ಬಟ್ಟೆ ಅಂಗಡಿ ಮತ್ತು ಫ್ಯಾನ್ಸಿ ಸ್ಟೋರ್ಸ್ ತೆರೆಯಲು ಅನುಮತಿ ಬೇಡ : ವಕ್ಫ್ ಮಂಡಳಿ ಮನವಿ

06/05/2020

ಮಡಿಕೇರಿ ಮೇ 6 : ಕೊರೋನಾ ಸೋಂಕನ್ನು ನಿಯಂತ್ರಿಸಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದಾಗಿ ಜಿಲ್ಲೆ ವೈರಸ್ ಮುಕ್ತವಾಗಿರುವುದು ಶ್ಲಾಘನೀಯ. ಆದರೂ ಮುಂಜಾಗೃತಾ ಕ್ರಮವಾಗಿ ಕೊಡಗಿನಲ್ಲಿ ಬಟ್ಟೆ ಅಂಗಡಿ ಮತ್ತು ಫ್ಯಾನ್ಸಿ ಸ್ಟೋರ್ಸ್ ತೆರೆಯಲು ಅನುಮತಿ ನೀಡಬಾರದೆಂದು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ವಕ್ಫ್ ಅಧ್ಯಕ್ಷ ಕೆ.ಎ.ಯಾಕುಬ್, ರಂಜಾನ್ ಹಬ್ಬದ ಪ್ರಯುಕ್ತ ಬಟ್ಟೆಕೊಂಡುಕೊಳ್ಳಲು ಅಧಿಕ ಸಂಖ್ಯೆಯಲ್ಲಿ ಅಂಗಡಿಗಳಲ್ಲಿ ಜನರು ಸೇರುವುದರಿಂದ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಲು ಸಾಧ್ಯವಾಗಲಾರದು. ಆದ್ದುರಿಂದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಟ್ಟೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದೆಂದು ಒತ್ತಾಯಿಸಿದರು.
ಬಟ್ಟೆಯನ್ನು ಕೊಳ್ಳಲು ಜನ ಗುಂಪು ಸೇರುವುದರಿಂದ ಸೋಂಕು ಹರಡುವ ಸಾಧ್ಯತೆಗಳಿದ್ದು, ಜಿಲ್ಲಾಡಳಿತ ಕಳೆದ ಎರಡು ತಿಂಗಳಿನಿಂದ ಪಟ್ಟ ಶ್ರಮವೆಲ್ಲವೂ ವ್ಯರ್ಥವಾಗಬಹುದು ಎಂದು ಗಮನ ಸೆಳೆದರು.
::: ನಮಾಜ್ ಗೆ ಅನುಮತಿ ಬೇಕು :::
ಕೊರೋನಾ ಸೋಂಕಿನಿಂದ ದೇಶದ ಜನ ಸಂಕಷ್ಟದಲ್ಲಿದ್ದು, ವೈದ್ಯಲೋಕ ತನ್ನೆಲ್ಲಾ ಪ್ರಯತ್ನಗಳ ಮೂಲಕ ವೈರಸ್ ನ್ನು ತಡೆಯಲು ಹೋರಾಟವನ್ನೇ ನಡೆಸುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದು ಕೂಡ ಅಗತ್ಯವಾಗಿದೆ. ಆದ್ದರಿಂದ ಕೊಡಗು ಜಿಲ್ಲೆಗೆ ಸೀಮಿತವಾಗಿ ನಿಯಮಾನುಸಾರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ನೆರವೇರಿಸಲು ಅನುಮತಿ ನೀಡಬೇಕು ಎಂದು ಯಾಕುಬ್ ಮನವಿ ಮಾಡಿದರು.
ಜಿಲ್ಲೆಯಲ್ಲಿ ಶೇ 95 ರಷ್ಟು ಮಂದಿ ಕಡುಬಡವರಿದ್ದು, ಕೊರೋನಾ ಲಾಕ್ ಡೌನ್‍ನಿಂದಾಗಿ ಯಾರಿಗೂ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಮಾಯತ್ ಸಮಿತಿಯವರಿಗೆ ಖತೀಬ್, ಮೌಜನ್ ಹಾಗೂ ಸಿಬ್ಬಂದಿಗಳಿಗೆ ಈ ರಂಝಾನ್ ಹಬ್ಬದ ವರೆಗೆ ಪೂರ್ಣವಾಗಿ ವೇತನ ಮತ್ತು ರಂಜಾನ್ ತಿಂಗಳ ಹೆಚ್ಚುವರಿ ವೇತನವನ್ನು ನೀಡಬೇಕಾಗಿದೆ. ಕೊರೋನಾ ಸೋಂಕು ಭೀತಿಯಿಂದ ಚಂದಾ ವಸೂಲಾತಿ ಕೂಡ ಸಾಧ್ಯವಾಗದೆ ಇರುವುದರಿಂದ ಖತೀಬ್, ಮೌಜನ್ ಹಾಗೂ ಸಿಬ್ಬಂದಿ ವರ್ಗದವರಿಗೆ ರಾಜ್ಯ ವಕ್ಫ್ ಮಂಡಳಿಯಿಂದ ವಿಶೇಷ ಪ್ಯಾಕೇಜ್ ನೀಡುವಂತೆಯೂ ಯಾಕುಬ್ ಮನವಿ ಮಾಡಿದರು.
ಬೇಡಿಕೆಗಳ ಮನವಿ ಪತ್ರವನ್ನು ವಕ್ಫ್ ಮಂಡಳಿಯ ರಾಜ್ಯಾಧ್ಯಕ್ಷರಿಗೂ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಸಮಿತಿಯ ಸದಸ್ಯರಾದ ಅಫೀಲ್ ಸಹದಿ ಕೊಳಕೇರಿ, ಸಿ.ಎಂ.ಅಬ್ದುಲ್ ಹಮೀದ್ ಸುಂಟಿಕೊಪ್ಪ ಹಾಗೂ ಎಂ.ಎ.ಮೊಹಿದು, ಬೆಟ್ಟಗೇರಿ ಹಾಜರಿದ್ದರು.