ಎಕರೆಗೆ 10 ಸಾವಿರ ರೂ. ಸಹಾಯಧನಕ್ಕೆ ಜಿ.ಪಂ ಅಧ್ಯಕ್ಷರ ಮನವಿ

05/05/2020

ಮಡಿಕೇರಿ ಮೇ 5 : ಕೊಡಗು ಜಿಲ್ಲೆಯಲ್ಲಿ ಭತ್ತ ಕೃಷಿಯು ಲಾಭದಾಯಕವಾಗದೆ ಇರುವುದರಿಂದ ಹಲವು ರೈತರು ಭತ್ತ ಕೃಷಿಯ ಮಾಡುವುದನ್ನು ಕೈಬಿಟ್ಟಿದ್ದಾರೆ/ ಬಿಡುತ್ತಿದ್ದಾರೆ. ಭತ್ತ ಕೃಷಿಗೆ ಒತ್ತು ನೀಡುವ ದೃಷ್ಟಿಯಿಂದ ಪ್ರತಿ ಎಕರೆಗೆ 10 ಸಾವಿರ ರೂ ನಂತೆ ಸಹಾಯಧನವನ್ನು ನೀಡಲು ಕ್ರಮ ಕೈಗೊಳ್ಳಬೇಕಾಗಿ ಮತ್ತು ಭತ್ತ ಕೃಷಿಯು ಹೆಚ್ಚಾದರೆ ಅಂತರ್ಜಲ ಮಟ್ಟವೂ ಸಹ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಕೃಷಿ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯ 16 ಹೋಬಳಿಗಳಲ್ಲಿ 3 ಹೋಬಳಿಯಲ್ಲಷ್ಟೆ ಕೃಷಿಧಾರ-ಯಂತ್ರೋಪಕರಣ ಯೋಜನೆ ಕಾರ್ಯಗತವಾಗುತ್ತಿದೆ. ಪ್ರಕೃತಿ ವಿಕೋಪ ಮತ್ತು ಕೊರೊನಾ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ರೈತರು ಕಂಗೆಟ್ಟಿದ್ದು, ಕೃಷಿ ಚಟುವಟಿಕೆಯಲ್ಲಿ ಚೇತರಿಕೆ ಸಾಧ್ಯವಾಗುತ್ತಿಲ್ಲ. ಎಲ್ಲಾ ಹೋಬಳಿಗಳಲ್ಲಿಯೂ ಬಾಡಿಗೆ ಆಧಾರಿತ ವ್ಯವಸಾಯ ಉಪಕರಣಗಳ ಗೋಡಾನ್‍ಗಳನ್ನು ನಿರ್ಮಾಣ ಮಾಡಿ ಕೊಡಗಿನ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಜಿ.ಪಂ.ಅಧ್ಯಕ್ಷರು ಕೃಷಿ ಸಚಿವರಲ್ಲಿ ಮನವಿ ಕೋರಿದರು.
ಸ್ಪಿಂಕ್ಲರ್ ಪೈಪ್, ಟಾರ್ಪಲ್, ಸುಣ್ಣ, ಗೊಬ್ಬರ, ಕಳೆನಾಶಕ ಹಾಗೂ ಇತರ ಕೃಷಿ ಪರಿಕರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಹಾಯಧನ ರೂಪದಲ್ಲಿ ನೀಡಲು ಕ್ರಮವಹಿಸಿ. ಕೃಷಿ/ ತೋಟಗಾರಿಕೆ ಬೆಳೆಗಳನ್ನು ಶೇಖರಣೆ/ ಸಂರಕ್ಷಣೆ ಮಾಡಲು ಜಿಲ್ಲೆಯ ಪ್ರತಿ ಹೋಬಳಿಗೆ ತಲಾ ಒಂದು ಶೇಖರಣಾ ಘಟಕವನ್ನು ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರಲ್ಲಿ ಮನವಿ ಮಾಡಿದ್ದಾರೆ.