ಮೇ 18 ರವರೆಗೆ ಖಾಸಗಿ ಬಸ್ ಗಳು ಸಂಚರಿಸುವುದಿಲ್ಲ : ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರ ಆರಂಭ

05/05/2020

ಮಡಿಕೇರಿ ಮೇ 5 : ಕೊಡಗು ಜಿಲ್ಲೆಯೊಳಗೆ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ನೀಡಿದ್ದರೂ ಮೇ 18ರವರೆಗೆ ಖಾಸಗಿ ಬಸ್ ಗಳು ಸಂಚರಿಸುವುದಿಲ್ಲ. ಆದರೆ ಕೆಎಸ್‍ಆರ್‍ಟಿಸಿ ಬಸ್ ಗಳು ಬುಧವಾರದಿಂದ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಂಚರಿಸಲಿವೆ
ಬುಧವಾರದಿಂದ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದರೂ ಶೇ.50 ರಷ್ಟು ಪ್ರಯಾಣಿಕರನ್ನು ಕರೆದೊಯ್ಯುವ ನಿಯಮದಿಂದಾಗಿ ನಷ್ಟ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ ಓಡಿಸದೇ ಇರಲು ಜಿಲ್ಲಾ ಖಾಸಗಿ ಬಸ್ ಮಾಲಕರುನಿರ್ಧರಿಸಿದ್ದಾರೆ ಎಂದು ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ.
ಬುಧವಾರದಿಂದ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಜಿಲ್ಲೆಯೊಳಗೆ ಮಾತ್ರ ಬಸ್ ಸಂಚಾರ ಇರುತ್ತದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಬಸ್ ಸಂಚಾರ ಇರುವುದಿಲ್ಲ ಎಂದು ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಹೆಚ್. ಗೀತಾ ಅವರು ಹೇಳಿದ್ದಾರೆ.
ಮಡಿಕೇರಿ – ಕುಶಾಲನಗರ, ಮಡಿಕೇರಿ – ಗೋಣಿಕೊಪ್ಪ , ಮಡಿಕೇರಿ – ವೀರಾಜಪೇಟೆ, ಮಡಿಕೇರಿ – ಕೊಡ್ಲಿಪೇಟೆ, ಮಡಿಕೇರಿ – ಸೋಮವಾರಪೇಟೆಗಳಿಗೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲಾಗುವುದು. ಅಗತ್ಯವಿದ್ದಲ್ಲಿ ಗ್ರಾಮೀಣ ಪ್ರದೇಶಗಳಿಗೂ ಬೇಡಿಕೆ ಗಮನಿಸಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಬೇಡಿಕೆ ಇದ್ದಲ್ಲಿ ಕುಶಾಲನಗರ – ಕೂಡಿಗೆ – ಶಿರಂಗಾಲದ ನಡುವ ಸರ್ಕಾರಿ ಬಸ್ ಸಂಚಾರ ಕಲ್ಪಿಸಲಾಗುವುದು ಎಂದು ವಿವರಿಸಿದ್ದಾರೆ.
::: ದರ ಹೆಚ್ಚಳವಿಲ್ಲ :::
ಬಸ್ ನಲ್ಲಿ ಒಟ್ಟು ಸೀಟ್ ಗಳ ಶೇ.50 ರಷ್ಟು ಸೀಟ್ ಗಳಲ್ಲಿ ಮಾತ್ರ ಪ್ರಯಾಣಿಕರು ಸಂಚರಿಸಬಹುದಾಗಿದೆ. ಆದರೆ ಬಸ್ ಪ್ರಯಾಣ ದರದಲ್ಲಿ ಹೆಚ್ಚಳವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಪ್ರಯಾಣಿಕರು ಮಾಸ್ಕ್ ಧರಿಸಿ ಬರುವುದು ಕಡ್ಡಾಯ ಎಂದು ಹೇಳಿದ್ದಾರೆ.