ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನ : ಅರ್ಜಿ ಸಲ್ಲಿಸಲು ಮೇ 30ರ ವರೆಗೆ ಕಾಲಾವಕಾಶ

ಮಡಿಕೇರಿ ಮೇ.06: ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ 2019 ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಕೋವಿಡ್-19 ರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮೇ 30 ರ ವರೆಗೆ ವಿಸ್ತರಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಅವರು ತಿಳಿಸಿದ್ದಾರೆ.
ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿಟಿಪಿ ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಟ 60 ಪುಟಗಳಿರಬೇಕು. ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು. ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ ಇತ್ಯಾದಿ ಸಂಗತಿಗಳಿಗೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ನಾಯಕರುಗಳು ಕುರಿತಂತೆ ನೇರವಾಗಿಯೇ ಆಗಲಿ ಅಥವಾ ಪರೋಕ್ಷವಾಗಿಯೇ ಆಗಲಿ ಮನ ನೋಯಿಸುವಂತಹ ವಿಷಯವಾಗಲಿ ಇರಬಾರದು. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆಗೆ ದಕ್ಕೆ ತರುವಂತಹ ವಿಷಯ/ಸಂಗತಿಗಳು ಪ್ರಸ್ತಾಪವಾಗಿರಬಾರದು. ಪ್ರಾಧಿಕಾರಕ್ಕೆ ಸಲ್ಲಿಸಲ್ಪಡುವ ಅರ್ಜಿಗಳನ್ನು/ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ.
ಅರ್ಜಿಗಳನ್ನು ಮೇ 30 ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ ಜಿ.ಸಿ ರಸ್ತೆ ಬೆಂಗಳೂರು-560002 ಅವರಿಗೆ ಕಳುಹಿಸಿಕೊಡಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ ಜಿ.ಸಿ ರಸ್ತೆ ಬೆಂಗಳೂರು ದೂರವಾಣಿ ಸಂಖ್ಯೆ 080-22484516/ 22017704 ಇಲ್ಲಿ ಸಂಪರ್ಕಿಸಲು ಕೋರಿದೆ.