30 ಜಿಲ್ಲೆಗಳ ಸಮಗ್ರ ಕೃಷಿ ಅಭಿವೃದ್ಧಿ ವರದಿ ಶೀಘ್ರ ಮುಖ್ಯಮಂತ್ರಿಗೆ ಸಲ್ಲಿಕೆ : ಮಡಿಕೇರಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್

05/05/2020

ಮಡಿಕೇರಿ ಮೇ 5 : ಲಾಕ್‍ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ರೀತಿ ತೊಂದರೆಯಾಗದಂತೆ ಸರ್ಕಾರ ಗಮನ ಹರಿಸಿದೆ. ಕೃಷಿ ಇದ್ದಲ್ಲಿ ಮಾತ್ರ ಪ್ರತಿಒಬ್ಬರಿಗೂ ಅನ್ನ, ಆಹಾರ ದೊರೆಯಲು ಸಾಧ್ಯ. ಆ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ತಿಳಿಸಿದ್ದಾರೆ.
ನಗರದ ಜಿ.ಪಂ.ನೂತನ ಭವನದಲ್ಲಿ ಅಧಿಕಾರಿಗಳ ಜತೆ ಸಭೆ ಹಾಗೂ ರೈತರಿಂದ ಸಲಹೆ ಮಾಹಿತಿ ಪಡೆಯುವ ಸಂದರ್ಭ ಮಾತನಾಡಿದ ಸಚಿವರು, ಈಗಾಗಲೇ ರಾಜ್ಯದ 30 ಜಿಲ್ಲೆಗಳಿಗೂ ಭೇಟಿ ನೀಡಿ ಲಾಕ್‍ಡೌನ್ ಸಂದರ್ಭ ಕೃಷಿ ಚಟುವಟಿಕೆ ರೈತರ ಕುಂದು-ಕೊರತೆಯ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈಗಾಗಲೆ 19 ಜಿಲ್ಲೆಗಳ ಕೃಷಿ ಬಗ್ಗೆ ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸಲಾಗಿದೆ. 30 ಜಿಲ್ಲೆಗಳ ಕೃಷಿ ಚಟುವಟಿಕೆಯ ಸಮಗ್ರ ವರದಿಯನ್ನು ಶೀಘ್ರವೇ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಪ್ರಕಟಿಸಿದರು.
ರೈತರು ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಬೇಕು. ಯಾವುದೇ ಬ್ಯಾಂಕುಗಳು, ಸಹಕಾರ ಸಂಘಗಳಿಂದ ಸಾಲವನ್ನು ವಸೂಲಿ ಮಾಡುತ್ತಿಲ್ಲ. ರೈತರಿಗೆ ಯಾವುದೇ ರೀತಿಯ ಒತ್ತಡ ಹೇರದಂತೆ ಬ್ಯಾಂಕ್‍ಗಳಿಗೆ ಸರ್ಕಾರ ಸೂಚಿಸಿದೆ ಎಂದು ಬಿ.ಸಿ ಪಾಟೀಲ್ ಅವರು ತಿಳಿಸಿದರು.
ಕೃಷಿ ಚಟುವಟಿಕೆ ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಅವರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ರೈತರ ಸಂಕಷ್ಟ ನಿವಾರಿಸಲು ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದರು.
ರಸಗೊಬ್ಬರ ಮತ್ತು ಬಿತ್ತನೆ ಬೀಜ ಸಾಕಷ್ಟು ದಾಸ್ತಾನು ಇದ್ದು, ಅದನ್ನು ಬೇಡಿಕೆಗೆ ತಕ್ಕಂತೆ ಪೂರೈಸಲಾಗುವುದು. ಟ್ರ್ಯಾಕ್ಟರ್ ಮತ್ತು ಟಿಲ್ಲರ್‍ನ್ನು ಒದಗಿಸಲಾಗುವುದು. ಟಾರ್ಪಲ್‍ನ್ನು ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಸಚಿವರು ನುಡಿದರು.
ಕೃಷಿ ಅಧಿಕಾರಿಗಳು ರೈತರ ಪರವಾಗಿ ಹಾಗೂ ರೈತರ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಕೃಷಿ ಸಂಬಂಧ ಔಷಧಿಗಳನ್ನು ಹಾರ್ಡ್‍ವೇರ್ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವುದು ದುರಂತ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಔಷಧಿಯಲ್ಲಿ ರೈತರಿಗೆ ಮೋಸ ಮಾಡಬಾರದು. ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣ ಸಂಬಂಧ ಅರಣ್ಯ ಸಚಿವರನ್ನು ಸ್ಥಳೀಯ ಶಾಸಕರೊಂದಿಗೆ ಭೇಟಿ ಮಾಡಿ ಮನವಿ ಮಾಡಲಾಗುವುದು. ರೈತರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ರೈತರಿಗೆ ಪ್ರಕೃತಿ ವಿಕೋಪದಿಂದ ಬೆಳೆಹಾನಿಯನ್ನು ಇದುವರೆಗೆ ಎಷ್ಟು ಮಂದಿ ರೈತರಿಗೆ ಪರಿಹಾರ ನೀಡಲಾಗಿದೆ ಎಂಬ ಪಟ್ಟಿ ಒದಗಿಸಬೇಕು. ಯಾವ ರೈತರ ಜಮೀನಿನಲ್ಲಿ ಮಣ್ಣು ಪರೀಕ್ಷೆ ಮಾಡಲಾಗಿದೆ ಎಂಬ ಪಟ್ಟಿ ನೀಡುವಂತೆ ತಿಳಿಸಿದರು.
ರೈತರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜನವರಿ ತಿಂಗಳಿನ ಒಳಗೆ ಸುಣ್ಣವನ್ನು ಪೂರೈಸಬೇಕು. ಕೃಷಿ ಔಷಧಿಗಳನ್ನು ಪರಿಶೀಲಿಸಿ ರೈತರಿಗೆ ನೀಡಬೇಕು ಎಂದು ಅವರು ಹೇಳಿದರು. ರೈತರಿಗೆ ಉತ್ತಮ ಗುಣಮಟ್ಟದ ಟ್ರ್ಯಾಕ್ಟರ್ ಟಿಲ್ಲರ್ ಒದಗಿಸಬೇಕು ಎಂದು ಅವರು ಹೇಳಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಭತ್ತ ಖರೀದಿಯನ್ನು ಆದಷ್ಟು ಆಯಾ ಸಂದರ್ಭದಲ್ಲಿಯೇ ಪೂರ್ಣಗೊಳಿಸಬೇಕು. ಭತ್ತ ಖರೀದಿಸಿದ ಹಣವನ್ನು ತಕ್ಷಣವೇ ರೈತರಿಗೆ ನೀಡಬೇಕು. ಟಾರ್ಪಲ್‍ನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರಿಗೆ ನೀಡಬೇಕು. ಕೃಷಿಹೊಂಡ ಸೌಲಭ್ಯವನ್ನು ಸಣ್ಣ ರೈತರಿಗೂ ಕಲ್ಪಿಸಬೇಕು. ಎಂದು ಅವರು ಸಲಹೆ ಮಾಡಿದರು.
ವಿಧಾನಪರಿಷತ್ ಸದಸದ್ಯರಾದ ಸುನೀಲ್ ಸುಬ್ರಮಣಿ ಅವರು ಮಾತನಾಡಿ ಕೃಷಿ ಇಲಾಖೆಯಿಂದ ಕೃಷಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆದರೆ ಜನಪ್ರತಿನಿಧಿಗಳನ್ನು ಏಕೆ ಆಹ್ವಾನ ಮಾಡಿಲ್ಲ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಕೃಷಿ ಅಭಿಯಾನ ಕಾರ್ಯಕ್ರಮವನ್ನು ಎಲ್ಲೆಲ್ಲಿ ಆಯೋಜಿಸಲಾಗಿದೆ ಪಟ್ಟಿ ನೀಡುವಂತೆ ಸೂಚಿಸಿದರು. ಸರ್ಕಾರಿ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದು ಅವರು ಹೇಳಿದರು.
ವಿಧಾನಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿನ ಭತ್ತದ ಗದ್ದೆಗಳಲ್ಲಿ ಪ್ರಕೃತಿ ವಿಕೋಪದಿಂದಾಗಿ ಹೂಳು ತುಂಬಿದ್ದು, ಇದನ್ನು ತೆಗೆಸಬೇಕು. ಈ ಕಾರ್ಯಕ್ರಮಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸಚಿವರಲ್ಲಿ ಅವರು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ ಅವರು ಜಿಲ್ಲೆಯಲ್ಲಿ ರಸಗೊಬ್ಬರವನ್ನು ಇನ್ನಷ್ಟು ದಾಸ್ತಾನು ಮಾಡಿಕೊಳ್ಳಬೇಕು. ಹಾರ್ಡ್‍ವೇರ್ ಅಂಗಡಿಗಳಲ್ಲಿ ಕೃಷಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದರೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಸಲಹೆ ಮಾಡಿದರು.
ರೈತರ ಪರವಾಗಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷರಾದ ಮನು ಸೋಮಯ್ಯ ಅವರು, ಒಂದೂವರೆ ವರ್ಷದ ಹಿಂದೆ ರೈತರೊಬ್ಬರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಪರಿಹಾರವನ್ನು ತಲುಪಿಸುವಂತೆ ಮನವಿ ಮಾಡಿದರು. ಕೃಷಿ ತೋಟಗಾರಿಕಾ ಬೆಳೆಗಳ ‘ಶಿಥಲೀಕರಣ ಘಟಕ’ ಸ್ಥಾಪಿಸಬೇಕು. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ತೋಡು, ಬದುಗಳ ನಿರ್ಮಾಣಕ್ಕೆ ವೇಗ ನೀಡಬೇಕು. ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಿಸಲು ಕೊಡಗು ಜಿಲ್ಲೆಯ ಅರಣ್ಯ ಗಡಿ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಬೇಕು. ವನ್ಯ ಪ್ರಾಣಿಗಳ ಹಾನಿಗೆ ಪರಿಹಾರ ಹೆಚ್ಚಿಸಬೇಕು ಎಂದು ಅವರು ಮನವಿ ಮಾಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜು ಅವರು ಕೃಷಿ ಇಲಾಖೆಯ ಕಾರ್ಯಕ್ರಮಗಳು, ಪರಿಹಾರ ವಿತರಣೆ ಮತ್ತಿತರ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿ.ಪಂ.ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಆರ್ ಮಂಜುಳ, ಜಿ.ಪಂ.ಸದಸ್ಯರ ಮೂಕೊಂಡ ಪಿ.ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಹೆಚ್ಚುವರಿ ಜಿಲ್ಲಾಧಿಕಾರಿ ಡಾ,ಸ್ನೇಹ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ ಇತರರು ಹಾಜರಿದ್ದರು.