋಂ ಕ್ವಾರಂಟೇನ್‍ಗೆ ಒಳಪಡಿಸಲಾಗುತ್ತಿದೆ.
ಈ ಎರಡೂ ಸ್ಥಳಗಳಿಗೆ ಸೋಮವಾರ ಭೇಟಿ ನೀಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ದಾಖಲೆಗಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ ಸಿಬ್ಬಂದಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಶಾಸಕರು ತಪಾಸಣಾ ನಿರತ ಅಧಿಕಾರಿ, ಸಿಬ್ಬಂದಿಗಳಿಗೆ ಪಾನೀಯ ವಿತರಣೆ ಮಾಡಿದರು.
ಕೊಡಗು ಜಿಲ್ಲೆ ಹಸಿರುವ ವಲಯದಲ್ಲಿರುವ ಕಾರಣ ಮತ್ತಷ್ಟು ಎಚ್ಚರವಹಿಸುವುದು ಅಗತ್ಯ. ಜಿಲ್ಲೆಗೆ ಪ್ರತಿದಿನ ಕುಶಾಲನಗರ ಮತ್ತು ಸಂಪಾಜೆ ಗಡಿ ಗೇಟ್ ಮೂಲಕ ನೂರಾರು ಮಂದಿ ಪ್ರವೇಶಿಸುತ್ತಿದ್ದಾರೆ. ಸುಮಾರು 3 ಸಾವಿರ ಮಂದಿ ಜಿಲ್ಲೆಗೆ ಆಗಮಿಸಲಿರುವುದಾಗಿ ಜಿಲ್ಲಾಡಳಿತದ ನಿರೀಕ್ಷೆಯಿದೆ. ಬಂದವರನ್ನು ಸೂಕ್ತವಾಗಿ ತಪಾಸಣೆಗೆ ಒಳಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಡಿವೈಎಸ್ಪಿ ಎಚ್.ಎಂ.ಶೈಲೇಂದ್ರ, ತಹಶೀಲ್ದಾರ್ ಗೋವಿಂದರಾಜು, ವೃತ್ತ ನಿರೀಕ್ಷಕ ಎಂ.ಮಹೇಶ್, ನಗರ ಠಾಣಾಧಿಕಾರಿ ಗಣೇಶ್, ತಾಲೂಕು ಆರೋಗ್ಯ ಅಧಿಕಾರಿ ಶ್ರೀನಿವಾಸ್, ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಸುಕುಕುಮಾರ್, ಕಂದಾಯಾಧಿಕಾರಿ ಮಧುಸೂದನ್, ವೈದ್ಯ ಡಾ.ಎಸ್.ಎಂ.ಭರತ್, ಜನಪ್ರತಿನಿಧಿಗಳು ಹಾಜರಿದ್ದರು.