ಕೃಷಿ ಅಧಿಕಾರಿಗಳ ಕಾರ್ಯ ವೈಖರಿಗೆ ಸಚಿವ ಬಿ.ಸಿ.ಪಾಟೀಲ್ ಅಸಮಾಧಾನ

05/05/2020

ಮಡಿಕೇರಿ ಮೇ 5 : ಕೃಷಿ ಇಲಾಖೆ ರೈತ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಕೃಷಿಕರ ಸಂಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸಬೇಕು. ಆದರೆ ಕೊಡಗು ಜಿಲ್ಲೆಯಲ್ಲಿ ಪರಿಸ್ಥಿತಿ ಹೀಗೆ ಇಲ್ಲವೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೊಡಗಿನ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಇತರೆ ಜಿಲ್ಲೆÉಗಳಂತೆ ಕೊಡಗಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತರ ಅಗತ್ಯತೆಗಳಿಗೆ ಸ್ಪಂದಿಸಿ, ಅದಕ್ಕೆ ತಕ್ಕಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಅತೃಪ್ತಿ ಹೊರ ಹಾಕಿದರು.
ಕೃಷಿ ಇಲಾಖಾ ಅಧಿಕಾರಿಗಳು ಕೇವಲ ಕಛೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುವುದಕ್ಕಷ್ಟೆ ಸೀಮಿತವಾಗಬಾರದು. ಬದಲಾಗಿ ರೈತ ಸಮುದಾಯದೊಂದಿಗೆ ಬೆರೆತು, ಅವರ ಸಂಕಷ್ಟಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವುದು ಅವಶ್ಯವೆಂದು ಸಚಿವರು ಹೇಳಿದರು.
::: ಗೊಬ್ಬರ ಗೊಂದಲ :::
ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಕೀಟನಾಶಕ ಮೊದಲಾದ ಔಷಧಗಳು ಹಾರ್ಡ್ ವೇರ್ ಶಾಪ್‍ನಲ್ಲಿ ಮಾರಾಟವಾದ ಪ್ರಕರಣದ ಕುರಿತು ಕೃಷಿ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೃಷಿ ಔಷಧಿಗಳು ಹಾರ್ಡ್ ವೇರ್ ಶಾಪ್‍ನಲ್ಲಿ ದೊರಕುತ್ತದೆ ಎಂದರೆ ಅದಕ್ಕಿಂತ ದೊಡ್ಡ ದುರಂತವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದು, ಕೃಷಿಗೆ ಅಗತ್ಯವಾದ ಔಷಧಿಗಳನ್ನು ಸೊಸೈಟಿಗಳಲ್ಲಿ ಮಾರಾಟ ಮಾಡುವುದಿದ್ದರು, ಕೃಷಿ ವಿಷಯದಲ್ಲಿ ಪದವೀಧರ ಇಲ್ಲವೆ ಡಿಪ್ಲೋಮ ಪದವಿ ಹೊಂದಿದವರು ಅದನ್ನು ನಿರ್ವಹಿಸಬೇಕಾಗುತ್ತದೆ. ಆದರೆ, ಇಲ್ಲಿ ಆ ರೀತಿ ನಡೆದಿಲ್ಲ. ಕೃಷಿ ಅಧಿಕಾರಿಗಳು ತಕ್ಷಣ ಇಂತಹ ಲೋಪಗಳ ಬಗ್ಗೆ ಎಚ್ಚೆತ್ತು ರೈತ ಪರವಾಗಿ ಕಾರ್ಯನಿರ್ವಹಿಸಬೇಕು, ಇದು ಅವರಿಗೆ ಕೊನೆಯ ಎಚ್ಚರಿಕೆ ಎಂದು ತೀಕ್ಷ್ಣವಾಗಿ ನುಡಿದರು.
ಸಭೆಯಲ್ಲಿ ಶಾಸಕರುಗಳಾದÀ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್‍ಸಿ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಅಧಿಕಾರಿಗಳು ಉಪಸ್ಥಿತರಿದ್ದರು.