ಪಾಕಿಸ್ತಾನದ ವಾಯುಸೇನೆಗೆ ಹಿಂದೂ ಪೈಲಟ್

ಇಸ್ಲಾಮಾಬಾದ್ ಮೇ 5 : ಪಾಕಿಸ್ತಾನದ ವಾಯುಸೇನೆಗೆ ಇದೇ ಮೊದಲ ಬಾರಿಗೆ ಹಿಂದೂ ಪೈಲಟ್ ವೊಬ್ಬರು ಆಯ್ಕೆಯಾಗಿದ್ದಾರೆ. ರಾಹುಲ್ ದೇವ್ ಎಂಬ ಯುವಕ ಪಾಕಿಸ್ತಾನ ವಾಯುಪಡೆಗೆ ಜನರಲ್ ಡ್ಯೂಟಿ ಪೈಲಟ್ ಆಫೀಸರ್ ಆಗಿ ನೇಮಕವಾಗಿದ್ದಾರೆ ಎಂದು ಪಾಕಿಸ್ತಾನದ ನಿಯತಕಾಲಿಕೆಯೊಂದು ವರದಿ ಮಾಡಿದೆ.
ರಾಹುಲ್ ದೇವ್, ಹಿಂದೂಗಳೇ ಹೆಚ್ಚಾಗಿರುವ ಸಿಂಧೂ ಪ್ರಾಂತ್ಯದ ಥಾರ್ಪಾರ್ಕರ್ ಜಿಲ್ಲೆಯವರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಪಾಕಿಸ್ತಾನ ವಾಯುಪಡೆಗೆ ಹಿಂದೂ ಯುವಕ ಆಯ್ಕೆಯಾಗಿರುವುದಕ್ಕೆ ಅಖಿಲ ಪಾಕಿಸ್ತಾನ ಹಿಂದೂ ಪಂಚಾಯತ್ ಕಾರ್ಯದರ್ಶಿ ರವಿ ದಾವಾನಿ ಸಂತಸ ವ್ಯಕ್ತಪಡಿಸಿದ್ದಾರೆ. ಹಿಂದೂ ಸಮುದಾಯಕ್ಕೆ ಸೇರಿದ ಹಲವು ಮಂದಿ ನಾಗರಿಕ ಸೇವೆ, ಸೇನೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ದೇವಾಲಯಗಳ ಧ್ವಂಸ, ಅಪ್ರಾಪ್ತ ಬಾಲಕಿಯರ ಅಪಹರಣ, ಮದುವೆ, ಬಲವಂತವಾಗಿ ಮತಾಂತರ ಮತ್ತಿತರ ದೌರ್ಜನ್ಯಗಳು ನಡೆಯುತ್ತಿರುವಂತೆಯೇ ಇಂತಹದ್ದೊಂದು ಮಹತ್ವದ ಬೆಳವಣಿಗೆಯಾಗಿದೆ.