ಲಾಕ್‍ಡೌನ್ ನಿಯಮ ಉಲ್ಲಂಘಿಸಿದರೆ ಕ್ರಮ : ಕೊಡಗು ಎಸ್‍ಪಿ ಡಾ. ಸುಮನ್ ಡಿ. ಪನ್ನೇಕರ್ ಎಚ್ಚರಿಕೆ

06/05/2020

ಮಡಿಕೇರಿ ಮೇ 6 : ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ಕೊಡಗು ಜಿಲ್ಲೆಯ ಜನರ ಆರ್ಥಿಕತೆಯ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡದೆ ಕೇವಲ ಎಚ್ಚರಿಕೆ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವ/ ವಾಹನ ಜಪ್ತಿ ಮಾಡುವ ಪ್ರಕ್ರಿಯೆ ಪೊಲೀಸ್ ಇಲಾಖೆ ವತಿಂದ ಕಟ್ಟುನಿಟ್ಟಾಗಿ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆ ಹಸಿರು ವಲಯದಲ್ಲಿ ಇರುವುದರಿಂದ ಮೇ 5 ರಿಂದ ಮೇ 18 ರ ವರೆಗೆ ಜಿಲ್ಲೆಯಲ್ಲಿ ವಾರದ ಎಲ್ಲಾ ದಿನಗಳು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಷರತ್ತುಬದ್ದ ಲಾಕ್‍ಡೌನ್ ವಿನಾಯಿತಿ ನೀಡಲಾಗಿದೆ. ವಿನಾಯಿತಿ ಸಂಧರ್ಭದಲ್ಲಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸದಿದ್ದಲ್ಲಿ ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಮತ್ತು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಸಂಚಾರಿ ನಿಯಮದಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಮೇ 5 ರಿಂದ 18 ರ ವರೆಗೆ ಜಿಲ್ಲೆಯಾದ್ಯಂತ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973 ರ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಕೋವಿಡ್-19 ಸಂಬಂಧ ವಿತರಿಸಲಾಗಿರುಇವ ಪಾಸ್ ಮತ್ತು ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿದಂತೆ ಎಲ್ಲಾ ರೀತಿಯ ಸಾರ್ವಜನಿಕ ಸಂಚಾರವನ್ನು ನಿಷೇಧಿಸಲಾಗಿದೆ.
ಈ ಸಂಧರ್ಭದಲ್ಲಿ ಅಗತ್ಯವಾಗಿ ಸಂಚರಿಸುವ ವಾಹನಗಳ ಜಪ್ತಿ/ ದಂಡ ವಸೂಲಿ ಮಾಡಲಾಗುವುದು. ಜಪ್ತಿಯಾದ ವಾಹನಗಳನ್ನು ಲಾಕ್‍ಡೌನ್ ನಂತರವೇ ಬಿಡುಗಡೆ ಮಾಡಲಾಗುವುದು ಮತ್ತು ಅನಗತ್ಯವಾಗಿ ಮನೆಯಿಂದ ಹೊರಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದ್ದಾರೆ.
ಸಾರ್ವಜನಿಕರು ರಸ್ತೆಯಲ್ಲಿ ಅನಾವಶ್ಯಕವಾಗಿ ತಿರುಗಾಡದೆ, ಹೊರಹೋಗುವಾಗ ಕೊರೊನಾ ಹರಡದಂತೆ ತಡೆಯಲು ಮಾಸ್ಕ್ ಬಳಸಿ ಲಾಕ್‍ಡೌನ್ ವಿನಾಯಿತಿ ಮತ್ತು ಸಂಚಾರಿ ನಿಯಮಗಳನ್ನು ಗೌರವಿಸಿ, ಪಾಲಿಸಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ಕೋರಿದ್ದಾರೆ.